ಸಬ್‌ಮೆರಿನ್ ವಿವಾದ: ಫ್ರಾನ್ಸ್- ಅಮೆರಿಕ ರಾಜತಾಂತ್ರಿಕ ಸಮರ

ಸಬ್‌ಮೆರಿನ್ ವಿವಾದ: ಫ್ರಾನ್ಸ್- ಅಮೆರಿಕ ರಾಜತಾಂತ್ರಿಕ ಸಮರ

ಪ್ಯಾರಿಸ್: ಸಬ್‌ಮೆರಿನ್ ಗುತ್ತಿಗೆ ರದ್ದುಪಡಿಸಿರುವ ಅಮೆರಿಕ ಕ್ರಮದ ವಿರುದ್ಧ ಫ್ರಾನ್ಸ್ ಬಹಿರಂಗ ರಾಜತಾಂತ್ರಿಕ ಸಮರ ಸಾರಿದ್ದು, ಅಮೆರಿಕ ಹಾಗೂ ಆಸ್ಟ್ರೇಲಿಯಾದಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿದೆ.

 

ಫ್ರಾನ್ಸ್‌ನಿಂದ ಸಬ್‌ಮೆರಿನ್‌ಗಳನ್ನು ಖರೀದಿಸುವ ನಿರ್ಧಾರದಿಂದ ಕ್ಯಾಬ್‌ ಬೆರ್ರಾ ಹಿಂದೆ ಸರಿದು ಅಮೆರಿಕದಿಂದ ಖರೀದಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾಕ್ರೋನ್ ರಾಯಭಾರಿಯನ್ನು ವಾಪಾಸು ಕರೆಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವಿದೇಶಾಂಗ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ಪ್ರಕಟಿಸಿದ್ದಾರೆ.

 

“ಸೆಪ್ಟೆಂಬರ್ 15ರಂದು ಅಮೆರಿಕ ಹಾಗೂ ಆಸ್ಟ್ರೇಲಿಯಾ ಮಾಡಿದ ಘೋಷಣೆಯ ವಿಶೇಷ ಗಂಭೀರತೆ ಹಿನ್ನೆಲೆಯಲ್ಲಿ ತಕ್ಷಣವೇ ಇಬ್ಬರು ಫ್ರಾನ್ಸ್ ರಾಯಭಾರಿಗಳನ್ನು ವಾಪಾಸು ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿವರಿಸಿದ್ದಾರೆ.

 

ಓಷನ್-ಕ್ಲಾಸ್ ಸಬ್‌ಮೆರಿನ್ ಯೋಜನೆಯಡಿ ಆಸ್ಟ್ರೇಲಿಯಾ ಹಾಗೂ ಫ್ರಾನ್ಸ್ 2016ರಿಂದಲೂ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ ಮಿತ್ರ ರಾಷ್ಟ್ರ ಹಾಗೂ ಪಾಲುದಾರ ದೇಶದ ಇಂಥ ನಡವಳಿಕೆ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.

 

“ಇದರ ಪರಿಣಾಮ, ನಮ್ಮ ಮೈತ್ರಿ, ಪಾಲುದಾರ ದೇಶ ಹಾಗೂ ಯೂರೋಪ್‌ಗಾಗಿ ಇಂಡೋ-ಫೆಸಿಫಿಕ್ ಮಹತ್ವ ಎಂಬ ಪರಿಕಲ್ಪನೆಯ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 

ಬುಧವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ-ಅಮೆರಿಕ- ಬ್ರಿಟನ್‌ನ ಹೊಸ ರಕ್ಷಣಾ ಮೈತ್ರಿಯನ್ನು ಘೋಷಿಸಿದ್ದರು ಮತ್ತು ಆಸ್ಟ್ರೇಲಿಯಾಗೆ ಅಮೆರಿಕದ ಅಣ್ವಸ್ತ್ರ ಸಬ್‌ಮೆರಿನ್ ತಂತ್ರಜ್ಞಾನ, ಸೈಬರ್ ರಕ್ಷಣಾ ತಂತ್ರಜ್ಞಾನ, ಅನ್ವಯಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮತ್ತು ಸಮುದ್ರದ ಕೆಳಗಿನ ಸಾಮರ್ಥ್ಯ ಅಭಿವೃದ್ಧಿಪಡಿಸುವ ತಂತ್ರಜ್ಞಾನ ನೀಡುವುದಾಗಿ ಪ್ರಕಟಿಸಿದ್ದರು.

 

ಚೀನಾ ಪ್ರಾಬಲ್ಯವನ್ನು ಹತ್ತಿಕ್ಕುವ ಕ್ರಮ ಎಂದು ಇದನ್ನು ಬಣ್ಣಿಸಲಾಗಿತ್ತು. ಅಮೆರಿಕದ ಈ ನಡೆ ಫ್ರಾನ್ಸ್‌ನ ಮುನಿಸಿಗೆ ಕಾರಣವಾಗಿದೆ. ಆಸ್ಟ್ರೇಲಿಯಾಗೆ 50 ಶತಕೋಟಿ ಆಸ್ಟ್ರೇಲಿಯನ್ ಡಾಲರ್ ಮೌಲ್ಯದ ಸಾಂಪ್ರದಾಯಿಕ ಸಬ್‌ಮೆರಿನ್ ಪೂರೈಸುವ ಗುತ್ತಿಗೆಯನ್ನು ಫ್ರಾನ್ಸ್ ಕಳೆದುಕೊಂಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version