ಹರ್ಯಾಣದಲ್ಲಿ ರೈತರ ಮೇಲೆ ಲಾಠಿಚಾರ್ಜ್ ಎರಡನೇ ಜಲಿಯನ್ ವಾಲಾಬಾಗ್ ದುರಂತ: ಶಿವಸೇನೆ
ಕೋಲ್ಕತಾ, ಅ. 30: ಹರ್ಯಾಣದಲ್ಲಿ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ನಡೆಸಿರುವುದನ್ನು ‘ಎರಡನೇ ಜಲಿಯನ್ವಾಲಾ ಬಾಗ್’ ಎಂದು ಸೋಮವಾರ ಬಣ್ಣಿಸಿರುವ ಶಿವಸೇನೆ, ಎಂ.ಎಲ್ ಖಟ್ಟರ್ ಅವರ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ ಎಂದು ಹೇಳಿದೆ. ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಪ್ರಧಾನಿ ನರೇಂದ್ರ ಮೋದಿ ಅವರು ಅಮೃತಸರದಲ್ಲಿ ನವೀಕೃತ ಜಲಿಯನ್ವಾಲಾ ಬಾಗ್ ಸಂಕೀರ್ಣ ಉದ್ಘಾಟಿಸಿದ ಸಂದರ್ಭ ಹರ್ಯಾಣದಲ್ಲಿ ಎರಡನೇ ಜಲಿಯನ್ ವಾಲಾ ಬಾಗ್ ನಡೆದಿದೆ ಎಂದು ಹೇಳಿದೆ.
ಸರಕಾರ ಬಿತ್ತಿದ ಕ್ರೌರ್ಯದ ಬೀಜ ಹುಳಿ ಹಣ್ಣನ್ನು ನೀಡದೇ ಇರದು. ಇದು ಖಚಿತ. ಮನೋಹರ್ ಲಾಲ್ ಖಟ್ಟರ್ ಅವರ ಸರಕಾರ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ ಎಂದು ಸೇನೆ ಹೇಳಿದೆ. ಮುಖ್ಯಮಂತ್ರಿ ಖಟ್ಟರ್ ವಿರುದ್ಧ ಘೋಷಣೆಗಳನ್ನು ಕೂಗಿರುವುದಕ್ಕೆ ಪೊಲೀಸರು ಲಾಠಿ ಬೀಸಿ ರೈತರ ತಲೆ ಒಡೆದಿದ್ದಾರೆ. ಇದಕ್ಕಿಂತ ಮೊದಲು ಕೇಂದ್ರ ಸಚಿವರೊಬ್ಬರು ಮಹಾರಾಷ್ಟ್ರದ ಮುಖ್ಯಮಂತ್ರಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಆದರೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡರೆ ರಾಜ್ಯ ಸರಕಾರವನ್ನು ಅಸಹಿಷ್ಣು ಎಂದು ಕರೆಯಲಾಗುತ್ತದೆ. ರೈತರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಬಗ್ಗೆ ವಿಮರ್ಶಕರು ಮೌನವಾಗಿದ್ದಾರೆ ಯಾಕೆ? ಎಂದು ಸೇನೆ ಪ್ರಶ್ನಿಸಿದೆ.
‘‘ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂದೆಗೆಯುವಂತೆ, ಕೃಷಿ ಕ್ಷೇತ್ರವನ್ನು ಖಾಸಗೀಕರಿಸುವುದನ್ನು ನಿಲ್ಲಿಸುವಂತೆ, ಆಯ್ಕೆಯ ಕಾರ್ಪೊರೇಟ್ ಸಂಸ್ಥೆಗಳು ಎಪಿಎಂಸಿಗಳು ಹಾಗೂ ಎಂಎಸ್ಪಿ ಕಾಯ್ದೆಯನ್ನು ತನ್ನ ಮೇಲ್ವಿಚಾರಣೆಗೆ ತೆಗೆದುಕೊಳ್ಳುವುದು ತಡೆಯುವಂತೆ ಆಗ್ರಹಿಸಿ ರೈತರು ದಿಲ್ಲಿ ಸಮೀಪದ ಗಾಝಿಪುರ ಗಡಿಯಲ್ಲಿ ಕಳೆದ 9 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅವರನ್ನು ಪ್ರಧಾನಿ ಮೋದಿ ಇದುವರೆಗೆ ಭೇಟಿಯಾಗಿಲ್ಲ. ಸರಕಾರದ್ದು ಕಲ್ಲು ಹೃದಯ. ಸರಕಾರ ಜನಾಶೀರ್ವಾದ ಬಯಸುತ್ತಿದೆ. ರೈತರ ತಲೆ ಒಡೆಯುವ ಮೂಲಕ ಸರಕಾರ ಜನಾಶೀರ್ವಾದ ಪಡೆಯಲು ಸಾಧ್ಯವೇ?’’ ಸಂಪಾದಕೀಯ ಪ್ರಶ್ನಿಸಿದೆ.