ಸಿದ್ದರಾಮಯ್ಯ ಮತ್ತೆ ಸಿ.ಎಂ ಆಗುವ ಕನಸು ಕಾಣತಾ ಇದ್ದಾರೆ – ಸಚಿವ ಹೆಬ್ಬಾರ್ ವ್ಯಂಗ್ಯ
ಕಾರವಾರ: ಸಿದ್ದರಾಮಯ್ಯಗೆ ಮತ್ತೆ ಕರ್ನಾಟಕದ ಸಿಎಂ ಆಗುವ ಹುಮ್ಮಸ್ಸು ಬಂದಿದೆ. ಆದ್ದರಿಂದಲೇ ಅವರು ಮನಸ್ಸಿಗೆ ಕಂಡಂತೆ ಹೇಳುತ್ತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕಾರ್ಮಿಕ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಸಚಿವ ಹೆಬ್ಬಾರ್ ಕಾರವಾರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯನವರು ಆರೋಪಿಸಿದ್ದ ಬಿಜೆಪಿಯವರು ತಾಲಿಬಾನ್ ಹಾಗೂ ಹಿಟ್ಲರ್ ಸಂಸ್ಕೃತಿಯವರು ಎಂಬ ಮಾತಿಗೆ ತಿರುಗೇಟು ನೀಡುತ್ತಾ ಮಾತನಾಡಿದರು. ಅವರ ಹೇಳಿಕೆಗಳಿಂದ ಏನೂ ಆಗಲ್ಲ. ಅವರು ವಿಧಾನ ಸಭೆಯಲ್ಲೂ ಇದನ್ನೇ ಹೇಳಿದ್ದರು. ಅದಕ್ಕೆ ಮುಖ್ಯಮಂತ್ರಿಯವರೂ ಅಲ್ಲಿ ಸರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಅವರಿಗೆ ಸಮಾಧಾನವಾದಂತೆ ಕಾಣುತ್ತಿಲ್ಲ ಎಂದರು.
ಇನ್ನು ಭಾರತ್ ಬಂದ್ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಬ್ಬಾರ್, ಭಾರತ ಬಂದ್ ಕರ್ನಾಟಕದಲ್ಲಿ ಯಶಸ್ವಿಯಾಗಿಲ್ಲ. ಅನೇಕ ಸ್ವಯಂಘೋಷಿತ ನಾಯಕರು ಭಾರತ ಬಂದ್‍ಗೆ ಕರೆಕೊಟ್ಟು ಸಂಪೂರ್ಣ ವಿಫಲತೆ ಕಂಡಿದ್ದಾರೆ. ಭಾರತ ಬಂದ್‍ನಿಂದ ಯಾವ ಸಾಧನೆಯೂ ಆಗಿಲ್ಲ. ಕಳೆದ ಒಂದು ವರ್ಷದಿಂದ ಭಾರತ ಬಂದಾಗಿಯೇ ಇದೆ. ಮತ್ತೆ ಬಂದ್ ಮಾಡುವುದರಿಂದ ಶಿಕ್ಷಣ, ವ್ಯಾಪಾರ- ಉದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ರಾಜ್ಯದ ಹಾಗೂ ದೇಶದ ಜನ ಈ ಭಾರತ ಬಂದ್ ಅನ್ನು ಒಪ್ಪಿಕೊಂಡಿಲ್ಲ, ಪ್ರಬಲವಾಗಿ ವಿರೋಧಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಕೆಲವರು ನೈತಿಕವಾಗಿ ಬೆಂಬಲವನ್ನಷ್ಟೇ ನೀಡಿದ್ದಾರೆ. ಯಾವ ಉದ್ದೇಶಕ್ಕೆ ಭಾರತ ಬಂದ್ ಮಾಡಿದ್ದಾರೋ ಈ ಬಗ್ಗೆ ಸರ್ಕಾರ ವಿಧಾನಸಭೆಯ ಒಳಗೆ ಹಾಗೂ ಹೊರಗೆ ತನ್ನ ಪ್ರತಿಕ್ರಿಯೆ ನೀಡಿದೆ. ಒಟ್ಟಾರೆ ದೇಶದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ನಿಶ್ಚಿತ ಕೆಲಸ ಮಾಡಲಿದೆ ಎಂದು ಹೇಳಿದರು.