ರಾಜ್ಯ ನಾಯಕರ ಹೆಲಿಕಾಪ್ಟರ್ ನಿರ್ವಹಣೆಗೆ ಪ್ರತ್ಯೇಕ ವಿಭಾಗ: ಡಿಸಿಜಿಎ ಆದೇಶವನ್ನು ಇನ್ನೂ ಜಾರಿಗೊಳಿಸದ ಸರಕಾರ
ಬೆಂಗಳೂರು, : ವೈಮಾನಿಕ ಪರಿಣಿತರನ್ನೊಳಗೊಂಡ ಪ್ರತ್ಯೇಕ ವಿಭಾಗ ತೆರೆದು ಮುಖ್ಯಮಂತ್ರಿ, ರಾಜ್ಯಪಾಲರ ಹೆಲಿಕಾಪ್ಟರ್ ಪ್ರಯಾಣ ಕುರಿತು ನಿರ್ವಹಣೆ ಮಾಡುವುದು ಅತ್ಯಗತ್ಯ ಮತ್ತು ವಿವಿಐಪಿಗಳ ಭದ್ರತೆ ದೃಷ್ಟಿಯಿಂದ ತಕ್ಷಣವೇ ಪ್ರತ್ಯೇಕ ವಿಭಾಗ ತೆರೆಯಬೇಕು’ ಎಂದು ನಾಗರಿಕ ವಿಮಾನಯಾನ ವಿಭಾಗದ ಕೇಂದ್ರ ನಿರ್ದೇಶಕರು (ಡಿಜಿಸಿಎ) 5 ವರ್ಷಗಳ ಹಿಂದೆಯೇ ನೀಡಿದ್ದ ಸಲಹೆಯನ್ನು ರಾಜ್ಯ ಸರಕಾರವು ಇದುವರೆಗೂ ಜಾರಿಗೊಳಿಸದೇ ನಿರ್ಲಕ್ಷ್ಯ ವಹಿಸಿದೆ.
ಸೇನಾ ಪಡೆಯ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಅರಣ್ಯದ ವ್ಯಾಪ್ತಿಯ (ಕೂನೂರು ಬಳಿ) ಪತನಗೊಂಡ ಬೆನ್ನಲ್ಲೇ ಕರ್ನಾಟಕದಲ್ಲಿ ಇದುವರೆಗೂ ವೈಮಾನಿಕ ಪರಿಣಿತರನ್ನೊಳಗೊಂಡ ಪ್ರತ್ಯೇಕ ವಿಭಾಗ ತೆರೆಯಬೇಕು ಎಂದು ಡಿಜಿಸಿಎ ನೀಡಿದ್ದ ಸಲಹೆಯನ್ನು ಪಾಲಿಸದಿರುವುದು ಇದೀಗ ಮುನ್ನೆಲೆಗೆ ಬಂದಿದೆ.
ಹೆಲಿಕಾಪ್ಟರ್‌ಗಳ ಕುರಿತು ತಾಂತ್ರಿಕವಾಗಿ ಪರಿಣಿತರಲ್ಲದ ಕಾರಣ ಟೆಂಡರ್ ಸೇರಿದಂತೆ ಇನ್ನಿತರ ಕಾರ್ಯ ನಿರ್ವಹಿಸಲು ಆಗುವುದಿಲ್ಲ ಎಂದು ಈ ಹಿಂದೆ ಹಲವು ಬಾರಿ ಸ್ಪಷ್ಟವಾಗಿ ಸರಕಾರಕ್ಕೆ ತಿಳಿಸಿದ್ದ ಲೋಕೋಪಯೋಗಿ ಇಲಾಖೆಯೇ ಹೆಲಿಕಾಪ್ಟರ್ ಸೇವೆ ಪಡೆಯುವ ಸಂಬಂಧ ಟೆಂಡರ್ ಕರೆಯಲು ಇದೀಗ ಮುಂದಾಗಿದೆ. ಈ ಸಂಬಂಧ ‘the-file.in’ಗೆ ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
‘ಹೆಲಿಕಾಪ್ಟರ್ ಸೇವೆ ಒದಗಿಸುವ ಸಂಬಂಧ ಟೆಂಡರ್ ಕರೆಯುವ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಪ್ರಕ್ರಿಯೆಯು ವಿಳಂಬವಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಟೆಂಡರ್ ಕರೆಯಲು ಅನುಮತಿ ನೀಡಿದೆ. ಟೆಂಡರ್ ಯಾವಾಗ ಕರೆಯಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ. ನೀತಿ ಸಂಹಿತೆ ಕೊನೆಗೊಂಡ ಬಳಿಕ ಪ್ರಕ್ರಿಯೆಗೆ ಚಾಲನೆ ಸಿಗಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘the-file.in’ ಪ್ರತಿನಿಧಿಗೆ ಮಾಹಿತಿ ಒದಗಿಸಿದ್ದಾರೆ.
ಮುಖ್ಯಮಂತ್ರಿ, ರಾಜ್ಯಪಾಲರು, ಗಣ್ಯಾತಿಗಣ್ಯರ ಪ್ರಯಾಣ ಮತ್ತು ಪ್ರವಾಸಕ್ಕೆ ಖಾಸಗಿ ಏಜೆನ್ಸಿ ಜಿಎಂಪಿ ಸೇವಾ ಕಂಪೆನಿಯಿಂದ ಹೆಲಿಕಾಪ್ಟರ್ ಸೇವೆಯನ್ನು ಪಡೆಯಲು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಂಜೂರಾತಿ ದೊರೆತಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಅಧಿಕೃತವಾದ ಏಜೆನ್ಸಿಯು ಹೆಲಿಕಾಪ್ಟರ್ ಸೇವೆಯನ್ನು ಒದಗಿಸಲಿದೆ ಎಂದು ತಿಳಿದು ಬಂದಿದೆ.
ಜಾರ್ಖಂಡ್‌ನಂತಹ ಚಿಕ್ಕ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಗಣ್ಯರ ಅಧಿಕೃತ ಉಪಯೋಗಕ್ಕೆ ಹೆಲಿಕಾಪ್ಟರ್ ಪಡೆಯಲು ಪ್ರತ್ಯೇಕವಾದ ವಿಭಾಗ ಹೊಂದಿದೆ. ಆದರೆ, ರಾಜ್ಯದಲ್ಲಿ ಇದುವರೆಗೂ ಪ್ರತ್ಯೇಕ ವಿಭಾಗ ತೆರೆಯಲು ಮುಂದಾಗಿಲ್ಲ. ಅದೇ ರೀತಿ ಹೆಲಿಕಾಪ್ಟರ್ ನಿರ್ವಹಣೆ, ತಾಂತ್ರಿಕ ಅರ್ಹತೆ ಮತ್ತು ಈ ಕುರಿತು ಏಜೆನ್ಸಿಗಳೊಂದಿಗೆ ಸಮಾಲೋಚಿಸಿ ದರ ಸಂಧಾನ, ಸೂಕ್ತ ಭದ್ರತೆ ಒದಗಿಸುವ ಕುರಿತು ಬೆಂಗಳೂರಿನ ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಶಾಲೆಯ ನಿರ್ದೇಶಕರು ಸಲ್ಲಿಸಿದ್ದ ಪ್ರಸ್ತಾವದ ಕಡೆ ಸರಕಾರ ಕಣ್ಣೆತ್ತಿಯೂ ನೋಡಿಲ್ಲ ಎಂದು ಗೊತ್ತಾಗಿದೆ.
ಅನನುಭವಿ ಪೈಲಟ್‌ಗಳು ಹೆಲಿಕಾಪ್ಟರ್‌ನ್ನು ಚಲಾಯಿಸಿರುವ ಬಗ್ಗೆ ರಾಜ್ಯ ಗುಪ್ತಚರ ದಳದ ಹೆಚ್ಚುವರಿ ನಿರ್ದೇಶಕರಾಗಿದ್ದ ಎ.ಎಂ.ಪ್ರಸಾದ್ ಅವರು ಲೋಕೋಪಯೋಗಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ 5 ವರ್ಷದ ಹಿಂದೆಯೇ ಅಂದರೆ 2016ರ ಜುಲೈ 20ರಂದು ಗೌಪ್ಯ ಪತ್ರ ಬರೆದು ಎಚ್ಚರಿಸಿದ್ದರು. ನಾಗರಿಕ ವಿಮಾನಯಾನ ವಿಭಾಗ ರೂಪಿಸಿರುವ (ಡಿಜಿಸಿಎ) ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಸೂಚಿಸಿದ್ದರು. ಆದರೆ ಅಧಿಕಾರಶಾಹಿಯು ಈ ಸೂಚನೆಯನ್ನು ಸತತವಾಗಿ ನಿರ್ಲಕ್ಷ್ಯಿಸಿದೆ.
ಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ವಿಐಪಿ, ವಿವಿಐಪಿಗಳಿಗೆ ಒದಗಿಸುವ ಹೆಲಿಕಾಪ್ಟರ್‌ನ್ನು ಚಲಾಯಿಸುವ ಪೈಲಟ್‌ಗಳಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅರ್ಹತೆ ಮತ್ತು ಅನುಭವವನ್ನು ನಿಗದಿಪಡಿಸಿದೆ. ಹೆಲಿಕಾಪ್ಟರ್‌ನ್ನು ಇಂತಿಷ್ಟು ಗಂಟೆಗಳವರೆಗೆ ಚಲಾಯಿಸಿ ಅನುಭವ ಹೊಂದಿರುವ ಪೈಲಟ್‌ಗಳನ್ನೇ ವಿಐಪಿ ಮತ್ತು ವಿವಿಐಪಿಗಳಿಗೆ ನೇಮಿಸಬೇಕು ಎಂದು ಸೂಚಿಸಿತ್ತು ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
2016ರ ಮೇ 6 ಮತ್ತು ಜೂನ್ 27ರಂದು ಚಿತ್ರದುರ್ಗ ಮತ್ತು ಮೈಸೂರು ಪ್ರವಾಸಕ್ಕೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್‌ನ್ನು (ಇಸಿ 135 ಮತ್ತು ಫಿನಾಮ್ 100 ವಿಟಿ ಎವಿಎಸ್) ಬಳಸಿದ್ದರು. ಈ ಎರಡೂ ದಿನದಂದು ಅವರಿದ್ದ ಹೆಲಿಕಾಪ್ಟರ್‌ನ್ನು ಅನನುಭವಿ ಪೈಲಟ್‌ಗಳು ಎಂದು ಹೇಳಲಾಗಿರುವ ಅರ್ಜುನ್, ಶಿಲ್ಪಿ ಬಿಸ್ನಾಯ್, ದಿಲೀಪ್ ಗ್ರೇವಾಲ್, ಸಂಜಯಕುಮಾರ್ ಎಂಬವರು ಚಲಾಯಿಸಿದ್ದರು. ಡಿಜಿಸಿಎ ನಿಗದಿಪಡಿಸಿದ್ದ ಅನುಭವ ಮತ್ತು ಅರ್ಹತೆ ಈ ಪೈಲಟ್‌ಗಳಿಗೆ ಇರಲಿಲ್ಲ. ಆದರೂ ಅವರು ಹೆಲಿಕಾಪ್ಟರ್‌ನ್ನು ಚಲಾಯಿಸಿದ್ದರು’ ಎಂದು ಗೌಪ್ಯ ಪತ್ರದಲ್ಲಿ ಗಮನ ಸೆಳೆಯಲಾಗಿತ್ತು. ಅಷ್ಟೇ ಅಲ್ಲದೆ, ಅವರು ಬಳಸಿದ್ದ ಹೆಲಿಕಾಪ್ಟರ್ ಕೂಡ ಕನಿಷ್ಟ ಅಗತ್ಯತೆಗಳಿಂದ ಕೂಡಿತ್ತು ಎಂದು ಪಿಡಬ್ಲ್ಯೂಡಿ ಹಿರಿಯ ಅಧಿಕಾರಿ ‘the-file.in’ ಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಸಚಿವಾಲಯದ ಕೋರಿಕೆ ಮೇರೆಗೆ ಖಾಸಗಿ ಏಜೆನ್ಸಿ ತನ್ನ ಬಳಿ ತಕ್ಷಣಕ್ಕೆ ಲಭ್ಯ ಇರುವ ಹೆಲಿಕಾಪ್ಟರ್‌ನ್ನು ಕಳಿಸುತ್ತದೆ. ಆದರೆ ಹೆಲಿಕಾಪ್ಟರ್ ಒಂದೇ ಕಂಪೆನಿಯದ್ದಾಗಿರುವುದಿಲ್ಲ. ಪ್ರತಿ ಬಾರಿಯೂ ಬೇರೆ ಬೇರೆ ಕಂಪೆನಿಗಳ ಪೈಲಟ್‌ಗಳು ಬರುವ ಕಾರಣ, ಅವರ ಹಿನೆ್ನಲೆಯೂ ಗೊತ್ತಿರುವುದಿಲ್ಲ. ಹಾಗೆಯೇ ಹೆಲಿಕಾಪ್ಟರ್‌ನ ತಾಂತ್ರಿಕ ಗುಣಮಟ್ಟ, ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಯಾವುದೇ ಖಾತ್ರಿಯೂ ಇಲ್ಲವಾಗಿದೆ. ಒಂದು ವೇಳೆ ದುರಂತ ಸಂಭವಿಸಿದಲ್ಲಿ ಯಾರು ಹೊಣೆ ಹೊತ್ತುಕೊಳ್ಳುತ್ತಾರೆ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.
ಮಾರ್ಗಸೂಚಿಗಳಿಲ್ಲ
ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಗಣ್ಯರ ಅಧಿಕೃತ ಉಪಯೋಗಕ್ಕೆ ವಿವಿಧ ಖಾಸಗಿ ಏಜೆನ್ಸಿಗಳಿಂದ ವೆಟ್ ಲೀಸ್ ಮತ್ತು ಬಾಡಿಗೆ ಆಧಾರದ ಮೇಲೆ ಹೆಲಿಕಾಪ್ಟರ್‌ನ್ನು ಪಡೆಯುತ್ತಿರುವ ರಾಜ್ಯ ಸರಕಾರವು ಈ ಸಂಬಂಧ ಯಾವುದೇ ‘ಮಾರ್ಗಸೂಚಿ’ಗಳನ್ನು ರೂಪಿಸಿಲ್ಲ. ಬಾಡಿಗೆ ಆಧಾರದ ಮೇಲೆ ಹೆಲಿಕಾಪ್ಟರ್ ಪಡೆಯುತ್ತಿದೆಯಾದರೂ, ಖಾಸಗಿ ಏಜೆನ್ಸಿ ತನ್ನ ಬಳಿ ಆ ಕ್ಷಣಕ್ಕೆ ಯಾವ ಹೆಲಿಕಾಪ್ಟರ್ ಇರುವುದೋ ಅದನ್ನೇ ಕಳಿಸುತ್ತಿದೆ. ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಇತರೆ ಗಣ್ಯಾತಿಗಣ್ಯರ ಅಧಿಕೃತ ಉಪಯೋಗಕ್ಕೆ ಹೆಲಿಕಾಪ್ಟರ್‌ನ್ನು ಮೀಸಲಿರಿಸಿಲ್ಲ ಎಂಬುದು ಗೊತ್ತಾಗಿದೆ.
4 (ಜಿ) ವಿನಾಯಿತಿಯಲ್ಲೇ ಆಸಕ್ತಿ ವಹಿಸಿದ ಇಲಾಖೆ
‘2010ರ ಅ. 1ರಿಂದ ಒಂದು ವರ್ಷದ ಅವಧಿಯವರೆಗೆ ಮಾತ್ರ 4(ಜಿ) ವಿನಾಯಿತಿ ನೀಡಿ ಆ ಅವಧಿಯೊಳಗೆ ಟೆಂಡರ್ ಕರೆದು ಏಜೆನ್ಸಿ ನಿಗದಿಪಡಿಸುವುದು ಸೂಕ್ತ’ ಎಂದು ಆರ್ಥಿಕ ಇಲಾಖೆ ಆಡಳಿತ ಇಲಾಖೆಗೆ ತಿಳಿಸಿತ್ತು. ಆದರೆ, ಟೆಂಡರ್ ಪ್ರಕ್ರಿಯೆ ನಡೆಸುವಲ್ಲಿ ‘ವಿಳಂಬ’ವಾಗುತ್ತಿದೆ ಎಂಬ ಕಾರಣ ನೀಡಿದ್ದ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ(ಡಿಪಿಎಆರ್) ಅಧಿಕಾರಿಗಳು, ಟೆಂಡರ್ ಕರೆಯದೇ 2011ರಿಂದ 2021ರ ಇದುವರೆಗೂ ಪ್ರತಿ ವರ್ಷವೂ 4 (ಜಿ) ವಿನಾಯಿತಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಟೆಂಡರ್ ನಡೆದಿಲ್ಲ
2009ರಿಂದ 2021ರವರೆಗೆ ಟೆಂಡರ್ ನಡೆಸದೆಯೇ ಒಎಸ್‌ಎಸ್, ವಿಆರ್‌ಎಲ್, ಚಿಪ್ಸನ್, ಸ್ವಜಾಸ್, ಡೆಕ್ಕನ್, ಎಸ್‌ಎಸ್‌ಎ, ಪವನ್‌ಹನ್ಸ್ ಮತ್ತು ಜಿಎಂಆರ್ ಏಜೆನ್ಸಿಗಳಿಂದ ಹೆಲಿಕಾಪ್ಟರ್‌ನ್ನು ನೇರವಾಗಿ ಪಡೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ‘the-file.in’ಗೆ ಮಾಹಿತಿ ನೀಡಿದ್ದಾರೆ.