ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಸ್ಪರ್ಧೆ:ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಖರ್ಗೆ ಪ್ರತಿಪಾದನೆ

ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಸ್ಪರ್ಧೆ:ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಖರ್ಗೆ ಪ್ರತಿಪಾದನೆ

ಹೊಸದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳ ಒಕ್ಕೂಟ ರಚನೆಯಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕಣಕ್ಕಿಳಿಯುತ್ತೇವೆ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

 

ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಸಭೆಯ ಅನಂತರ ಖರ್ಗೆಯವರ ಈ ಹೇಳಿಕೆ ಮಹತ್ವ ಪಡೆದಿದೆ.

 

ನಮ್ಮ ಪಕ್ಷ ಸಕಾರಾತ್ಮಕ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವ ಪಾತ್ರವನ್ನು ವಹಿಸುತ್ತ ಬಂದಿದೆ. ವಿಪಕ್ಷಗಳ ಒಕ್ಕೂಟ ರಚನೆಯಲ್ಲೂ ನಮ್ಮ ನಿಲುವು ಅದೇ. ಕಾಂಗ್ರೆಸ್‌ನ ಹಿಂದಿನ ವರ್ಚಸ್ಸು ಮರಳಲಿದೆ. ಚುನಾವಣೆಗಳನ್ನು ಒಗ್ಗಟ್ಟಾಗಿ ಎದುರಿಸಲಿದ್ದೇವೆ ಎಂದು ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

 

ಮುಂಗಾರು ಅಧಿವೇಶನ ದಲ್ಲಿ ಪೆಗಾಸಸ್‌, ಕೊರೊನಾ ಗಳನ್ನು ಸರಕಾರ ನಿರ್ವಹಿಸಿದ ರೀತಿಯನ್ನು ಜನರಿಗೆ ಯಶಸ್ವಿ ಯಾಗಿ ವಿವರಿಸಿದ್ದೇವೆ. ವಿಪಕ್ಷಗಳು ಕೃಷಿ ಕಾಯ್ದೆ ರದ್ದು, ವಾಕ್‌ ಸ್ವಾತಂತ್ರ್ಯದ ರಕ್ಷಣೆ ಬಗ್ಗೆ ಚರ್ಚೆ ನಡೆಸಲು ಮನವಿ ನೀಡಿದ್ದೆವು. ಆದರೆ ಅಧಿವೇಶನ ಸರಿಯಾಗಿ ನಡೆಯದೆ ಇರಲು ಸರಕಾರದ ಧೋರಣೆ ಕಾರಣ ಎಂದು ಖರ್ಗೆ ಹೇಳಿದ್ದಾರೆ.

 

ಜಾತಿ ಗಣತಿ ಬೇಕು :

 

ಯಾರು ಬಡವರು, ಯಾರು ಯಾವ ಉದ್ಯೋಗ ನಡೆಸುತ್ತಿದ್ದಾರೆ ಎಂಬುದನ್ನು ಅರಿಯಲು ಜಾತಿ ಗಣತಿ ಬೇಕು ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

 

ಸಿಎಂ ಬದಲಾವಣೆಯಿಂದ ಕರ್ನಾಟಕ ಬದಲಾಗಿಲ್ಲ :

ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಾಯಿಸಿದೆ. ಆದರೆ ಅದರಿಂದ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ. ಹಿಂದಿನ ಸರಕಾರ ರಾಜ್ಯವನ್ನು ನಾಶಗೊಳಿಸಿದೆ. ಹಾಲಿ ಮುಖ್ಯಮಂತ್ರಿ ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದವರು. ಹೊಸ ಮುಖ್ಯಮಂತ್ರಿಯವರು ಹಿಂದಿನ ಮುಖ್ಯಮಂತ್ರಿಯವರ ಮಾತನ್ನು ಕೇಳಲೇ ಬೇಕಾಗುತ್ತದೆ. ಹೊಸದಿಲ್ಲಿಯಲ್ಲಿ ಕುಳಿತ ಬಿಜೆಪಿ ಮುಖಂಡರು ಏನು ಮಾಡಬೇಕು ಎಂದು ನಿರ್ದೇಶನ ನೀಡುತ್ತಾರೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೂ ಇದೇ ಮಾದರಿ ಅನುಸರಿಸಿದ್ದರು. ಕರ್ನಾಟಕ ಅತ್ಯುತ್ತಮ ಪ್ರಗತಿ ಹೊಂದಿರುವ ರಾಜ್ಯವಾಗಿತ್ತು ಎಂದು ಖರ್ಗೆ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version