ಪ್ರಿಯಾಂಕಾ ಗಾಂಧಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮಹಿಳಾ ಪೊಲೀಸರಿಗೆ ನೋಟಿಸ್‌ ಜಾರಿ:ತನಿಖೆಗೆ ಆದೇಶ

ಪ್ರಿಯಾಂಕಾ ಗಾಂಧಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮಹಿಳಾ ಪೊಲೀಸರಿಗೆ ನೋಟಿಸ್‌ ಜಾರಿ:ತನಿಖೆಗೆ ಆದೇಶ

 

 

ಲಕ್ನೊ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳಾ ಪೊಲೀಸರ ವಿರುದ್ಧ ಪ್ರಾಥಮಿಕ ತನಿಖೆಗೆ ಲಕ್ನೋ ಪೊಲೀಸ್ ಆಯುಕ್ತ ಧ್ರುವ ಕಾಂತ್ ಠಾಕೂರ್ ಆದೇಶಿಸಿದ್ದಾರೆ ಎಂದು India Today ವರದಿ ಮಾಡಿದೆ.

ಮಹಿಳಾ ಪೊಲೀಸರ ವರ್ತನೆ ಪೊಲೀಸ್ ನಿಯಮಾವಳಿಗಳ ಉಲ್ಲಂಘನೆಯಾಗಿದೆಯೇ ಎಂದು ವಿಚಾರಿಸಲು ಕೇಂದ್ರೀಯ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ (ಡಿಸಿಪಿ) ಕೇಳಲಾಗಿದೆ. ಸಂಬಂಧಪಟ್ಟ ಡಿಸಿಪಿಯ ವರದಿಯ ಆಧಾರದ ಮೇಲೆ ಈ ಬಗ್ಗೆ ಆಯುಕ್ತ ಠಾಕೂರ್ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಉತ್ತರ ಪ್ರದೇಶದ ಉಸ್ತುವಾರಿಯಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬವನ್ನು ಭೇಟಿ ಮಾಡಲು ಆಗ್ರಾಕ್ಕೆ ತೆರಳುತ್ತಿದ್ದರು. ಈ ವೇಳೆ ಪ್ರಿಯಾಂಕಾರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಪ್ರಿಯಾಂಕಾ ಅವರ  ಬಂಧನದ ಸಮಯದಲ್ಲಿ ಹಲವಾರು ಮಹಿಳಾ ಪೊಲೀಸರು ಕಾಂಗ್ರೆಸ್ ನಾಯಕಿಯ ಬಳಿ ತೆರಳಿದರು ಹಾಗೂ  ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಕೇಳಿದರು. ಅದಕ್ಕೆ ಪ್ರಿಯಾಂಕಾ ಗಾಂಧಿ ಸಮ್ಮತಿಸಿದ್ದರು.

ಮಹಿಳಾ ಪೊಲೀಸರೊಂದಿಗೆ ತಾನು ಕ್ಲಿಕ್ಕಿಸಿದ ಚಿತ್ರವೊಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದ ಪ್ರಿಯಾಂಕಾ,  “ಈ ಫೋಟೋ ಯೋಗಿ ಜೀ (ಉ.ಪ್ರ. ಸಿಎಂ) ಅವರನ್ನು ತುಂಬಾ ಚಿಂತೆಗೀಡು ಮಾಡಿದೆ ಎಂದು ನನಗೆ ತಿಳಿದಿದೆ. ಅವರು ಈ ಪೊಲೀಸ್ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಲು ಬಯಸಿದ್ದಾರೆ. ನನ್ನೊಂದಿಗೆ ಚಿತ್ರ ತೆಗೆಸಿಕೊಳ್ಳುವುದು ಅಪರಾಧವಾಗಿದ್ದರೆ ಅದಕ್ಕಾಗಿ ನನಗೂ ಶಿಕ್ಷೆಯಾಗಬೇಕು. ಸರಕಾರವು ಈ ಶ್ರದ್ಧೆ ಹಾಗೂ  ನಿಷ್ಠಾವಂತ ಪೊಲೀಸ್ ಮಹಿಳೆಯರ ವೃತ್ತಿಜೀವನವನ್ನು ಹಾಳು ಮಾಡುವುದು ಸೂಕ್ತವಲ್ಲ” ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version