ತ್ರಿಶತಕಕ್ಕೆ 17 ವರ್ಷ; ಮುಲ್ತಾನ್ ನಲ್ಲಿ ಪಾಕ್ ಆಟಗಾರರ ಹೈರಣಾಗಿಸಿದ್ದ ‘ನಜಾಫ್ ಘಡದ ಸುಲ್ತಾನ’!

 

 

 

ನವದೆಹಲಿ: ಪಾಕಿಸ್ತಾನದ ಮುಲ್ತಾನ್ ನಲ್ಲಿ ಭಾರತ ಪರ ವೀರೇಂದ್ರ ಸೆಹ್ವಾಗ್ ತ್ರಿಶತಕ ಸಿಡಿಸಿದ ಐತಿಹಾಸಿಕ ಸಂಭ್ರಮಕ್ಕೆ ನಿನ್ನೆಗೆ ಸರಿಯಾಗಿ 17 ವರ್ಷ..

 

ಮಾರ್ಚ್​ 29, 2004 ರಂದು ಅಂದರೆ ಸರಿಯಾಗಿ 17 ವರ್ಷಗಳ ಹಿಂದೆ ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ್​ಮನ್ ವಿರೇಂದ್ರ ಸೆಹ್ವಾಗ್ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಅಶ್ರರಶಃ ಆರ್ಭಟಿಸಿದ್ದರು. ಅಂದು ಸೆಹ್ವಾಗ್ ಭಾರತದ ಪರ ಮೊಟ್ಟ ಮೊದಲ ತ್ರಿಶತಕ ಸಿಡಿಸಿದ್ದರು. ಮುಲ್ತಾನನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ 375 ಎಸೆತಗಳಲ್ಲಿ ಬರೊಬ್ಬರಿ 309 ರನ್ ಚಚ್ಚಿದ್ದರು. ವೀರೂ ಅಬ್ಬರಕ್ಕೆ ಹೈರಾಣಾಗಿದ್ದ ಪಾಕಿಸ್ತಾನ ಆ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 52 ರನ್ ಗಳ ಅಂತರದಲ್ಲಿ ಸೋಲಿಗೆ ಶರಣಾಗಿತ್ತು.

 

ಅಲ್ಲದೆ ಇದು ಭಾರತದ ಪರ ಬ್ಯಾಟ್ಸ್ ಮನ್ ಓರ್ವ ಸಿಡಿಸಿದ ಮೊದಲ ತ್ರಿಶತಕ ಕೂಡ ಎಂಬ ಕೀರ್ತಿಗೂ ಪಾತ್ರವಾಗಿತ್ತು. ಅಲ್ಲಿಯವರೆಗೂ ದ್ವಿಶತಕವೇ ದಾಖಲೆ ಎಂದು ಕೊಂಡಿದ್ದ ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ಸೆಹ್ವಾಗ್ ಮೊಟ್ಟ ಮೊದಲ ತ್ರಿಶತಕ ರುಚಿ ತೋರಿಸಿದ್ದರು.

 

ಮುಲ್ತಾನ್ ನಲ್ಲಿ ಈ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆಕಾಶ್ ಚೋಪ್ರಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಸೆಹ್ವಾಗ್, ಏಕದಿನ ಮಾದರಿಯಲ್ಲಿ ಬ್ಯಾಟಿಂಗ್ ಪ್ರಾರಂಭಿಸಿದರು. ಈ ವೇಳೆ ಭಾರತ ಆರಂಭಿಕ ಆಘಾತ ಎದುರಿಸಿತು. 42 ರನ್ ಗಳಿಸಿ ಆಕಾಶ್ ಚೋಪ್ರಾ ಔಟಾದರೆ, ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಕೂಡ ಕೇವಲ 6 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಭಾರತ ತೀವ್ರ ಒತ್ತಡಕ್ಕೆ ಸಿಲುಕಿತ್ತು. ಆದರೆ ಸೆಹ್ವಾಗ್ ಮಾತ್ರ ತಮ್ಮ ಬಿರುಸಿನ ಆಟ ಮುಂದುವೆರೆಸಿದ್ದರು. ಮೊದಲ ದಿನದಾಟದ ಅಂತ್ಯಕ್ಕೆ ಸೆಹ್ವಾಗ್ ಅಜೇಯ 228 ರನ್​ ಸಿಡಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಮರುದಿನ ಪಾಕ್ ಬೌಲರ್ ಸಕ್ಲೇನ್ ಮುಷ್ತಾಕ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಸೆಹ್ವಾಗ್ 300 ರನ್ ಪೂರೈಸಿದರು. ಆ ಮೂಲಕ ಕೇವಲ 364 ಎಸೆತಗಳನ್ನು ಎದುರಿಸಿದ್ದ ಸೆಹ್ವಾಗ್ ಭಾರತದ ಪರ ಮೊದಲ ತ್ರಿಶತಕ ಸಿಡಿಸಿದ ಆಟಗಾರ ಎನಿಸಿಕೊಂಡರು.

 

ಸೆಹ್ವಾಗ್ ವಿಕೆಟ್ ಉರುಳಿಸಲು ಪಾಕಿಸ್ತಾನ ಹಲವು ಬಾರಿ ತನ್ನ ಯೋಜನೆಗಳನ್ನು ಮತ್ತು ಬೌಲರ್ ಗಳನ್ನು ಬದಲಿಸಿತು. ಆದರೆ ಯಾವುದೇ ಕಾರಣಕ್ಕೂ ಸೆಹ್ವಾಗ್ ಮಾತ್ರ ವಿಕೆಟ್ ನೀಡದೇ ತಮ್ಮ ಮ್ಯಾರಥಾನ್ ಇನ್ನಿಂಗ್ಸ್ ಮುಂದುವರೆಸಿದ್ದರು. ಅಂತಿಮವಾಗಿ 375 ಎಸೆತಗಳಲ್ಲಿ ಒಟ್ಟು 309 ರನ್ ಗಳಿಸಿದ ವೀರು ಕೊನೆಗೂ ವಿಕೆಟ್ ಒಪ್ಪಿಸಿದರು. ಪಾಕ್ ವೇಗಿ ಮಹಮದ್ ಸಮಿ ಬೌಲಿಂಗ್ ನಲ್ಲಿ ಸೆಹ್ವಾಗ್ ತೌಫಿಕ್ ಉಮರ್ ಗೆ ಕ್ಯಾಚ್ ನೀಡಿ ಔಟ್ ಆದರು. ಅವರ ಅಮೋಘ ಇನ್ನಿಂಗ್ಸ್ ನಲ್ಲಿ 39 ಬೌಂಡರಿ ಮತ್ತು 6 ಸಿಕ್ಸರ್​ಗಳು ಸೇರಿದ್ದವು.

 

ನಾಲ್ಕು ವರ್ಷದ ಬಳಿಕ ಮತ್ತೆ ಅದೇ ದಿನ ತ್ರಿಶತಕ ಸಿಡಿಸಿದ ವೀರೂ, ಹಳೆಯ ದಾಖಲೆ ಧೂಳಿಪಟ

2004 ರಲ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಸೆಹ್ವಾಗ್ ತ್ರಿಶತಕ ಸಿಡಿಸಿದ್ದರು. ಅಚ್ಚರಿಯ ವಿಷಯವೆಂದರೆ ಈ ಸಾಧನೆಗೈದು ನಾಲ್ಕು ವರ್ಷಗಳ ಬಳಿಕ ಇದೇ ದಿನಾಂಕದಂದೇ ಮತ್ತೊಮ್ಮೆ ವೀರು ತ್ರಿಶತಕ ಬಾರಿಸಿ ತಮ್ಮ ದಾಖಲೆಯನ್ನು ಮುರಿದರು.

 

ಈ ಸಾಧನೆ ಮಾಡಿ ಬರೋಬ್ಬರಿ ನಾಲ್ಕು ವರ್ಷಕ್ಕೆ ಸೆಹ್ವಾಗ್ ಮತ್ತೊಮ್ಮೆ ಆರ್ಭಟಿಸಿದ್ದರು. ಚೆನ್ನೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ ಮುಲ್ತಾನ್​ ಕಾ ಸುಲ್ತಾನ್ ತಮ್ಮ ಹಳೆಯ ಖದರ್ ತೋರಿಸಿದ್ದರು. ಚೆನ್ನೈ ಪಿಚ್‌ನಲ್ಲಿ ಕೇವಲ 116 ಎಸೆತಗಳಲ್ಲಿ ಶತಕ ಪೂರೈಸಿದ ಸೆಹ್ವಾಗ್ ದ್ವಿಶತಕವನ್ನು 200 ಎಸೆತಗಳಲ್ಲಿ ಪೂರೈಸಿದರು. ದಕ್ಷಿಣ ಆಫ್ರಿಕಾ ಬೌಲರುಗಳ ಬೆಂಡೆತ್ತಿದ ವೀರೂ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. 225 ಎಸೆತಗಳಲ್ಲಿ 250 ರನ್‌ ಬಾರಿಸಿದ ಸೆಹ್ವಾಗ್, ಬಳಿಕ ಕೇವಲ 278 ಎಸೆತಗಳಲ್ಲಿ ತ್ರಿಶತಕ ಪೂರೈಸಿ ಹೊಸ ದಾಖಲೆ ಬರೆದರು.

 

ಇದು ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ತ್ರಿಶತಕ ಎಂಬ ದಾಖಲೆಯಾಗಿ ಉಳಿದಿದೆ. ಈ ಇನ್ನಿಂಗ್ಸ್ ನಲ್ಲಿ ಸೆಹ್ವಾಗ್ ಬರೊಬ್ಬರಿ 42 ಭರ್ಜರಿ ಬೌಂಡರಿ ಹಾಗೂ 5 ಸೂಪರ್ ಸಿಕ್ಸ್ ಗಳನ್ನು ಸಿಡಿಸಿದ್ದರು. 304 ಎಸೆತಗಳಲ್ಲಿ 319 ರನ್ ಬಾರಿಸಿದ ಸೆಹ್ವಾಗ್ ತಮ್ಮದೇ ಈ ಹಿಂದಿನ 309 ರನ್​ಗಳ ದಾಖಲೆಯನ್ನು ಅಳಿಸಿ ಹಾಕಿದರು. ಬಳಿಕ ಸೆಹ್ವಾನ್ ಮಕಾಯ್ ಎನ್ಟಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು.

 

ವೀರೂ ಆರ್ಭಟಕ್ಕೆ ಪಾಕ್ ಬೌಲರ್ ಕೆರಿಯರ್ ಅಂತ್ಯ..!

ವೀರೂ ಮೊದಲ ತ್ರಿಶತಕ ಸಿಡಿಸಿದ್ದ ಪಂದ್ಯದಲ್ಲೇ ಪಾಕಿಸ್ತಾನ ತಂಡದ ಪ್ರಮುಖ ಬೌಲರ್ ಒಬ್ಬರ ಕೆರಿಯರ್ ಬಹುತೇಕ ಅಂತ್ಯವಾಗಿತ್ತು. ಮುಲ್ತಾನ್ ಪಂದ್ಯದಲ್ಲಿ ವೀರೂ ಆರ್ಭಟಕ್ಕೆ ಪಾಕ್ ಬೌಲರ್ ಗಳು ತತ್ತರಿಸಿ ಹೋಗಿದ್ದರು. ಪ್ರಮುಖವಾಗಿ ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ 204 ರನ್‌ ನೀಡಿ ಕೇವಲ 1 ವಿಕೆಟ್ ಪಡೆದಿದ್ದರು. ಸೆಹ್ವಾಗ್ ಅವರ ಈ ಬ್ಯಾಟಿಂಗ್ ಆರ್ಭಟಕ್ಕೆ ಪಾಕ್ ಲೆಜೆಂಡ್ ಆಫ್-ಸ್ಪಿನ್ನರ್​ನ ಟೆಸ್ಟ್ ಕೆರಿಯರ್ ಅಂತ್ಯಕ್ಕೆ ಕಾರಣವಾಯಿತು. ಈ ಪಂದ್ಯದ ಬಳಿಕ ಸಕ್ಲೇನ್​ ಅವರನ್ನು ತಂಡವನ್ನು ಕೈ ಬಿಡಲಾಯಿತು. ಆ ಬಳಿಕ ನಡೆದ ಸರಣಿಗಳಲ್ಲಿ ಪಾಕ್ ಪರ ದನೀಶ್ ಕನೇರಿಯಾ ಉದಯೋನ್ಮುಖ ಆಟಗಾರನಾಗಿ ಕಣಕ್ಕಿಳಿದಿದ್ದರು. ಹೀಗಾಗಿ ಮುಷ್ತಾಕ್ ಗೆ ಅವಕಾಶಗಳು ಸಿಗಲಿಲ್ಲ. ಅಲ್ಲದೆ ಮುಷ್ತಾಕ್ ರ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಕೂಡ ಇದೇ ಆಗಿತ್ತು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version