ಫ್ರಾನ್ಸ್ ಅಧ್ಯಕ್ಷ ಸ್ಥಾನದ ಮೇಲೆ ಪ್ಯಾರೀಸ್ ಮೇಯರ್ ಕಣ್ಣು

ಫ್ರಾನ್ಸ್ ಅಧ್ಯಕ್ಷ ಸ್ಥಾನದ ಮೇಲೆ ಪ್ಯಾರೀಸ್ ಮೇಯರ್ ಕಣ್ಣು

ಫ್ರಾನ್ಸ್, : ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪ್ರಮುಖ ಚುನಾವಣಾ ವಿಷಯವಾಗಿರಿಸಿಕೊಂಡು ಫ್ರಾನ್ಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಾಗಿ ಪ್ಯಾರೀಸ್ ಮೇಯರ್ ಆ್ಯನಿ ಹಿಡಾಲ್ಗೊ ಪ್ರಕಟಿಸಿದ್ದಾರೆ. ಅಂತೆಯೇ ಬಲಪಂಥೀಯವಾದಿ ಮರೀನ್ ಲೆ ಪೆನ್ ಕೂಡಾ ದೇಶದ ಅತ್ಯುನ್ನತ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಹಾಲಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಪದಚ್ಯುತಿಗೆ ತುರುಸಿನ ಸ್ಪರ್ಧೆ ಕಂಡುಬಂದಿದೆ.

 

ಫ್ರಾನ್ಸ್‌ನ ಮೊಟ್ಟಮೊದಲ ಮಹಿಳಾ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿರುವ ಪ್ರಮುಖ ಸ್ಪರ್ಧಿಗಳಲ್ಲಿ ಹಿಡಾಲ್ಗೊ (62) ಪ್ರಮುಖರು. ಎರಡನೇ ಅವಧಿಗೆ ಸ್ಪರ್ಧಿಸುವುದನ್ನು ಮ್ಯಾಕ್ರೋನ್ ಇನ್ನೂ ದೃಢಪಡಿಸಿಲ್ಲವಾದರೂ, ಮತ್ತೆ ದೇಶದ ಅತ್ಯುನ್ನತ ಹುದ್ದೆಯ ಸ್ಪರ್ಧೆಯಲ್ಲಿ ಇರುತ್ತಾರೆ ಎಂದು ನಿರೀಕ್ಷಿಸಲಾಗಿದೆ.

 

ಸಮೀಕ್ಷೆಗಳ ಪ್ರಕಾರ, ಮ್ಯಾಕ್ರೋನ್ ಮತ್ತು ಲೇ ಪೆನ್ ಎಪ್ರಿಲ್‌ನಲ್ಲಿ ನಡೆಯುವ ಮೊದಲ ಸುತ್ತಿನ ಮತದಾನದಲ್ಲಿ ಮೊದಲೆರಡು ಸ್ಥಾನ ಪಡೆಯಲಿದ್ದಾರೆ ಹಾಗೂ 2017ರ ಫಲಿತಾಂಶ ಮರುಕಳಿಸಿ, ಮ್ಯಾಕ್ರೋನ್ ಗೆಲುವು ಸಾಧಿಸಲಿದ್ದಾರೆ.

 

ಹಿಡಾಲ್ಗೊ ಅವರ ಉಮೇದುವಾರಿಕೆಯನ್ನು ಅವರ ಸೋಶಿಯಲಿಸ್ಟ್ ಪಾರ್ಟಿ ಈ ತಿಂಗಳು ಇನ್ನೂ ಅಂತಿಮಪಡಿಸಬೇಕಿದ್ದು, ಉಮೇದುವಾರಿಕೆ ಹಿನ್ನೆಲೆಯಲ್ಲಿ ಛಿದ್ರಗೊಂಡಿರುವ ಪಕ್ಷವನ್ನು ಒಗ್ಗೂಡಿಸುವ ದೊಡ್ಡ ಸವಾಲು ಅವರ ಮುಂದಿದೆ. ಕಡಿಮೆ ಇಂಗಾಲದ ಆರ್ಥಿಕತೆ ಮತ್ತು ಶಿಕ್ಷಣ, ಗೃಹ ನಿರ್ಮಾಣ ಮತ್ತು ಆರೋಗ್ಯ ಸೇರಿದಂತೆ ಸಾಮಾಜಿಕ ಕ್ಷೇತ್ರದ ಮೇಲೆ ಹೆಚ್ಚಿನ ವೆಚ್ಚ ವಿಷಯವನ್ನು ಮುಂದಿಟ್ಟುಕೊಂಡು ಅವರು ಉಮೇದುವಾರಿಕೆಗೆ ಸಜ್ಜಾಗಿದ್ದಾರೆ.

 

“ನನಗೆ ಸಿಕ್ಕಿದಂತೆ ಫ್ರಾನ್ಸ್‌ನ ಎಲ್ಲ ಮಕ್ಕಳಿಗೂ ಸಮಾನ ಅವಕಾಶಗಳು ಸಿಗಬೇಕು ಎನ್ನುವುದು ನನ್ನ ಕನಸು. ಫ್ರಾನ್ಸ್‌ನ ಶಿಕ್ಷಣ ವ್ಯವಸ್ಥೆ, ವರ್ಗ ಪೂರ್ವಾಗ್ರಹವನ್ನು ಮೀರಿ ಬೆಳೆಯಲು ಸಹಕಾರಿಯಾಗುತ್ತದೆ ಎಂಬ ವಿಶ್ವಾಸ ನನ್ನದು” ಎಂದು ಹೇಳಿದ್ದಾರೆ.

 

ಸ್ಪೇನ್‌ನ ವಲಸೆ ಕುಟುಂಬಕ್ಕೆ ಸೇರಿದ ಹಿಡಾಲ್ಗೊ ಅವರ ತಂದೆ ಎಲೆಕ್ಟ್ರೀಶಿಯನ್ ಹಾಗೂ ತಾಯಿ ಲಿಯಾನ್‌ನ ಹೌಸಿಂಗ್ ಎಸ್ಟೇಟ್‌ನಲ್ಲಿ ಹೊಲಿಗೆ ಕೆಲಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version