ಸಮೃದ್ಧ ಕರ್ನಾಟಕ” ಸ್ಥಾಪಿಸುವ ಗುರಿ ನಮ್ಮದು: ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ.

ಸಮೃದ್ಧ ಕರ್ನಾಟಕ” ಸ್ಥಾಪಿಸುವ ಗುರಿ ನಮ್ಮದು: ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ.

 

ತುಮಕೂರು: ಬದುಕನ್ನು ಕಟ್ಟಿಕೊಡುವಂತಹ ಹಲವಾರು ಯೋಜನೆಗಳನ್ನು ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ತುಮಕೂರು ಜಿಲ್ಲೆಯ ೨೪ ಲಕ್ಷ ಜನರಿಗೆ ಉಭಯ ಸರ್ಕಾರಗಳ ವಿವಿಧ ಯೋಜನೆಗಳ ಸವಲತ್ತುಗಳನ್ನು ಒದಗಿಸಲಾಗಿದೆ. ಯೋಜನೆಗಳನ್ನು ಘೋಷಿಸುವುದಲ್ಲದೆ ಪೂರ್ಣ ಪ್ರಮಾಣದಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ನಮ್ಮ ಸರ್ಕಾರ ಮುಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.

 

 

 

 

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಯೋಗದಲ್ಲಿ ಇಂದು ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಾ ಕನ್ನಡನಾಡಿನಲ್ಲಿ ಬಡತನವನ್ನು ಸಂಪೂರ್ಣವಾಗಿ ಅಳಿಸಿ ಸಮೃದ್ಧಿ ಕರ್ನಾಟಕ ಸ್ಥಾಪಿಸುವ ಸಂಕಲ್ಪ ಕೈಗೊಳ್ಳುತ್ತಿರುವುದಾಗಿ ಘೋಷಿಸಿದರು.

 

 

 

 

 

ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಗರೀಬ್ ಕಲ್ಯಾಣ್, ಆತ್ಮ ನಿರ್ಭರ್ ಭಾರತ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಯೋಜನೆಗಳ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ತಂತ್ರಜ್ಞಾನದ ಮೂಲಕ ಜಮೆಯಾಗುತ್ತಿದೆ. ಸುಮಾರು ೫೩.೪೩ ಲಕ್ಷ ಕರ್ನಾಟಕ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಕಳೆದ ನಾಲ್ಕು ವರ್ಷದಲ್ಲಿ ೧೬ ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಕೊಟ್ಟಿದ್ದು, ೪೪೮೭ ಕೋಟಿ ರಾಜ್ಯ ಸರ್ಕಾರ ಕೊಟ್ಟಿದೆ ಎಂದರು.

 

 

 

 

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕರ್ನಾಟಕಕ್ಕೆ ೧೭ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಸ್ವಚ್ ಭಾರತ್ ಯೋಜನೆಯಡಿ ಶೌಚಾಲಯವನ್ನು ನಿರ್ಮಿಸಲಾಗಿದೆ, ಜಲ ಜೀವನ್ ಮಿಷನ್ ಯೋಜನೆಯಡಿ ಜನರ ಮನೆಯ ಬಾಗಿಲಿಗೆ ಕುಡಿಯುವ ನೀರನ್ನು ನೀಡಿದ್ದೇವೆ, ದೀನ್ ದಯಾಳ್ ಯೋಜನೆಯ ಬೆಳಕು ಕಾರ್ಯಕ್ರಮದಡಿ ಕಳೆದ ಒಂದು ವರ್ಷದಲ್ಲಿ ೨.೩೮ ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ಜೆ.ಜೆ.ಎಂ. ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಡಿ ೪೦ ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕಳೆದ ೭೨ ವರ್ಷಗಳಲ್ಲಿ ಕೇವಲ ೨೫ ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಯೋಜನೆಯಿದ್ದು, ನಮ್ಮ ಡಬ್ಬಲ್ ಇಂಜಿನ್ ಸರ್ಕಾರ ಮೂರೇ ವರ್ಷದಲ್ಲಿ ೪೦ ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿರುವುದು ದಾಖಲೆಯೇ ಸರಿ ಎಂದರು.

 

 

 

 

 

ರೈತರ ಮಕ್ಕಳು ಸಹ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ರೈತ ವಿದ್ಯಾ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದ ೧೨ ಲಕ್ಷ ರೈತರ ಮಕ್ಕಳು ಹಾಗೂ ತುಮಕೂರು ಜಿಲ್ಲೆಯ ೧೮ ಸಾವಿರ ರೈತ ಮಕ್ಕಳು ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು.

 

 

 

 

 

ಆರೋಗ್ಯ ಕ್ಷೇತ್ರದಲ್ಲಿ ಡಯಾಲಿಸೀಸ್ ಸೈಕಲ್ ಅನ್ನು ಒಂದು ಲಕ್ಷಕ್ಕೆ ಈ ವರ್ಷ ಬಜೆಟ್‌ನಲ್ಲಿ ಹೆಚ್ಚಿಸಲಾಗಿದೆ. ೧೨ ಹೊಸ ಕೇಂದ್ರಗಳ ಮೂಲಕ ಕಿಮೋ ಥೆರಪಿ ಸೈಕಲ್ ಅನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ, ಅಂತೆಯೇ ಕಾಕ್ಲಿಯರ್ ಇನ್ ಪ್ಲಾಂಟ್, ಪೌಷ್ಠಿಕ ಆಹಾರ ಕೊರತೆ ನೀಗಿಸುವ ಕಾರ್ಯಕ್ರಮ, ೬೦ ವರ್ಷ ಮೇಲ್ಪಟ್ಟವರಿಗೆ ಕನ್ನಡಕ ವಿತರಿಸುವ ಕಾರ್ಯಕ್ರಮ, ನಮ್ಮ ಕ್ಲಿನಿಕ್ ಮುಂತಾದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

 

 

 

 

 

 

ಜಮೀನು ಇಲ್ಲದ ಕಡು ಬಡ ಹೆಣ್ಣು ಮಕ್ಕಳ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ, ಯುವಶಕ್ತಿಯನ್ನು ಮುಖ್ಯವಾಹಿನಿಗೆ ತರಲು ಉದ್ಯೋಗ ಯೋಜನೆ, ಹಳ್ಳಿಗಾಡಿನ ಮಕ್ಕಳಿಗಾಗಿ ೨ಸಾವಿರ ಶಾಲಾ ಬಸ್ಸ್ ಗಳ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.

 

 

 

 

 

 

ಹಿಂದೆಂದು ಕಂಡು ಅರಿಯದ ರೀತಿ ೯೭೦ ಕೋಟಿ ರೂಗಳ ಸ್ಮಾರ್ಟ್ ಸಿಟಿ ಯೋಜನೆಯನ್ನು ಘೋಷಿಸಿ ಅನುಷ್ಠಾನಗೊಳಿಸಲಾಗಿದೆ, ಎತ್ತಿನಹೊಳೆ ಯೋಜನೆಯೂ ಶೀಘ್ರವೆ ಪೂರ್ಣಗೊಳ್ಳಲಿದೆ ಎಂದರು.

 

 

 

 

 

 

ಕಾರ್ಯಕ್ರಮದಲ್ಲಿ ಸಚಿವರುಗಳಾದ ಸಿ.ಸಿ.ಪಾಟೀಲ್, ಎಸ್.ಟಿ. ಸೋಮಶೇಖರ್, ಬಿ.ಸಿ. ನಾಗೇಶ್, ಸಂಸದ ಜಿ.ಎಸ್. ಬಸವರಾಜು, ಶಾಸಕರುಗಳಾದ ಎ.ಎಸ್. ಜಯರಾಮ್, ಡಾ. ಸಿ.ಎಂ. ರಾಜೇಶ್ ಗೌಡ, ವಿಧಾನ ಪರಿಷತ್ ಶಾಸಕ ಚಿದಾನಂದಗೌಡ, ಮಹಾಪೌರರಾದ ಎಂ. ಪ್ರಭಾವತಿ ಸುಧೀಶ್ವರ್, ಉಪಮಹಾಪೌರ ಟಿ.ಕೆ. ನರಸಿಂಹಮೂರ್ತಿ, ನಗರಾಭಿವೃದ್ಧಿ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಸಿಇಒ ವಿದ್ಯಾಕುಮಾರಿ, ತುಮಕೂರು ಪಾಲಿಕೆ ಆಯುಕ್ತ ಹೆಚ್.ವಿ. ದರ್ಶನ್, ಸ್ಮಾರ್ಟ್ ಸಿಟಿ ಎಂ.ಡಿ. ರಂಗಸ್ವಾಮಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 

 

 

ಇದೇ ಸಂದರ್ಭ ಕೃಷಿ ಇಲಾಖೆಯ ರೈತ ವಿದ್ಯಾ ನಿಧಿ ಯೋಜನೆ, ಪಿ.ಎಂ. ಕಿಸಾನ್ ಯೋಜನೆ, ರೈತ ಶಕ್ತಿ ಯೋಜನೆ, ಅಮೃತ್ ಯೋಜನೆ, ವಸತಿ ಯೋಜನೆ, ಜೇನು ಸಾಕಾಣಿಕೆ ಯೋಜನೆ, ಅಮೃತ ಕ್ರೀಡಾ ಯೋಜನೆ, ಹಾಲು ಉತ್ಪಾದಕರಿಗೆ ಉತ್ತೇಜನ ಸೇರಿದಂತೆ ಸಾಂಕೇತಿಕವಾಗಿ ೧೮ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಚೆಕ್ ವಿತರಿಸಿದರು.ಜಿಲ್ಲೆಯಾದ್ಯಂತ ಸಾವಿರಾರು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version