ಗ್ರಾಪಂ ಮಟ್ಟದಲ್ಲೇ ಆನ್ ಲೈನ್ ಮೂಲಕ ನಾಗರಿಕ ಸೇವೆ; ಜ.26ರಿಂದ 5 ಜಿಲ್ಲೆಗಳಲ್ಲಿ ಚಾಲನೆ: ಸಿಎಂ ಬೊಮ್ಮಾಯಿ

 

ಬೆಂಗಳೂರು, ಸೆ.23: ನಾಗರಿಕ ಸೇವೆಗಳನ್ನು ಗ್ರಾಮ ಪಂಚಾಯತ್ ಹಂತದಲ್ಲೇ ಆನ್ ಲೈನ್ ಮೂಲಕ ಒದಗಿಸುವ ವಿನೂತನ ‘ಗ್ರಾಮ ಸೇವಾ’ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ 5 ಜಿಲ್ಲೆಗಳಲ್ಲಿ ಮುಂಬರುವ ಗಣರಾಜ್ಯೋತ್ಸವ ಜನವರಿ 26ರಿಂದ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಘೋಷಿಸಿದ್ದಾರೆ.

 

ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಅಮೃತ ಗ್ರಾಮ ಪಂಚಾಯತ್ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

 

ಅಭಿವೃದ್ಧಿ ಜನರ ಸುತ್ತ ಆಗಬೇಕು; ಜನರು ಅಭಿವೃದ್ಧಿ ಸುತ್ತ ಸುತ್ತುವಂತಾಗಬಾರದು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಗಳು ಜನರಿಗೆ ವಿವಿಧ ಸೇವೆಗಳನ್ನು ಒದಗಿಸುವ ಗ್ರಾಮ ಸೇವಾ ಸಂಸ್ಥೆಯಾಗಬೇಕು. ಮನೆ ಬಾಗಿಲಿಗೆ ಸೌಲಭ್ಯಗಳು ತಲುಪಬೇಕು. ಈ ಆಶಯದೊಂದಿಗೆ ‘ಗ್ರಾಮ ಸೇವಾ ಯೋಜನೆ’ಯನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

 

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಝೀರ್ ಸಾಬ್ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ರೂವಾರಿಗಳು ಎಂದು ಮುಖ್ಯಮಂತ್ರಿ ಸ್ಮರಿಸಿದರು.

 

ಪ್ರೋತ್ಸಾಹಧನ:

ಇಂದು ಉದ್ಘಾಟನೆಯಾಗಿರುವ ಅಮೃತ ಯೋಜನೆಯಡಿ 750 ಗ್ರಾಮ ಪಂಚಾಯತ್ಗಳ ಸರ್ವಾಂಗೀಣ ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರತಿ ಪಂಚಾಯತ್ ಗೆ ಸರಾಸರಿ 3 ಕೋಟಿ ರೂ. ಗಳಂತೆ ಸುಮಾರು 2,300 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮಾರ್ಚ್ 31ರೊಳಗೆ ಯೋಜನೆ ಪೂರ್ಣಗೊಳಿಸಿದ ಪಂಚಾಯತ್ ಗಳಿಗೆ 25 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

 

ಎಲ್ಲ ಗ್ರಾಮ ಪಂಚಾಯತ್ ಗಳು ಇದನ್ನು ಪೂರ್ಣಗೊಳಿಸಿದರೆ ಮುಂದಿನ ವರ್ಷ 1500 ಪಂಚಾಯತ್ ಗಳಲ್ಲಿ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ನುಡಿದರು.

 

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ ಅನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 2000 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

 

ಡಿಜಿಟಲ್ ಸಂಪರ್ಕ:

ಅಮೃತ ಗ್ರಾಮ ಪಂಚಾಯತ್ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ರಾಜ್ಯದ ಗ್ರಾಮ ಪಂಚಾಯತ್ ಗಳ ಕಾರ್ಯನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ಗ್ರಾಮ ಪಂಚಾಯತ್ ಗಳು 2024ರೊಳಗೆ ಡಿಜಿಟಲ್ ಕನೆಕ್ಟಿವಿಟಿ ಹೊಂದಿರಬೇಕು ಎಂದು ಆಶಿಸಿದ ಅವರು, ರಾಜ್ಯದಲ್ಲಿಯೂ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸುವಂತೆ ಸೂಚಿಸಿದರು.

 

ಅಕ್ಟೋಬರ್ 2ರಂದು ದೇಶಾದ್ಯಂತ ಗ್ರಾಮ ಪಂಚಾಯತ್ ಗಳು ಗ್ರಾಮಸಭೆ ನಡೆಸಿ, ನನ್ನ ಗ್ರಾಮ, ನನ್ನ ಪರಂಪರೆ ಎಂಬ ಘೋಷಣೆಯಡಿ ತಮ್ಮ ಗ್ರಾಮಕ್ಕಾಗಿ ಶ್ರಮಿಸಿದ ಹಿರಿಯರು, ವಿದ್ವಾಂಸರು, ಸ್ವಾತಂತ್ರ್ಯಹೋರಾಟಗಾರರು ಮೊದಲಾದ ಗಣ್ಯರನ್ನು ಸ್ಮರಿಸುವ ಕೆಲಸವಾಗಬೇಕು. ಅಕ್ಟೋಬರ್ 1 ರಿಂದ 15 ರ ವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕರೆ ನೀಡಿದರು.

 

ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದ ಗುರಿಯನ್ನು ಹೆಚ್ಚಿಸಲು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

 

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ರಿಝ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು.

 

ಈ ಸಂದರ್ಭದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ `ಯೋಜನೆಯಡಿ ತರಬೇತಿ ಪಡೆದ ನಾಲ್ವರು ಯುವತಿಯರಿಗೆ ಉದ್ಯೋಗ ಪ್ರಮಾಣ ಪತ್ರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕಲಬುರಗಿಯಲ್ಲಿ ನಿರ್ಮಿಸಲಾಗಿರುವ ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಉದ್ಘಾಟಿಸಲಾಯಿತು.

 

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ತೋಟಗಾರಿಕೆ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್. ಮುನಿರತ್ನ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ. ಅತೀಕ್, ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version