ಕೈಗಾರಿಕೆಗಳು ಮತ್ತು ಆಸ್ಪತ್ರೆಗಳಿಗೆ ಆಮ್ಲಜನಕ ಸರಬರಾಜು ಮೇಲುಸ್ತವಾರಿಗೆ ಜಿಲ್ಲೆಗಳಲ್ಲಿ ನೋಡಲ್‌ ಅಧಿಕಾರಿ: ಸಚಿವ ಜಗದೀಶ್‌ ಶೆಟ್ಟರ್‌

 

ರಾಜ್ಯದ ಆಮ್ಲಜನಕ ಉತ್ಪಾದನೆ ಮತ್ತು ಸರಬರಾಜು ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ

ಮೂರನೇ ಅಲೆಗೆ ಸಿದ್ದಗೊಳ್ಳಲು ಅಧಿಕಾರಿಗಳಿಗೆ ಸೂಚನೆ

ಆಸ್ಪತ್ರೆಗಳು ಆಮ್ಲಜನಕದ ಇಂಡೆಂಟ್‌ ನೀಡಲು ನೂತನ ತಂತ್ರಜ್ಞಾನ

 

.ಬೆಂಗಳೂರು.

ರಾಜ್ಯ ಹಾಗೂ ದೇಶದಲ್ಲಿ ಆಮ್ಲಜನಕದ ಬೇಡಿಕೆಯ ಪ್ರಮಾಣ ದಿನೇ ದಿನೇ ಕಡಿಮೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಕೈಗಾರಿಕೆಗಳಿಗೂ ಸ್ವಲ್ಪ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಗೆ ಕೇಂದ್ರ ಸರಕಾರ ಅನುಮತಿಯನ್ನು ನೀಡಿದೆ. ಈ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗದೆ ಆಸ್ಪತ್ರೆಗಳಿಗೆ ಆದ್ಯತೆ ಮೇರೆಗೆ ಆಮ್ಲಜನಕ ಪೂರೈಕೆ ಮಾಡಿಸುವ ನಿಟ್ಟಿನಲ್ಲಿ ಜಿಲ್ಲಾವಾರು ನೋಡಲ್‌ ಆಫೀಸರ್‌ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ಮತ್ತು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ತಿಳಿಸಿದರು

 

 

ಇಂದು ವಿಧಾನಸೌಧದಲ್ಲಿ ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಸಚಿವ ಜಗದೀಶ್‌ ಶೆಟ್ಟರ್‌ ನಂತರ ಈ ವಿಷಯ ತಿಳಿಸಿದರು.

 

ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಇದರಿಂದಾಗಿ ಆಮ್ಲಜನಕದ ಬೇಡಿಕೆಯೂ ಕಡಿಮೆ ಆಗುತ್ತಿದೆ. ಕಳೆದ ಎರಡು ದಿನಗಳನ್ನು ಗಮನಿಸಿದಲ್ಲಿ ಸಾರಾಸರಿಯಾಗಿ 580 ಎಂ.ಟಿಗಳಷ್ಟು ಮಾತ್ರ ಆಮ್ಲಜನಕದ ಬೇಡಿಕೆ ಇದೆ. ಆದರೆ, ಬೇಡಿಕೆ ಕಡಿಮೆ ಆಗಿರುವುದರಿಂದ ಹೆಚ್ಚಿನ ಗಮನ ನೀಡದೇ ಇರುವುದು ಸರಿಯಲ್ಲ. ಮುಂದಿನ ಮೂರನೇ ಅಲೆಗೆ ಪರಿಸ್ಥಿತಿ ತಿಳಿಯಾಗಿರುವ ಸಂಧರ್ಭದಲ್ಲೇ ಅಗತ್ಯ ತಯಾರಿ ಮಾಕೊಳ್ಳಬೇಕು. ಈ ಹಿನ್ನಲೆಯಲ್ಲಿ ಜಿಲ್ಲಾವಾರು ಆಸ್ಪತ್ರೆಗಳನ್ನು ಆಮ್ಲಜನಕ ಸ್ವಾವಲಂಬಿ ಮಾಡಬೇಕು. ಅಲ್ಲದೆ, ಜಿಲ್ಲೆಗಳಲ್ಲಿ ಬಫರ್‌ ಸ್ಟಾಕ್‌ ಸಂಗ್ರಹಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.

 

ಅಲ್ಲದೆ, NIC ಮೂಲಕ ಒಂದು ತಂತ್ರಾಂಶವನ್ನು ಅಭಿವೃದ್ದಿಗೊಳಿಸಲಾಗುತ್ತಿದೆ. ಈ ತಂತ್ರಾಂಶದ ಮೂಲಕ ಆಸ್ಪತ್ರೆಗಳು ಆಮ್ಲಜನಕದ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ. ಇದು ಇನ್ನು 3 ದಿನಗಳಲ್ಲಿ ಸಿದ್ದವಾಗಲಿದ್ದು ಅದನ್ನು ಸದ್ಯದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದರು.

 

ಕೇಂದ್ರ ಸರಕಾರ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಸುವ ನಿಟ್ಟಿನಲ್ಲಿ ಅನುಮತಿಯನ್ನು ನೀಡಿದೆ. ಒಂದು ಬಾರಿ ಈ ಪ್ರಕ್ರಿಯೆ ಪ್ರಾರಂಭವಾದ ನಂತರ ಗೊಂದಲಗಳು ಉಂಟಾಗಬಾರದು ಎನ್ನುವ ನಿಟ್ಟಿನಲ್ಲಿ ಜಿಲ್ಲಾವಾರು ನೋಡಲ್‌ ಅಧಿಕಾರಿಯನ್ನು ನೇಮಿಸಲು ಚಿಂತನೆ ನಡೆದಿದೆ. ನೋಡಲ್‌ ಅಧಿಕಾರಿಗಳು ಆಸ್ಪತ್ರೆಗೆ ಆದ್ಯತೆಯ ಮೇರೆಗೆ ಆಮ್ಲಜನಕ ಪೂರೈಕೆ ಮಾಡುವ ನಿಟ್ಟಿನಲ್ಲಿ ಮೇಲುಸ್ತುವಾರಿ ವಹಿಸಿಲಿದ್ದಾರೆ ಎಂದರು.

 

3 ನೇ ಕೋವಿಡ್‌ ಅಲೆ ಬಂದರೆ ರಾಜ್ಯ ಆಮ್ಲಜನಕ ವಿಷಯದಲ್ಲಿ ಸಿದ್ದವಾಗಿರಬೇಕಾಗಿರುವುದು ಬಹಳ ಅತ್ಯವಶ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಅಲ್ಲದೆ, ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ ಅಧಿಕಾರಿಗಳಿಗೆ ಇದೇ ಸಂಧರ್ಭದಲ್ಲಿ ಅಭಿನಂದಿಸಿದರು.

 

ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ ಕುಮಾರ್ ಖತ್ರಿ, ಆಕ್ಸಿಜನ್ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಹಿರಿಯ ಐಎಎಸ್‌ ಅಧಿಕಾರಿ ಮೌನಿಶ್‌ ಮೌದ್ಗಿಲ್‌, ಐಪಿಎಸ್‌ ಅಧಿಕಾರಿ ಪ್ರತಾಪ್‌ ರೆಡ್ಡಿ, ಕೆಐಎಡಿಬಿ ಸಿಇಓ ಡಾ ಶಿವಶಂಕರ್, ಡ್ರಗ್ಸ್ ಕಂಟ್ರೋಲರ್ ಅಮರೇಶ್ ತುಬಗಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version