ಮನುಕುಲವೇ ತಲೆ ತಗ್ಗಿಸುವಂತೆ ನಡೆದುಕೊಳ್ಳುತ್ತಿರುವ ತುಮಕೂರು ಜಿಲ್ಲಾ ಆಸ್ಪತ್ರೆ
ತುಮಕೂರು : ತುಮಕೂರು ಜಿಲ್ಲಾ ಆಸ್ಪತ್ರೆಯ ಕಾರ್ಯವೈಖರಿ, ಸ್ವಚ್ಛತೆ ಮತ್ತು ಇಲ್ಲಿನ ಸೌಲಭ್ಯಗಳನ್ನು ಗುರ್ತಿಸಿ ಕಳೆದ ಕೆಲವೇ ವರ್ಷಗಳ ಹಿಂದೆ “ಕಾಯಕಲ್ಪ” ಎಂಬ ಬಿರುದನ್ನು ನಮ್ಮ ತುಮಕೂರು ಜಿಲ್ಲಾ ಆಸ್ಪತ್ರೆಗೆ ಬರುವಂತೆ ನೋಡಿಕೊಂಡಿದ್ದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಟಿ.ಎ.ವೀರಭದ್ರಯ್ಯರವರಿಗೆ ಸಲ್ಲುತ್ತದೆ, ಆ ಸಮಯದಲ್ಲಿ ತುಮಕೂರು ಜನತೆ ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಆಸ್ಪತ್ರೆಯನ್ನಾಗಿ ಮಾಡುತ್ತೇವೆಂಬ ಭರವಸೆಯನ್ನೂ ನೀಡಿದ್ದರು.
ಅದು ನೆರವೇರಿತೋ, ಇಲ್ಲವೋ ಗೊತ್ತಿಲ್ಲ ಆದರೆ ಈ ಆಸ್ಪತ್ರೆಯ ವಾರ್ಡುಗಳಲ್ಲಿ ಕೊಳಕು, ಎಲ್ಲೆಂದರಲ್ಲಿ ತಿಂದು ಬಿಸಾಡಿದ ಅನ್ನ, ಸರಿಯಾಗಿ ಶುಶ್ರೂಷೆಯನ್ನು ಮಾಡದ ದಾದಿಗಳು, ಸಿಬ್ಬಂದಿಗಳು. ಇದು ನಂಬಲು ಅರ್ಹವಾಗದಿದ್ದರು ಸತ್ಯ ಘಟನೆ ನಡೆದಿದೆ, ತುಮಕೂರು ಜಿಲ್ಲಾ ಆಸ್ಪತ್ರೆಯ ಈ ಹಿಂದೆ ಸಿಟಿ ಸ್ಕ್ಯಾನ್ ಸೆಂಟರ್ ಮುಂಭಾಗದಲ್ಲಿರುವ ಹಾಲಿ ಡಯಾಲಿಸಿಸ್ ಕೇಂದ್ರದ ಮೇಲ್ಭಾಗದಲ್ಲಿರುವ ಒಂದು ವಾರ್ಡಿನಲ್ಲಿ ಸುಮಾರು 05 ರಿಂದ 06 ಜನ ರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದು, ಆ ವಾರ್ಡಿನೊಳಗೆ ಹೋಗಲಾರದಷ್ಟು ಗಬ್ಬು ನಾರುತ್ತಿದೆ ಇದನ್ನು ವರದಿ ಮಾಡಲು ತೆರಳಿದ ಕೆಲ ಪತ್ರಕರ್ತರಿಗೆ 02 ಸೆಕೆಂಡ್‌ಗಳ ಕಾಲವೂ ಅಲ್ಲಿ ಇರದಂತಹ ವಾತಾವರಣ ಅಲ್ಲಿ ನಿರ್ಮಾಣವಾಗಿದೆ, ಏಕೆಂದರೆ ಅವರಿಗೆ ನೀಡಿರುವ ಅನ್ನ, ನೀರು, ಮಲ-ಮೂತ್ರ ವಿಸರ್ಜನೆಯೂ ಸಹ ರೋಗಿಗಳು ಇದ್ದ ಜಾಗದಲ್ಲಿಯೇ ಮಾಡಿಕೊಂಡು, ಅದನ್ನು ದಿನಗಳು ಕಳೆದರೂ ಸಹ ಸ್ವಚ್ಛ ಮಾಡದೇ ಹಾಗೇ ಬಿಟ್ಟಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ, ಹೋಗಲಿ ಆ ರೋಗಿಗಳಿಗೆ ಹೊದ್ದಿಕೊಳ್ಳಲು ಹಾಸಿಗೆಯ ಮೇಲೆ ಹಾಸಲು ಶುದ್ಧವಾದ ಬಟ್ಟೆ ಹೊದ್ದಿಕೊಳ್ಳು ಬೆಡ್‌ಶೀಟ್‌ನ್ನೂ ಸಹ ನೀಡದೇ ರೋಗಿಗಳು ಪಾಪ ಚಳಿಯಲ್ಲೇ ನಡಗುತ್ತಿರುವ ದೃಶ್ಯ ಕಾಣ ಸಿಗುತ್ತದೆ, ಆ ಕೋಣೆಗೆ ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲದೇ ಇರುವುದು, ಅವರನ್ನು ನೋಡಿಕೊಳ್ಳುವ ಸಿಬ್ಬಂದಿಯ ಕೊರತೆ, ಇತ್ಯಾದಿ ನ್ಯೂನತೆಗಳು ಹೇರಳವಾಗಿ ಕಾಣ ಸಿಗುತ್ತವೆ. ಇದನ್ನು ನೋಡಿ ನೋಡದೆಯೋ ಅಥವಾ ಬೇಜವಾಬ್ದಾರಿತನದಿಂದಲೋ ಏನೋ ಗೊತ್ತಿಲ್ಲ ಅಥವಾ ಈ ಕುರಿತು ಅರಿವೇ ಇಲ್ಲವೇನೋ ಅಂತಿದೆ ಜಿಲ್ಲಾ ಆಸ್ಪತ್ರೆಯ ಆಡಳಿತ ಅಧಿಕಾರಿಗಳು.
ಹೋಗಲಿ ಈ ಎಲ್ಲಾ ವಿಚಾರಗಳನ್ನು ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಬಳಿ ಈ ಬಗ್ಗೆ ಚರ್ಚಿಸಲು ಮುಂದಾಗಿ ಅವರ ಕಛೇರಿಗೆ ತೆರಳಿದರೆ, ಪಾಪ ಅವರಿಗೆ ನೂರೆಂಟು ಕೆಲಸವಂತೆ ನಮ್ಮ ಅಹ್ವಾಲುಗಳನ್ನು ಕೇಳಲು ಸಮಯವೇ ಇಲ್ಲವೆಂದು ಹೇಳಿ ಹೊರ ನಡೆಯುವುದರಲ್ಲಿ ಮುಂದಾಗುತ್ತಾರೆ. ಅಲ್ಲದೇ ಪತ್ರಿಕಾ ಮಿತ್ರರು ಭೇಟಿಯಾಗಲು ಮುಂದಾದರೆ ಅವರಿಗೆ ಯಾವುದೋ ಸಭೆ / ಮೀಟಿಂಗ್ ಇದೆ ಎಂದು ಜಾರಿಕೊಳ್ಳುತ್ತಾರೆ. ಅವರಿಗೆ ಅವರ ಕಡತಗಳ ವಿಲೇವಾರಿ, ಇತ್ಯಾದಿಗಳಲ್ಲೇ ಅವರ ಕೆಲಸ ಮೀಸಲು ಎಂದು ಭಾವಿಸಿರಬೇಕು ಅನ್ನಿಸುತ್ತದೆ, ಹಾಗಾಗಿ ಅವರು ಯಾವ ಆಸ್ಪತ್ರೆಗಳ ಕಡೆಯೂ ತಿರುಗಿ ನೋಡುವುದಾಗಲೀ ಭೇಟಿ ಮಾಡದೇ ಇರುವುದೇ ಈ ಎಲ್ಲಾ ಅವಘಡಗಳಿಗೆ ಕಾರಣವಾಗಿರಬಹುದೇ? ಏಕೆಂದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳ ಕುರಿತು ಮಾಹಿತಿಯನ್ನು ಪಡೆಯುತ್ತಿದ್ದರೆ ಈ ಎಲ್ಲಾ ಆವಾಂತರಗಳು ನಡೆಯುತ್ತಿರಲಿಲ್ಲವೆನ್ನಬಹುದು.
ಈ ಎಲ್ಲದಕ್ಕೂ ಸ್ಪಷ್ಟೀಕರಣ ನೀಡುವವರಾದರೂ ಯಾರು? ಎಂಬ ಪ್ರಶ್ನೆಗೆ ಜನರಲ್ಲಿ ಉದ್ಭವಿಸಿದೆ……………