ಜನರ ಆರೋಗ್ಯ ದೃಷ್ಟಿಯಿಂದ ನೈಟ್ ಕರ್ಫ್ಯೂ ಜಾರಿ : ಸಿಎಂ
ಬೆಂಗಳೂರು :ಜನರ ಆರೋಗ್ಯ ದೃಷ್ಟಿಯಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಬಿಪಿಎಲ್ ಕುಟುಂಬಕ್ಕೆ ಪರಿಹಾರ ಈಗಾಗಲೇ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಚೆಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೋವಿಡ್ ನಿಯಂತ್ರಣ ಕ್ರಮವಾಗಿ ಘೋಷಿಸಲಾಗಿರುವ ನೈಟ್ ಕರ್ಫ್ಯೂ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಯಿಸಿ, ಜನರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಪಕ್ಷ ಸಂಘಟನೆ ಹಾಗೂ ವಿಷಯಾಧಾರಿತ ಚರ್ಚೆಗಳಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ. ಎರಡು ತಿಂಗಳಿಗೊಮ್ಮೆ ಈ ಸಭೆಯನ್ನು ಕೈಗೊಂಡು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು .
ಸಂಪುಟ ವಿಸ್ತರಣೆ ಪಕ್ಷದ ಆಂತರಿಕ ವಿಚಾರವಾಗಿದ್ದು, ಪಕ್ಷದ ಹೈಕಮಾಂಡ್ ಈ ಬಗ್ಗೆ ಗಮನಿಸಲಿದೆ. ಆಡಳಿತ ಮತ್ತು ಪಕ್ಷದ ನಡುವೆ ಸಮನ್ವಯ ಇದೆ. ಬರುವಂತಹ ದಿನಗಳಲ್ಲಿ ಸರ್ಕಾರ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 2023 ಕ್ಕೆ ಬಿಜೆಪಿ ತನ್ನ ಉತ್ತಮ ಕೆಲಸಗಳು ಹಾಗೂ ಸಾಧನೆಗಳನ್ನು ಜನರ ಮುಂದೆ ಇಡಲಿದೆ ಎಂದು ತಿಳಿಸಿದರು