ನರೇಂದ್ರ ಮೋದಿ ಪಾಟ್ನಾ ರ‍್ಯಾಲಿಯಲ್ಲಿ ಸ್ಫೋಟ ಪ್ರಕರಣ: ನಾಲ್ವರಿಗೆ ಮರಣ ದಂಡನೆ ವಿಧಿಸಿದ ಎನ್ಐಎ ನ್ಯಾಯಾಲಯ
ಪಾಟ್ನಾ, ನ. 1: ಆರು ಮಂದಿ ಸಾವನ್ನಪ್ಪಲು ಹಾಗೂ 89 ಮಂದಿ ಗಾಯಗೊಳ್ಳಲು ಕಾರಣವಾದ ಪಾಟ್ನಾ ಗಾಂಧಿ ಮೈದಾನದಲ್ಲಿ 2013ರಲ್ಲಿ ನರೇಂದ್ರ ಮೋದಿ ಭಾಷಣ ಮಾಡುವುದಕ್ಕೆ ಮುನ್ನ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ನಾಲ್ವರು ದೋಷಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.
ಎನ್ಐಎ ನ್ಯಾಯಾಲಯ ಈ ಪ್ರಕರಣದ ಇತರ ಐದು ಮಂದಿಗಳಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ, ಮತ್ತಿಬ್ಬರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಒಬ್ಬರಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ 2013 ಅಕ್ಟೋಬರ್ 27ರಂದು ನಡೆದ ‘ಹೂಂಕಾರ್ ರ್ಯಾಲಿ’ಯಲ್ಲಿ ಗುಜರಾತ್ ನ ಆಗಿನ ಮುಖ್ಯಮಂತ್ರಿ ಹಾಗೂ 2014ನೇ ಲೋಕಸಭೆಯ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಮಾತನಾಡಲಿದ್ದರು.
ನರೇಂದ್ರ ಮೋದಿ ಅವರು ಅಲ್ಲಿಗೆ ಆಗಮಿಸುವ ಕೆಲವು ನಿಮಿಷಗಳ ಮುನ್ನ ಸ್ಫೋಟ ಸಂಭವಿಸಿತ್ತು. ಗಾಂಧಿ ಮೈದಾನದಲ್ಲಿ ಸ್ಫೋಟ ಸಂಭವಿಸುವುದಕ್ಕಿಂತ ಮುನ್ನ ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಕೂಡ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದ ಸಂಚನ್ನು ನಿಷೇಧಿತ ಸಿಮಿ ಹಾಗೂ ಅದರ ನೂತನ ರೂಪವಾದ ಇಂಡಿಯನ್ ಮುಜಾಹಿದ್ದೀನ್ ನ ರಾಂಚಿ ಜಾಲ ರೂಪಿಸಿತ್ತು ಎಂದು ಅನಂತರ ತನಿಖೆಯಿಂದ ಬಹಿರಂಗಗೊಂಡಿತ್ತು. ಕಳೆದ ವಾರ ವಿಶೇಷ ಎನ್ಐಎ ನ್ಯಾಯಾಲಯ ಈ ಸರಣಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿ ದೋಷಿ ಎಂದು ಪರಿಗಣಿಸಿತ್ತು. ಸಾಕ್ಷಗಳ ಕೊರತೆಯಿಂದ ಓರ್ವನನ್ನು ಖುಲಾಸೆಗೊಳಿಸಿತ್ತು.