5 ರಾಜ್ಯಗಳಲ್ಲಿ ‘ನಿಗೂಢ’ ಜ್ವರ : ಸುಮಾರು 100 ಮಂದಿ ಮೃತ್ಯು
ಹೊಸದಿಲ್ಲಿ : ಉತ್ತರ ಮತ್ತು ಪೂರ್ವ ಭಾರತದಲ್ಲಿ ಕಳೆದ ತಿಂಗಳಲ್ಲಿ ತೀವ್ರ ಜ್ವರದಿಂದ ಸುಮಾರು 100 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, 3000ಕ್ಕೂ ಹೆಚ್ಚು ಜ್ವರದ ಪ್ರಕರಣಗಳು ಪತ್ತೆಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೊದಲ ಪ್ರಕರಣ ಉತ್ತರ ಪ್ರದೇಶದ ಫಿರೋಝಾಬಾದ್ ಜಿಲ್ಲೆಯಲ್ಲಿ ಆಗಸ್ಟ್ ಎರಡನೇ ವಾರ ಬೆಳಕಿಗೆ ಬಂದಿದ್ದು, ಸ್ಥಳೀಯ ಆರೋಗ್ಯ ಅಧಿಕಾರಿಗಳು ಇದನ್ನು ನಿಗೂಢ ಜ್ವರ ಎಂದು ಬಣ್ಣಿಸಿದ್ದಾರೆ. ಆದರೆ ಉತ್ತರ ಪ್ರದೇಶ ಸರ್ಕಾರ ಆ ಬಳಿಕ ಇದನ್ನು ಡೆಂಗ್ಯೂ ಜ್ವರ ಎಂದು ಖಚಿತಪಡಿಸಿದೆ. ಸೆಪ್ಟೆಂಬರ್ 6ರಂದು ಭೇಟಿ ನೀಡಿದ ಕೇಂದ್ರ ತಂಡ, ಬಹುತೇಕ ಪ್ರಕರಣಗಳಲ್ಲಿ ಸಾವಿಗೆ ಡೆಂಗ್ಯೂ ಕಾರಣ ಎಂದು ಅಭಿಪ್ರಾಯಪಟ್ಟಿದೆ. ಇತರ ಕೆಲ ಪ್ರಕರಣಗಳಲ್ಲಿ ಸ್ಕ್ರಬ್ ಟೈಫಸ್ (ಹುಳುಗಳಿಂದ ಬರುವ ಒಂದು ಬಗೆಯ ರೋಗ) ಲೆಪ್ಟೋಸ್ಪೈರೋಸಿಸ್ ಸಾವಿಗೆ ಕಾರಣ ಎಂದು ಸ್ಪಷ್ಟಪಡಿಸಿದೆ.
ಆದರೆ ವಿವಿಧ ರಾಜ್ಯಗಳ ಆರೋಗ್ಯ ಇಲಾಖೆ ಅಧಿಕಾರಿಗಳು ಸಾವಿಗೆ ವಿವಿಧ ಕಾರಣಗಳನ್ನು ನೀಡುತ್ತಿದ್ದಾರೆ. ಮಧ್ಯಪ್ರದೇಶ ಮತ್ತು ಹರ್ಯಾಣದಲ್ಲಿ ಸಾವಿಗೆ ಕಾರಣ ಇನ್ನೂ ಅಸ್ಪಷ್ಟ ಎಂದು ಅಧಿಕಾರಿಗಳು ಹೇಳಿದ್ದರೆ ಬಿಹಾರದಲ್ಲಿ ನ್ಯುಮೋನಿಯಾದಿಂದ ಈ ಸಾವುಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ. ಪಶ್ಚಿಮ ಬಂಗಾಳ ಆರೋಗ್ಯ ಅಧಿಕಾರಿಗಳ ಪ್ರಕಾರ ಇನ್‌ಫ್ಲುಯೆಝಾ ಕಾರಣದಿಂದ ರೋಗಿಗಳ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ.
ಹಲವು ಪ್ರಕರಣಗಳಲ್ಲಿ ಡೆಂಗ್ಯೂ ರೋಗಕ್ಕೆ ನಿಗದಿಪಡಿಸಿದ ಎನ್‌ಎಸ್1 ಆಂಟಿಜನ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿವೆ. ಆದರೆ ಪ್ಲೇಟ್ಲೆಟ್ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿವೆ ಎಂದು ಮಧ್ಯಪ್ರದೇಶದ ಹಿರಿಯ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಈ ರಕ್ತಮಾದರಿಗಳನ್ನು ರಾಷ್ಟ್ರೀಯ ವೈರಾಣು ಸಂಸ್ಥೆಗೆ ಹೆಚ್ಚಿನ ತಪಾಸಣೆಗಾಗಿ ಕಳುಹಿಸಲಾಗುವುದು ಎಂದು ವಿವರಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಕಳೆದ 45 ದಿನಗಳಲ್ಲಿ ಇಂಥ ಮೂರು ಸಾವಿರ ಪ್ರಕರಣಗಳು ವರದಿಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 1400 ಪ್ರಕರಣಗಳು ಕಳೆದ ಎರಡು ವಾರಗಳಲ್ಲಿ ವರದಿಯಾಗಿವೆ. ಮಂಡಸಾರ್ ಜಿಲ್ಲೆಯಲ್ಲಿ ಸಮಸ್ಯೆ ತೀವ್ರವಾಗಿದ್ದು, 886 ಪ್ರಕರಣಗಳು ವರದಿಯಾಗಿದ್ದರೆ, ಜಬಲ್ಪುರದಲ್ಲಿ 436 ಪ್ರಕರಣಗಳು ಬೆಳಕಿಗೆ ಬಂದಿವೆ.