ಕರ್ನಾಟಕದಲ್ಲಿ ಅಕ್ಟೋಬರ್‌ನಿಂದ ಹೊಸ ಶೈಕ್ಷಣಿಕ ವರ್ಷ, ಸಮಿತಿ ರಚನೆ_ ಡಿ ಸಿ ಎಂ ಅಶ್ವಥ್ ನಾರಾಯಣ್

 

 

2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಎಲ್ಲ ಕುಲಪತಿಗಳ ಜತೆ ಡಿಸಿಎಂ ಸಭೆ . ಕರ್ನಾಟಕದಲ್ಲಿ ಅಕ್ಟೋಬರ್‌ನಿಂದ ಹೊಸ ಶೈಕ್ಷಣಿಕ ವರ್ಷ . ಅಕ್ಟೋಬರ್‌ ಮೊದಲ ವಾರದಿಂದಲೇ ದಾಖಲಾತಿ ಆರಂಭ

 

ಬೆಂಗಳೂರು,= ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿನಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸುಗಳನ್ನು ಆರಂಭ ಮಾಡುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಕುಲಪತಿಗಳಿಗೆ ಸಲಹೆ ಮಾಡಿದ್ದಾರೆ.

2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಎಲ್ಲ ಕುಲಪತಿಗಳ ಜತೆ ಬೆಂಗಳೂರಿನಲ್ಲಿ ಮಂಗಳವಾರ ವರ್ಚುಯಲ್‌ ಚರ್ಚೆ ನಡೆಸಿದ ನಂತರ ಡಿಸಿಎಂ ಅವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು.

ಸಿಇಟಿ ಪರೀಕ್ಷೆಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ

ಕೋವಿಡ್‌ ಕಾರಣಕ್ಕೆ ಪ್ರಸಕ್ತ ವರ್ಷದಲ್ಲಿ ಪಿಯುಸಿ ವಿದ್ಯಾರ್ಥಿಗಳೆಲ್ಲರೂ ಪಾಸಾಗಿದ್ದಾರೆ. ವಿವಿಧ ಕೋರ್ಸುಗಳಿಗೆ ಬಹಳ ಬೇಡಿಕೆ ಬರುತ್ತಿದೆ. ವಿವಿಗಳಿಗೆ ಇದೊಂದು ಸುವರ್ಣಾವಕಾಶ. ನಾಲ್ಕು ವರ್ಷದ ಪದವಿ ತರಗತಿಗಳನ್ನು ಆರಂಭ ಮಾಡುವ ಮೂಲಕ ವಿವಿಗಳು ಪದವಿ ವ್ಯಾಸಂಗದ ಅಭಿಲಾಶೆಯುಳ್ಳ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಕುಲಪತಿಗಳಿಗೆ ಸೂಚಿಸಲಾಗಿದೆ ಎಂದರು.

ಎನ್‌ಇಪಿ ಜಾರಿಗೆ ವಿಷಯವಾರು ಸಮಿತಿ ರಚನೆ:

ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಅದಕ್ಕೆ ಸೂಕ್ತವಾದ ʼಕಾರ್ಯ ಚೌಕಟ್ಟುʼ ರೂಪಿಸಲು ವಿಷಯವಾರು ಸಮಿತಿ ರಚನೆ ಮಾಡುವಂತೆಯೂ ಕುಲಪತಿಗಳಿಗೆ ಸೂಚನೆ ನೀಡಲಾಗಿದ್ದು, ಜುಲೈ 15ರೊಳಗೆ ಈ ಸಮಿತಿಗಳು ವರದಿಗಳನ್ನು ಸಲ್ಲಿಸಬೇಕೆಂದು ತಿಳಿಸಲಾಗಿದೆ ಎಂದು ಡಿಸಿಎಂ ಹೇಳಿದರು.

ಇನ್ನು ಸದ್ಯಕ್ಕೆ ನಮ್ಮನ್ನು ಕಾಡುತ್ತಿರುವ ಈ ವೈರಸ್‌ ಎಷ್ಟು ಕಾಲ ಇರುತ್ತೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆನ್‌ಲೈನ್‌ ಮತ್ತು ಆಫ್ ಲೈನ್‌ ನಲ್ಲಿ ಕಲಿಯಲು ಅವಕಾಶ ಇರಲೇಬೇಕು. ಅದಕ್ಕೆ ಬೇಕಾದ ಎಲ್ಲ ತಾಂತ್ರಿಕ ಸೌಲಭ್ಯಗಳು ವಿದ್ಯಾಸಂಸ್ಥೆಗಳಲ್ಲಿ ಇರಬೇಕು. ಡಿಜಿಟಲ್‌ನಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವರ್ಚಯುಲ್‌ ಮೂಲಕ ಬೋಧನೆ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಅಕ್ಟೋಬರ್‌ನಿಂದ ಹೊಸ ಶೈಕ್ಷಣಿಕ ವರ್ಷ

ಎಲ್ಲ ವಿವಿಗಳ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅಕ್ಟೋಬರ್‌ ಮೊದಲ ವಾರದಲ್ಲಿ ಈ ವರ್ಷದ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಆರಂಭವಾಗುತ್ತವೆ. ಮೊದಲ ವರ್ಷದ ಪದವಿಗೆ ಅಕ್ಟೋಬರ್‌ ಮೊದಲ ವಾರದಿಂದಲೇ ದಾಖಲಾತಿ ಆರಂಭ ಮಾಡುವಂತೆ ಕುಲಪತಿಗಳಿಗೆ ತಿಳಿಸಲಾಗಿದೆ ಎಂದರು ಡಿಸಿಎಂ.

ಕೆಲ ಕಡೆ ಪರೀಕ್ಷೆಗಳು ನಡೆದಿವೆ, ಇನ್ನು ಕೆಲವೆಡೆ ಆಗಿಲ್ಲ. ಈ ಬಗ್ಗೆ ಕೂಡ ಚರ್ಚೆ ನಡೆಸಲಾಯಿತು. ಇನ್ನು ಈಗಾಗಲೇ ದೈನಂದಿನ ತರಗತಿಗಳು ಶುರುವಾಗಿದ್ದು, ಅವುಗಳನ್ನು ಕೂಡ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಆಧಾರದಲ್ಲೇ ನಡೆಸಲಾಗುವುದು ಎಂದ ಅವರು, ಮುಂದಿನ ವರ್ಷದ ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳು ಪೈಪೋಟಿ ನಡೆಸಬೇಕಾದರೆ ಕಲಿಕೆ ಮತ್ತು ಬೋಧನೆಯಲ್ಲಿ ಗುಣಮಟ್ಟ ಇರಬೇಕು ಎಂಬ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಯಿತು ಎಂದರು.

ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡು ವಿದ್ಯಾಭ್ಯಾಸ ನಡೆಸುವ ನಿಟ್ಟಿನಲ್ಲಿ ಎಲ್ಲರಿಗೂ ಟ್ಯಾಬ್‌ ನೀಡಲಾಗುತ್ತಿದೆ. ಸ್ಮಾರ್ಟ್‌ ಕ್ಲಾಸ್‌ಗಳು ಶುರುವಾಗುತ್ತಿವೆ. ಈಗಾಗಲೇ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಅವರು ಹೇಳಿದರು.

ಏಕೀಕೃತ ವಿವಿ- ಕಾಲೇಜು ನಿರ್ವಹಣಾ ವ್ಯವಸ್ಥೆ

ಮುಂದಿನ ದಿನಗಳಲ್ಲಿ ವಿ.ವಿಗಳು ಹಾಗೂ ಕಾಲೇಜುಗಳನ್ನು ಅನುಸಂಧಾನಗೊಳಿಸಿ ʼಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆʼ ಮೂಲಕ ಈ ವರ್ಷದಿಂದಲೇ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕಾಗಿ ಪ್ರತ್ಯೇಕ ಡಿಜಿಟಲ್‌ ಪೋರ್ಟಲ್‌ ಸಿದ್ಧವಾಗುತ್ತಿದ್ದು, ಅದನ್ನು ಇ-ಗವರ್ನೆನ್ಸ್‌ ಇಲಾಖೆ ಅಭಿವೃದ್ಧಿಪಡಿಸುತ್ತಿದೆ. ಜೂನ್‌ 25ರಿಂದ ಪ್ರಾಯೋಗಿಕವಾಗಿ ಇದನ್ನು ಬಳಸಲು ಸರಕಾರ ಅನುಮತಿ ನೀಡಿದ್ದು, ಜುಲೈ 15ಕ್ಕೆ ಲೋಕಾರ್ಪಣೆ ಆಗಲಿದೆ. ದಾಖಲಾತಿಗೆ ನಿಗದಿ ಮಾಡಿರುವ ದಿನಾಂಕಕ್ಕೆ ಮುನ್ನವೇ ಎಲ್ಲ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಪೋರ್ಟಲ್‌ ಬಳಕೆಗೆ ಸಿದ್ಧವಾಗಿರಬೇಕು ಎಂದು ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಅಲ್ಲದೆ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಇನ್ನು ಮುಂದೆ ಇ-ಆಫೀಸ್‌ ಮೂಲಕವೇ ನಡೆಯುತ್ತವೆ. ಕಾಗದ ಪತ್ರಗಳಿಗೆ ಅವಕಾಶ ಇಲ್ಲ ಎಂದು ಇದೇ ವೇಳೆ ಸ್ಪಷ್ಟವಾಗಿ ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version