ಸರ್ಕಾರಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸಲು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ಸರ್ಕಾರಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸಲು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸುವಂತೆ ಮುಜರಾಯಿ, ವಕ್ಪ್ ಮತ್ತು ಹಜ್ ಸಚಿವರಾದ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆಯಾದ ಮೇಲೆ ಬುಧವಾರ ಶಶಿಕಲಾ ಜೊಲ್ಲೆಯವರು ನೂತನ ಕಚೇರಿ ಪೂಜೆ ಮಾಡಿದರು.

ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳಿಂದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಎ. ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳ ಜಿಲ್ಲಾವಾರು ದೇವಸ್ಥಾನಗಳ ಮಾಹಿತಿ ಪಡೆದುಕೊಂಡು, ಆಸ್ತಿ ಎಷ್ಷಿದೆ ಎಂದು ಸಮೀಕ್ಷೆ ನಡೆಸಿ, ದೇವಸ್ಥಾನಗಳ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

 

ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಅಲ್ಲದೆ ಭಕ್ತರಿಗೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮುಜಾರಾಯಿ ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯುವ ಯೋಜನೆಗಳ ಮಾಹಿತಿ ಪಡೆದುಕೊಂಡರು. ರಾಜ್ಯದ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಬಳಿ ಭಕ್ತರಿಗೆ ವಸತಿಗಾಗಿ ಎಷ್ಟು ಯಾತ್ರಿ ನಿವಾಸಗಳಿವೆ. ರಾಜ್ಯದಲ್ಲಿ ಯಾವ ದೇವಸ್ಥಾನದ ವ್ಯಾಪ್ತಿಯಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲು ಅವಕಾಶ ಇದೆ ಎನ್ನುವ ಬಗ್ಗೆ ಸಂಪೂರ್ಣ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದರು.

 

ಅಲ್ಲದೇ ಮಹಾರಾಷ್ಟ್ರದ ಪಂಡರಪುರ ಹಾಗೂ ತುಳಜಾಭವಾನಿ ದೇವಸ್ಥಾನದ ಬಳಿ ತಿರುಪತಿ ಮಾದರಿ ಯಾತ್ರಿ ನಿವಾಸ್ ನಿರ್ಮಾಣ ಮಾಡುವ ಕುರಿತು ಅಲ್ಲಿ ರಾಜ್ಯ ಸರ್ಕಾರದ ಜಮೀನು ಎಷ್ಟಿದೆ ಎನ್ನುವ ಮಾಹಿತಿ ಪಡೆಯುವಂತೆ ಸೂಚಿಸಿದರು. ಆಂಧ್ರಪ್ರದೇಶದ ಶ್ರೀಶೈಲಂಗೆ ಭೇಟಿ ನೀಡಿ ಅಲ್ಲಿಯೂ ರಾಜ್ಯದ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡುವ ಕುರಿತು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದರು.

 

ಅದೇ ರೀತಿ, ತಮಿಳುನಾಡು, ಕೇರಳದ ಪ್ರಸಿದ್ಧ ದೇವಸ್ಥಾನಗಳಲ್ಲಿ ಯಾತ್ರಿ ನಿವಾಸಗಳನ್ನು ತೆರೆಯುವ ಬಗ್ಗೆ ವಸ್ತುಸ್ಥಿತಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

 

ಇನ್ನು ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಸಂಪೂರ್ಣ ನಿಷೇಧ ಹೇರುವ ಬದಲು ನಿರ್ದಿಷ್ಟ ಭಕ್ತರನ್ನು ಹಂತ ಹಂತವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಯಾವ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ತಿಳಿದುಕೊಂಡು ಮಾಹಿತಿ ನೀಡುವಂತೆ ಸೂಚಿಸಿದರು.

ಇನ್ನು ರಾಜ್ಯ ಸರ್ಕಾರದ ಮಹತ್ವದ ಸಾಮೂಹಿಕ ಮದುವೆ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಈ ಯೋಜನೆ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಯೋಜನೆ ಯಶಸ್ವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

 

ಇದೇ ವೇಳೆ. ವಕ್ಫ್ ಮತ್ತು ಹಜ್ ಇಲಾಖೆ ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕ ಸರ್ಫರಾಜ್ ಖಾನ್ ಅವರೊಂದಿಗೆ ಚರ್ಚೆ ನಡೆಸಿದ ಸಚಿವರು ಹಜ್ ಭವನದಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಪಡೆದರು. ಹಜ್ ಭವನ ಕೊವಿಡ್ ಕೇಂದ್ರವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಮುಜರಾಯಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version