24 ಗಂಟೆಗಳಲ್ಲಿ ಟಾನ್ಸ್ ಫಾರ್ಮರ್ ಗಳ ದುರಸ್ತಿ: ಇಂಧನ ಸಚಿವ ಸುನೀಲ್ ಕುಮಾರ್
ಬೆಂಗಳೂರು: `ಸುಟ್ಟು ಹೋದ ವಿದ್ಯುತ್ ಪರಿವರ್ತಕ(ಟ್ರಾನ್ಸ್‍ಫಾರ್ಮರ್)ಗಳನ್ನು 24 ಗಂಟೆಯಲ್ಲಿ ಬದಲಿಸುವ ನೂತನ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.
ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಜಿ.ಕರುಣಾಕರ ರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಇಂಧನ ಇಲಾಖೆಯಲ್ಲಿ ಸುಧಾರಣೆಗೆ ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದೆ. ಸುಟ್ಟುಹೋದ ಟಿಸಿಗಳನ್ನು ಕೇವಲ 24 ಗಂಟೆಯೊಳಗೆ ಬದಲಿಸಲು ಸೂಚಿಸಲಾಗಿದೆ’ ಎಂದರು.
`ರಾಜ್ಯದಲ್ಲಿ 160 ಟಿಸಿ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಈಗಾಗಲೇ 159 ಕಡೆ ಟಿಸಿ ದುರಸ್ತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನು 10 ಕಡೆಗಳಲ್ಲಿ ಟಿಸಿ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಸುಟ್ಟುಹೋದ ಟಿಸಿಗಳ ದುರಸ್ತಿ ಮತ್ತು ಅದನ್ನು ಎಲ್ಲಿಗೆ ಕೊಂಡೊಯ್ಯಲಾಯಿತು ಎಂಬ ಮಾಹಿತಿ ತಿಳಿಯಲು ಆ್ಯಪ್ ನಿರ್ಮಾಣಕ್ಕೆ ಎಲ್ಲ ವಿದ್ಯುತ್ ಕಂಪೆನಿಗಳಿಗೆ ಸೂಚಿಸಲಾಗಿದ್ದು, 100 ದಿನದೊಳಗೆ ನೂತನ ವ್ಯವಸ್ಥೆ ಜಾರಿಯಾಗಲಿದೆ’ ಎಂದು ತಿಳಿಸಿದರು.
`ಹರಪನಹಳ್ಳಿ ಕ್ಷೇತ್ರದಲ್ಲಿ ಪ್ರಾಕೃತಿಕ ವೈಪರೀತ್ಯಗಳಿಂದ ವಿದ್ಯುತ್ ಪರಿವರ್ತಕಗಳು ವಿಫಲವಾಗುತ್ತಿವೆ. ಆಗಸ್ಟ್ ಅಂತ್ಯಕ್ಕೆ ಹರಪನಹಳ್ಳಿ ತಾಲೂಕಿನಲ್ಲಿ 483 ಟಿಸಿ ವಿಫಲಗೊಂಡಿದ್ದು, 72 ಗಂಟೆಯೊಳಗೆ ದುರಸ್ತಿ ಮಾಡಲಾಗಿದೆ. ಹರಪನಹಳ್ಳಿ ತಾಲೂಕಿನ 120 ಕೆವಿ ವಿದ್ಯುತ್ ಕೇಂದ್ರದಿಂದ ಆರು ಉಪಕೇಂದ್ರಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದೆ. ಹೆಚ್ಚುವರಿ ಉಪಕೇಂದ್ರವನ್ನು ಅಗತ್ಯಬಿದ್ದರೆ ಒದಗಿಸಲಾಗುವುದು ಎಂದು ಅವರು ಹೇಳಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಕರುಣಾಕರ ರೆಡ್ಡಿ, ವಿದ್ಯುತ್ ಲೋ ವೋಲ್ಟೆಜ್ ಮತ್ತು ಹೈವೋಲ್ಟೆಜ್‍ನಿಂದ ಟಿಸಿ ವಿಫಲವಾಗಿ ಕೃಷಿ ಪಂಪ್‍ಸೆಟ್‍ಗಳು ಸುಟ್ಟು ಹೋದರೆ ಇದಕ್ಕೆ ಯಾರು ಹೊಣೆ. ಸರಕಾರ ಆ ರೈತರಿಗೆ ಏನಾದರೂ ಪರಿಹಾರ ನೀಡಲಿದೆಯೇ ಎಂದು ಪ್ರಶ್ನಿಸಿದರು.