ಗಾರ್ಮೆಂಟ್ಸ್ ನೌಕರರಿಗೆ ಲಸಿಕೆ ನೀಡಲು ಕ್ರಮವಹಿಸುವಂತೆ ಸಚಿವ ಜೆ.ಸಿ. ಮಾಧುಸ್ವಾಮಿ ಸೂಚನೆ

 

 

ತುಮಕೂರು

 

: ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಗಾರ್ಮೆಂಟ್ಸ್ ಮಾಲೀಕರೇ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಗಾರ್ಮೆಂಟ್ಸ್ ಮಾಲೀಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಚಿವರು, ಕೈಗಾರಿಕೆ ಮತ್ತು ಗಾರ್ಮೆಂಟ್ಸ್ ಮಾಲೀಕರೇ ತಮ್ಮ ನೌಕರರಿಗೆ ಲಸಿಕೆ ಹಾಕಿಸಲು ಮುತುವರ್ಜಿ ವಹಿಸಬೇಕು. ಇದಕ್ಕೆ ಜಿಲ್ಲಾಡಳಿತದ ಸಹಕಾರ ಇರುತ್ತದೆ ಎಂದರು.

ಸರ್ಕಾರದ ನಿರ್ದೇಶನದಂತೆ ಈಗಾಗಲೇ ಜಿಲ್ಲೆಯಲ್ಲಿ ಮುಂಚೂಣಿ ಕಾರ್ಯಕರ್ತರಾದ ಅಂಗವಿಕಲರು, ಚಿತಾಗಾರ, ನ್ಯಾಯಾಂಗ, ಬೀದಿ ಬದಿ ವ್ಯಾಪಾರಿಗಳು, ಆಸ್ಪತ್ರೆಯ ಸಿಬ್ಬಂದಿ, ಕೋವಿಡ್ ನಿಯೋಜಿತ ಶಿಕ್ಷಕರು, ವಯೋವೃದ್ಧರ ರಕ್ಷಣೆಗೆ ನಿಂತವರು ಸೇರಿದಂತೆ ಇನ್ನಿತರೆ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 50 ಸಾವಿರ ಮಂದಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಸೋಂಕು ಉಲ್ಬಣವಾಗದ ರೀತಿ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಮಾಲೀಕರೇ ಲಸಿಕೆ ಖರೀದಿಸಿ ನೌಕರರಿಗೆ ನೀಡುವ ವ್ಯವಸ್ಥೆ ಮಾಡುವುದು ಉತ್ತಮವಾದ ಕೆಲಸ. ಇಲ್ಲವಾದಲ್ಲಿ ಸೋಂಕು ನಿಯಂತ್ರಣ ಕಷ್ಟ ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.

ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಭಾಗದ ಗಾರ್ಮೆಂಟ್ಸ್ ನೌಕರರು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಈ ನೌಕರರನ್ನು ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಪಾಲಿಸದೆ ಆಟೋ ಅಥವಾ ಟೆಂಪೋಗಳಲ್ಲಿ ಕೆಲಸಕ್ಕೆ ಕರೆದೊಯ್ಯಲಾಗುತ್ತಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಅವರಿಗೆ ನಿರ್ದೇಶಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈ. ಎಸ್.ಪಾಟೀಲ ಮುಂಚೂಣಿ ಕಾರ್ಯಕರ್ತರಿಗೆ ಜಿಲ್ಲೆಗೆ 12 ಲಕ್ಷ ಲಸಿಕೆ ಅವಶ್ಯಕತೆ ಇದೆ. ಈಗ ದಿನಕ್ಕೆ ಮೂರು ಸಾವಿರ ಲಸಿಕೆ ಬರುತ್ತಿದೆ. ಹಾಗಾಗಿ ಕೈಗಾರಿಕೆಗಳ ಮಾಲೀಕರೇ ಲಸಿಕೆ ಖರೀದಿಸಿ ನೌಕರರಿಗೆ ನೀಡುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

 

 

*ಕೋವಿಡ್ ನಿಯಂತ್ರಣ ಮತ್ತು ಲಸಿಕೆ ಕುರಿತ ಸಭೆ* ನಂತರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಲಸಿಕೆ ವಿತರಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕೋವಿಡ್ ಪರೀಕ್ಷೆಗಳ ಪ್ರಮಾಣ ಹೆಚ್ಚಿಸುವಂತೆ ಸೂಚಿಸಿದರು.

ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪಾಟಿಸಿಟಿವಿಟಿ ಶೇಕಡವಾರು ಪ್ರಮಾಣ ಕಡಿಮೆಯಾಗುತ್ತಿದೆ. ಇದನ್ನು ಮತ್ತಷ್ಟು ಇಳಿಸಲು ಕೋವಿಡ್ ಪರೀಕ್ಷೆಗಳನ್ನು ಹೆಚ್ಚುಗೊಳಿಸಬೇಕು. ತಾಲೂಕು ಮತ್ತು ಪಿಎಚ್‌ಸಿಗಳಲ್ಲಿ ದೂರುಗಳು ಬಾರದ ರೀತಿಯಲ್ಲಿ ಸಮರ್ಪಕ ಲಸಿಕಾ ವಿತರಣೆಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಜಿಲ್ಲೆಯಲ್ಲಿರುವ ಕೋವಿಡ್ ಸೆಂಟರ್ ನಿರ್ವಹಣೆ, ಆಮ್ಲಜನಕ ಬೆಡ್, ಐ.ಸಿ.ಯು ಬೆಡ್, ಸೋಂಕಿತರಿಗೆ ನೀಡುವ ಔಷಧದ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.

ಇದೇ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು ಮಾತನಾಡಿ, ವರದಿಯಾದ 12 ಬ್ಲಾಕ್ ಫಂಗಸ್ ಪ್ರಕರಣಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ, ಖಾಸಗಿ ಹಾಗೂ ಇ.ಎನ್.ಟಿ ವೈದ್ಯರು ಅವಶ್ಯಕತೆ ಇರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆಗೊಳಪಡಿಸುತ್ತಿದ್ದಾರೆ ಎಂದು ಸಚಿವರಿಗೆ ಮಾಹಿತಿ ಒದಗಿಸಿದರು.

ಸಭೆಯ ಕೊನೆಯಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯ‌ ಎಲ್ಲ ತಾಲ್ಲೂಕುಗಳಲ್ಲಿ ಮಕ್ಕಳ ಚಿಕಿತ್ಸಾ ವಾರ್ಡ್ಗಳನ್ನು ಸ್ಥಾಪಿಸಬೇಕು. ಇದರಿಂದ ಮಕ್ಕಳ ಪೌಷ್ಟಿಕ ಗುಣಮಟ್ಟ ಕಾಪಾಡಲು ಅನುಕೂಲವಾಗುತ್ತದೆ. ಇದಲ್ಲದೆ, ಜಿಲ್ಲೆಯಲ್ಲಿ ಮುಂಗಾರು ಚುರುಕು ಗೊಂಡಿದ್ದು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೀಜ, ರಸಗೊಬ್ಬರ, ಸೇರಿದಂತೆ ಕೃಷಿ ಪರಿಕರಗಳ ಅಂಗಡಿಗಳನ್ನು ಲಾಕ್ ಡೌನ್‌ನಿಂದ ವಿನಾಯಿತಿ ನೀಡಿ ಮಳಿಗೆ ತರೆಯಲು ಸೂಕ್ತ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ನಗರ ಶಾಸಕ ಜ್ಯೋತಿ ಗಣೇಶ್, ಸಿಇಓ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಎಸಿ ಅಜಯ್, ಡಿಹೆಚ್‌ಓ ನಾಗೇಂದ್ರಪ್ಪ, ಡಾ.ಕೇಶವರಾಜ್, ಡಾ. ಸನತ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version