ಶಾಲಾ-ಕಾಲೇಜು ಆರಂಭದ ಹಿನ್ನೆಲೆ ಶಾಲೆಗಳಿಗೆ ಭೇಟಿ ನೀಡಿದ _ಸಚಿವ ಬಿ.ಸಿ ನಾಗೇಶ್
ತುಮಕೂರು: ರಾಜ್ಯದಲ್ಲಿ ನಾಳೆಯಿಂದ 9 ರಿಂದ 12ನೇ ತರಗತಿವರೆಗೆ ಶಾಲೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಶಾಲೆಗಳಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭೇಟಿ ನೀಡಿ ಸಿದ್ದತೆ ಕೈಗೊಂಡಿರುವುದನ್ನು ಪರಿಶೀಲಿಸಿದರು.
ನಗರದ ಹೊರವಲಯದ ಸಿದ್ದಾರ್ಥ ನಗರದಲ್ಲಿರುವ ಸಿದ್ದಾರ್ಥ ಗ್ರಾಮಾಂತರ ಪ್ರೌಢಶಾಲೆ, ಸರಸ್ವತಿಪುರಂನ ವಿದ್ಯಾನಿಕೇತನ ಶಾಲೆಗಳಿಗೆ ಭೇಟಿ ನೀಡಿದ ಸಚಿವ ನಾಗೇಶ್ ಅವರು, ಮಕ್ಕಳು ಕೂರುವ ಶಾಲಾ ಕೊಠಡಿಗಳು, ಶೌಚಾಲಯಗಳ ಸ್ವಚ್ಚತೆಯನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಮನೆಗಳಲ್ಲಿ ಮಕ್ಕಳಿಗೆ ನಾವು ಎಷ್ಟೇ ಪ್ರಯತ್ನ ಮಾಡಿದರೂ ಆನ್ ಲೈನ್ ನಲ್ಲಿ ಉತ್ತಮ ಶಿಕ್ಷಣ ಕೊಡಲು ಸಾಧ್ಯವಾಗುತ್ತಿಲ್ಲ. ಬೇರೆ ಬೇರೆ ಕಾರಣಗಳಿಂದಾಗಿ ಹಾಗೂ ಫೋನ್ ಹಿಡಿದು ಮಕ್ಕಳು ಶಿಕ್ಷಣ ಕಲಿಯಲು ಕಡಿಮೆ ಆಸಕ್ತಿ ತೋರುತ್ತಿದ್ದುದೂ ಸಹ ಒಂದು ಕಾರಣವಾಗಿದೆ ಎಂದರು.
ಮುಖ್ಯಮಂತ್ರಿಗಳು 23 , ಟಾಸ್ಕ್ ಫೋರ್ಸ್, ತಾಂತ್ರಿಕ ಸಲಹಾ ಸಮಿತಿ ಒಪ್ಪಿರುವಲುದರಿಂದ ಶಾಲೆ ಆರಂಭಿಸಲಾಗುತ್ತಿದೆ. ಎಲ್ಲ ಕಡೆ ಡಿಡಿಪಿಐ ಮತ್ತು ಬಿಇಓಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಎಲ್ಲರೂ ಶಾಲೆ ಆರಂಭಿಸಲು ಆಸಕ್ತಿ ತೋರಿದ್ದಾರೆ ಎಂದರು.
ಎಸ್ಓಪಿ ಅನುಸರಣೆ ಮಾಡುತ್ತಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸುವ ಸಲುವಾಗಿ ನಾನು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು.
ಶಾಲೆಗಳಿಗೆ ಬರುವ ಮಕ್ಕಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ. ಆದರೆ ಹಾಜರಾತಿ ಕಡ್ಡಾಯವಲ್ಲ ಎಂದರು.
ಕೋವಿಡ್ 3ನೇ ಅಲೆ ಮಕ್ಕಳಿಗೆ ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದುದು ನಿಜ. ಆದರೆ ಮಕ್ಕಳ ತಜ್ಞರು ಹೇಳುವ ಪ್ರಕಾರ ಈ ಸೋಂಕು ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ತುಂಬಾ ಕಡಿಮೆ. ಅದರಲ್ಲೂ ಪ್ರಾಣ ಹಾನಿಯಾಗುವುದು ತುಂಬಾ ಕಡಿಮೆ ಇದೆ ಎಂದು ಹೇಳುತ್ತಿದ್ದಾರೆ. ಶಾಲೆಗಳನ್ನು ಆರಂಭಿಸುವ ಚಿಂತನೆ ನಡೆಸಿ ಆ. 23 ರಿಂದ ಆರಂಭವಾಗುತ್ತಿವೆ ಎಂದರು.
3ನೇ ಅಲೆ ದೇಶದಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಹೊರತುಪಡಿಸಿದರೆ ಇನ್ನು ಯಾವ ರಾಜ್ಯದಲ್ಲೂ ಕಂಡು ಬಂದಿಲ್ಲ. ಹಾಗಾಗಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಶೇ. 2 ರಷ್ಟಿಕ್ಕಿಂತ ಹೆಚ್ಚು ಸೋಂಕು ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸುತ್ತಿಲ್ಲ. ಇದಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.
ಶಿಕ್ಷಕರು ಕಡ್ಡಾಯವಾಗಿ ಲಸಿಕೆ ಪಡೆದಿರಲೇಬೇಕು. ಲಸಿಕೆ ಪಡೆಯದೇ ಇರುವ ಶಿಕ್ಷಕರಿಗೆ ಹಾಜರಾಗಲು ಅವಕಾಶ ಕೊಡುವುದಿಲ್ಲ. ರಜೆ ಬದಲಿಗೆ ಗೈರು ಹಾಜರಾತಿ ಎಂದು ಪರಿಗಣಿಸಲಾಗುತ್ತದೆ ಎಂದರು.
ಈಗಾಗಲೇ ಶೇ. 95 ರಷ್ಟು ಶಿಕ್ಷಕರು ಲಸಿಕೆ ಪಡೆದಿದ್ದಾರೆ. ಕಳೆದ 2 ದಿನಗಳಲ್ಲಿ ಲಸಿಕೆ ಪಡೆಯದಿದ್ದವರೂ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಿಡಿಪಿಐ ಸಿ. ನಂಜಯ್ಯ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.