ಸುಳ್ಯ ತಾಲೂಕಿನ ಅರಂತೋಡು ಗ್ರಾಮದಂಚಿನ ಕಾಡು ಪ್ರದೇಶದಲ್ಲಿ 17 ವರ್ಷಗಳಿಂದ ಓರ್ವ ವ್ಯಕ್ತಿ ವಾಸ

 

 

 

ಮಂಗಳೂರು _ಇವರು ನೋಡಲು ಕಾಡು ಮನುಷ್ಯನಂತೆ. ಆದರೆ ಅವರು ನಿಜಕ್ಕೂ ಕಾಡು ಮನುಷ್ಯನಲ್ಲ. ಮೃದು ಮನಸ್ಸಿನ ವ್ಯಕ್ತಿ ಇವರು. ಅಂದಹಾಗೇ ನಾಗರಿಕ ಸಮಾಜದಿಂದ ದೂರ ಇರಬೇಕೆಂದು ತೀರ್ಮಾನಿಸಿ 17 ವರ್ಷವೇ ಕಳೆದಿದೆ. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದಂಚಿನ ಕಾಡು ಪ್ರದೇಶದಲ್ಲಿ 17 ವರ್ಷಗಳಿಂದ ಓರ್ವ ವ್ಯಕ್ತಿ ಕಾಡಿನಲ್ಲಿ ವಾಸ ಮಾಡುತ್ತಿದ್ದಾರೆ. ಒಂದು ಪ್ರೀಮಿಯರ್ ಪದ್ಮಿನಿ ಕಾರಿನ ಮೇಲೆ ಗುಡಿಸಲೊಂದನ್ನು ನಿರ್ಮಿಸಿ ಕಾಡಿನಲ್ಲೇ ವಾಸಿಸುತ್ತಿದ್ದಾರೆ. ಸುಳ್ಯ ತಾಲೂಕಿನಿಂದ ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಅರಂತೋಡು ಗ್ರಾಮದ ಅಡ್ತಲೆ-ನೆಕ್ಕರೆ ದುರ್ಗಮ ಅರಣ್ಯದ ನಡುವೆ ಸಾಗಿದರೆ ಸಾಕು, ಒಂದು ಸಣ್ಣ ಪ್ಲಾಸ್ಟಿಕ್ ಹೊದಿಕೆಯುಳ್ಳ ಅವರ ಗುಡಿಸಲು ಕಾಣಸಿಗುತ್ತದೆ. ಗುಡಿಸಲಿನ ಒಳಗೆ ಹಳೆಯ ಅಂಬಾಸಿಡರ್ ಕಾರ್ ಒಳಗೆ ಓರ್ವ ವ್ಯಕ್ತಿ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಕಾಡು ಮನುಷ್ಯನಂತೆ ಕಾಣಿಸುವ ಇವರು ನಿಜಕ್ಕೂ ಕಾಡು ಮನುಷ್ಯನಲ್ಲ. ವಿದ್ಯಾವಂತ ವ್ಯಕ್ತಿ. ಇವರ ಹೆಸರು ಚಂದ್ರಶೇಖರ್. ಮೂಲತಃ ಸುಳ್ಯ ತಾಲೂಕಿನ ನೆಕ್ರಾಲ್ ಕೆಮ್ರಾಜೆ ಗ್ರಾಮದವರು. 2003ರವರೆಗೆ ಚಂದ್ರಶೇಖರ್ ಎಲ್ಲರಂತೆ ಬದುಕುತ್ತಿದ್ದರು. ಒಂದೂವರೆ ಎಕರೆ ಪ್ರದೇಶದಲ್ಲಿ ಅಡಿಕೆ ಕೃಷಿ ಮಾಡುತ್ತಾ ಒಳ್ಳೆಯ ಜೀವನವನ್ನು ನಡೆಸುತ್ತಿದ್ದರು. ಎಲಿಮಲೆ ಸಹಕಾರಿ ಬ್ಯಾಂಕ್ ನಿಂದ 40 ಸಾವಿರ ಸಾಲ ಪಡೆದುಕೊಂಡ ಚಂದ್ರಶೇಖರ್ ಸಾಲ ಮರುಪಾವತಿ ಮಾಡಲಾಗದೇ ಈ ಪರಿಸ್ಥಿತಿಗೆ ಬಂದಿದ್ದಾರೆ. ಬ್ಯಾಂಕ್ ಗೆ ಸಾಲ ಮರುಪಾವತಿ ಮಾಡಿದೇ ಇದ್ದುದ್ದರಿಂದ ಅವರ ಜಮೀನನ್ನು ಬ್ಯಾಂಕ್ ಹರಾಜು ಹಾಕಿತ್ತು. ಇದರಿಂದ ಸೂರು ಕಳೆದುಕೊಂಡು ಚಂದ್ರಶೇಖರ್ ನಾಗರಿಕ ಸಮಾಜವನ್ನು ಧಿಕ್ಕರಿಸಿ ಕಾಡಿನತ್ತ ಮುಖ ಮಾಡಿ ವಾಸವಿದ್ದಾರೆ. ಬ್ಯಾಂಕ್​ನವರು ಸರಿಯಾದ ನಿಯಮವನ್ನು ಕೂಡ ಪಾಲಿಸದೇ ಚಂದ್ರಶೇಖರ್ ಆಸ್ತಿಯನ್ನು ಹರಾಜಿಗಿಟ್ಟರು. ಬ್ಯಾಂಕ್ ನವರು ಸಣ್ಣ ಮೊತ್ತಕ್ಕೆ ಇವರ ಕೃಷಿ ಜಮೀನಿನನ್ನು ಹರಾಜಿಗಿಟ್ಟಾಗ ಚಂದ್ರಶೇಖರ್ ಆಘಾತ ಉಂಟಾಯಿತು. ಇವರು ಮಾಡಿದ್ದ ಸಾಲಕ್ಕಾಗಿ ಇವರ ಜಮೀನನ್ನು ಹರಾಜು ಮಾಡಿದರು. ಇದನ್ನು ನೋಡಿ ಆಡಳಿತ ವ್ಯವಸ್ಥೆಯ ಮೇಲೆ ಬೇಜಾರಾಯಿತು. ತನ್ನ ಪ್ರೀತಿಯ ಪ್ರೀಮಿಯರ್ ಪದ್ಮಿನಿ ಅಂಬಾಸಿಡರ್ ಕಾರನ್ನು ತೆಗೆದುಕೊಂಡು ತನ್ನ ಅಕ್ಕನ ಮನೆಯಾದ ಅರಂತೋಡು ಗ್ರಾಮದ ಅಡ್ತಲೆಗೆ ಚಂದ್ರಶೇಖರ್ ಹೋದರು. ನಂತರದ ದಿನಗಳಲ್ಲಿ ಅಕ್ಕನ ಮನೆಯಲ್ಲೂ ಇರುಸು ಮುರುಸು ಆಗಿ ಚಂದ್ರಶೇಖರ್ ಒಬ್ಬಂಟಿಯಾಗಿ ಇರುವ ನಿರ್ಧಾರ ತಳೆದರು. ಆಗಲೇ ಎಲ್ಲಿ ಹೋದರೂ ಮೋಸದ ಪ್ರಪಂಚ ಎಂದು ಚಂದ್ರಶೇಖರ್ ನಿರ್ಧರಿಸಿಯಾಗಿತ್ತು. ಆಗಲೇ ಅವರನ್ನು ಸೆಳೆದಿದ್ದು ಕಾಡು.

ಚಂದ್ರಶೇಖರ್ ಅವರಿಗೆ ಈ ಕಾರು ಸೂರು

ಅದು ಅಂತಹ ದಟ್ಟಾರಣ್ಯವೇನಲ್ಲ. ಆದರೆ ಈ ಕಾಡು ರಾತ್ರಿಯಾದರೆ ಭಯಾನಕ. ವನ್ಯಜೀವಿಗಳ ಸಂಚಾರ ಇರುವ ಅರಣ್ಯ ಇದು. ಕಾಡಮಧ್ಯೆ ಕಾರನ್ನು ನಿಲ್ಲಿಸಿ, ಕಾರಿನ ಮೇಲ್ಭಾಗಕ್ಕೆ ಪ್ಲಾಸ್ಟಿಕ್‌ ಹೊದಿಕೆ ಹಾಸಿ ಒಂದು ಗುಡಿಸಲಿನ ಹಾಗೆ ಮಾಡಿ ಅದನ್ನೇ ತನ್ನ ಪ್ರಪಂಚವಾಗಿಸಿ ಚಂದ್ರಶೇಖರ್ ಜೀವನ ಮಾಡುತ್ತಿದ್ದಾರೆ.

 

ಚಂದ್ರಶೇಖರ್ ಕಾಡಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಏಕಾಂಗಿಯಾಗಿದ್ದರೂ, ಯಾರ ಸಹಾಯವನ್ನೂ ಈವರೆಗೆ ಪಡೆದಿಲ್ಲ. ಕಾಡಿನಲ್ಲಿ ಹರಿಯುವ ಹೊಳೆಯಲ್ಲಿ ಸ್ನಾನ ಮತ್ತು ನಿತ್ಯಕರ್ಮಗಳು ನಡೆಯುತ್ತದೆ. ಕಾಡಿನಲ್ಲಿ ಸಿಗುವ ಬಳ್ಳಿಗಳಿಂದ ಬುಟ್ಟಿಯನ್ನು ತಯಾರಿಸಿ ಅಡ್ತಲೆ ಗ್ರಾಮದ ಅಂಗಡಿಯೊಂದಕ್ಕೆ ಮಾರಾಟ ಮಾಡಿ ನಿತ್ಯದ ಆಹಾರ ಸಾಮಗ್ರಿಗಳನ್ನು ಖರೀದಿಸುತ್ತಾರೆ.

 

ಇವರಿಗೆ ಕಾಡಿನ ಮಧ್ಯದಲ್ಲಿರುವ ಕಾರಿನ ಒಳಭಾಗವೇ ಪ್ರಪಂಚ. ತಮ್ಮ ಜಮೀನನ್ನು ಮೋಸದಿಂದ ಹರಾಜು ಮಾಡಿದವರಿಗೆ ಶಿಕ್ಷೆಯಾಗಿ ಮತ್ತೆ ಆ ಜಮೀನು ನನಗೆ ಸಿಗಬೇಕು ಅನ್ನೋದೇ ಚಂದ್ರಶೇಖರ್ ಬದುಕಿನ ಏಕಮಾತ್ರ ಗುರಿ. ಚಂದ್ರಶೇಖರ್ ಅವರು ಕಾಡಿನಲ್ಲಿ ಏಕಾಂಗಿಯಾಗಿ ವಾಸವಿರುವ ಬಗ್ಗೆ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಎ.ಬಿ ಇಬ್ರಾಹಿಂ ಅವರ ಗಮನಕ್ಕೆ ಬಂದಿತ್ತು. ಆಗ ಚಂದ್ರಶೇಖರ್ ಇರುವ ಸ್ಥಳಕ್ಕೆ ಡಿ.ಸಿ ಭೇಟಿ ನೀಡಿದ್ದರು. ಚಂದ್ರಶೇಖರ್ ಅವರಿಗೆ ಬೇರೊಂದು ಕಡೆ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡುವ ಬಗ್ಗೆ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿ ಇದನ್ನು ಕಾರ್ಯಗತಗೊಳಿಸಿದ್ದರು. ಆದರೆ ಕೆಳಹಂತದ ಅಧಿಕಾರಿಗಳು ಚಂದ್ರಶೇಖರ್ ಅವರಿಗೆ ನೀಡಿದ ಅದೇ ಕಾಡಿನಂತಹ ಪ್ರದೇಶವಾಗಿತ್ತು. ರಬ್ಬರ್ ಕಾಡನ್ನೆ ಇವರಿಗೆ ಜಾಗ ಎಂದು ಕೊಟ್ಟಿದ್ದರು. ಆದರೆ ಅದು ಹಿಡಿಸದ ಚಂದ್ರಶೇಖರ್ ಮತ್ತೆ ಕಾಡಿಗೆ ಮರಳಿ ತನ್ನ ಅದೇ ಜಾಗದಲ್ಲಿ ವಾಸಿಸಲು ಆರಂಭಿಸಿದ್ದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version