ಕಲಬುರಗಿ ಮಹಾನಗರ ಪಾಲಿಕೆ: ಕಾಂಗ್ರೆಸ್ ಗೆ ಬೆಂಬಲ ನೀಡಲು ದೇವೇಗೌಡರಿಗೆ ಮನವಿ ಮಾಡಿದ್ದೇವೆ; ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ ಮಹಾನಗರ ಪಾಲಿಕೆ: ಕಾಂಗ್ರೆಸ್ ಗೆ ಬೆಂಬಲ ನೀಡಲು ದೇವೇಗೌಡರಿಗೆ ಮನವಿ ಮಾಡಿದ್ದೇವೆ; ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಸೆ. 9: `ಜಾತ್ಯತೀತ ಪಕ್ಷಗಳು ಒಂದಾಗಬೇಕೆಂಬ ದೃಷ್ಟಿಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಮನವಿ ಮಾಡಿದ್ದೇವೆ. ಅವರು ಸಮಯ ಕೇಳಿದ್ದು, ಮುಂದೇನಾಗುತ್ತದೆ ಎಂದು ಕಾದು ನೋಡಬೇಕು’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

 

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 27 ಸ್ಥಾನ ಗೆದ್ದಿದೆ, ಜನ ಬೆಂಬಲ ನಮ್ಮ ಪಕ್ಷಕ್ಕೆ ಇದೆ. ಆದರೆ, 23 ಸ್ಥಾನ ಗಳಿಸಿರುವ ಬಿಜೆಪಿ ಅಧಿಕಾರ ಹಿಡಿಯಲು ಅನ್ಯ ಮಾರ್ಗ ಅನುಸರಿಸುತ್ತಿದೆ. ತಾವು ಖುದ್ದಾಗಿ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಮಾತನಾಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

 

`ಜನಾಭಿಪ್ರಾಯದ ಪ್ರಕಾರ ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶವಿದೆ. ಬಿಜೆಪಿಯ ಮೇಯರ್ ಆಗಲಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಜೆಡಿಎಸ್ ನಾಯಕರನ್ನು ಕೇಳಬೇಕಿತ್ತು, ಕೇಳಿದ್ದೇವೆ. ಮುಂದೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಕಾದು ನೋಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

 

`ಜನ ಬಿಜೆಪಿಯ ವಿರುದ್ಧವಾಗಿ ಮತ ಹಾಕಿದ್ದಾರೆ. ಬಿಜೆಪಿಯೇತರ ಅಭ್ಯರ್ಥಿಗಳು ಹೆಚ್ಚು ಗೆದ್ದಿದ್ದಾರೆ. ಜಾತ್ಯತೀತ ಪಕ್ಷಗಳು ಒಗ್ಗೂಡಿದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಬಹುದು. ರಾಷ್ಟ್ರ ರಾಜಕಾರಣದಲ್ಲೂ ಜಾತ್ಯತೀತ ಪಕ್ಷಗಳು ಸೈದ್ಧಾಂತಿಕ ಆಧಾರದ ಮೇಲೆ ಒಗ್ಗೂಡಿದ್ದೇವೆ. ನಮ್ಮಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡಬೇಡಿ. ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜಾತ್ಯತೀತ ನಿಲುವಿಗೆ ಬದ್ಧವಾಗಿ ಡಿಎಂಕೆ ಸೇರಿ ವಿವಿಧ ಪಕ್ಷಗಳ ಜೊತೆ ಕೈಜೊಡಿಸಿದ್ದೇವೆ’ ಎಂದು ಅವರು ವಿವರಿಸಿದರು.

 

`ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ಬಗ್ಗೆ ನಾವು ಹಲವು ಬಾರಿ ಮಾತನಾಡಿದರೂ ಮಾಧ್ಯಮಗಳು ನಮಗೆ ಪ್ರಚಾರ ನೀಡುವುದಿಲ್ಲ. ಮಾಧ್ಯಮಗಳಿಗೆ ಪ್ರಧಾನಿ ಮೋದಿ ಹೆದರಿಸುತ್ತಿದ್ದಾರೆಂಬ ಸಂಶಯವಿದೆ. ಬೆಲೆ ಏರಿಕೆ ಬಗ್ಗೆ ಸಂಸತ್‍ನಲ್ಲಿ ಕಾಂಗ್ರೆಸ್ ಚರ್ಚಿಸಿದೆ. ಸೈಕಲ್ ರ್ಯಾಲಿ, ಪ್ರತಿಭಟನೆ ನಡೆಸಿದರೂ ಪ್ರಚಾರ ಸಿಕ್ಕಿಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version