ಹರ್ಯಾಣ ಸಿಎಂ ನಿವಾಸದತ್ತ ಪ್ರತಿಭಟನಾ ಪಾದಯಾತ್ರೆ ನಡೆಸಿದ ಶಿಕ್ಷಕರ ಮೇಲೆ ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ
ಚಂಡೀಗಢ: ಉದ್ಯೋಗ ಭದ್ರತೆ ಹಾಗೂ ಉತ್ತಮ ವೇತನ ಆಗ್ರಹಿಸಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ನಿವಾಸದತ್ತ ಪ್ರತಿಭಟನಾ ಪಾದಯಾತ್ರೆ ಕೈಗೊಂಡ ಹರ್ಯಾಣಾದ ವಿವಿಧ ಭಾಗಗಳ ನೂರಾರು ವೃತ್ತಿಪರ ಕೋರ್ಸುಗಳ ಶಿಕ್ಷಕರ ಮೇಲೆ ಪೊಲೀಸರು ಪಂಚಕುಲಾ-ಚಂಡೀಗಢ ಗಡಿ ಸಮೀಪ ಅಕ್ಟೋಬರ್ 25ರಂದು ಲಾಠಿ ಚಾರ್ಜ್ ಮಾಡಿದ ಪರಿಣಾಮ 30 ಶಿಕ್ಷಕರು ಗಾಯಗೊಂಡಿದ್ದಾರೆ. ಅವರ ಪೈಕಿ ಇಬ್ಬರು ಶಿಕ್ಷಕಿಯರೂ ಸೇರಿದಂತೆ ನಾಲ್ಕು ಮಂದಿಯ ಕಣ್ಣಿಗೆ ಮತ್ತು ತಲೆಗಳಿಗೆ ಗಂಭೀರ ಗಾಯಗಳಾಗಿವೆ.
ಅವರ ಸ್ಥಿತಿ ಈಗಲೂ ಗಂಭೀರವಾಗಿದ್ದು ವೈದ್ಯರು ಸತತ ನಿಗಾ ಇರಿಸಿದ್ದಾರೆ ಎಂದು ಹರ್ಯಾಣ ವೃತ್ತಿಪರ ಕೋರ್ಸುಗಳ ಶಿಕ್ಷಕ ಸಂಘದ ಅಧ್ಯಕ್ಷ ಅನೂಪ್ ಧಿಲ್ಲಾನ್ ಹೇಳಿದ್ದಾರೆ. ಘಟನೆ ನಂತರ ಸಂಘದ 13 ಸದಸ್ಯರನ್ನು ಹಿಂಸೆಯಲ್ಲಿ ತೊಡಗಿದ್ದಕ್ಕಾಗಿ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಬಂಧಿಸಲಾಗಿತ್ತು. ಅವರನ್ನು ಎರಡು ದಿನಗಳ ನಂತರ, ಅಕ್ಟೋಬರ್ 27ರಂದು ಬಿಡುಗಡೆಗೊಳಿಸಲಾಗಿದೆ.
ಪ್ರತಿಭಟನಾಕಾರರು ಸಿಎಂ ನಿವಾಸದತ್ತ ಹೋಗಬಾರದೆಂದು ತಡೆಯಲು ಲಾಠಿಚಾರ್ಜ್ ಹೊರತಾಗಿ ಪೊಲೀಸರು ಜನಫಿರಂಗಿಗಳನ್ನೂ ಬಳಸಿದ್ದರು ಎಂದು ಘಟನೆಯ ವೀಡಿಯೋಗಳಿಂದ ತಿಳಿದು ಬಂದಿದೆ. ಪಂಚಕುಲಾದ ಸೆಕ್ಟರ್ 5ರಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಸುಮಾರು 1,800 ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರತಿಭಟನೆ ಶಾಂತಿಯುತವಾಗಿದ್ದರೂ ಪೊಲೀಸರು ಅನಗತ್ಯ ಲಾಠಿಪ್ರಹಾರಗೈದಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಶಿಕ್ಷಕರನ್ನು ಸರಕಾರ ಮೂರನೇ ಏಜನ್ಸಿಯೊಂದರ ಮುಖಾಂತರ ನೇಮಕಗೊಳಿಸಿದ್ದರಿಂದ ಅವರಿಗೆ ಯಾವತ್ತೂ ಕಡಿಮೆ ವೇತನವನ್ನು ವಿಳಂಬಯುತವಾಗಿ ಪಾವತಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.