ನಾಡಪ್ರಭು‌ ಕೆಂಪೇಗೌಡರ ಹಾದಿಯಲ್ಲಿ ನಡೆದು ಊರು ಕಟ್ಟಲು ಮುಂದಾಗಬೇಕು

 

ತುಮಕೂರು

ನಾಡಪ್ರಭು ಕೆಂಪೇಗೌಡರ ಹಾದಿಯಲ್ಲಿ ನಡೆಯುವ ಮೂಲಕ ಊರು ಕಟ್ಟಲು ಮುಂದಾಗಬೇಕೆಂದು ಶಾಸಕ ಜಿ.ಬಿ.‌ಜ್ಯೋತಿಗಣೇಶ್ ಯುವಕರಿಗೆ ಕರೆ ನೀಡಿದರು.

 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರಲ್ಲಿಂದು ಹಮ್ಮಿಕೊಂಡಿದ್ದ “ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತ್ಯೋತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೋವಿಡ್ ಹಿನ್ನೆಲೆಯಲ್ಲಿ ಕೆಂಪೇಗೌಡರ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತಿದೆ. ಕೆಂಪೇಗೌಡರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಊರು, ಸಮಾಜವನ್ನು ಕಟ್ಟಬಹುದು ಎಂದರಲ್ಲದೆ ನಾಡು ಕಟ್ಟಿದ ಕೆಂಪೇಗೌಡರ ಶ್ರಮಕ್ಕೆ ಗೌರವ ಸೂಚಕವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನ ಕೆಂಪೇಗೌಡ ಇಂಟರ್ ನ್ಯಾಷನಲ್‌ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ಕೊಟ್ಟಿದ್ದಾರೆ ಎಂದು ಹೇಳಿದರು.

 

ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಟಿ.ಬಿ. ಜಯಚಂದ್ರ‌ ನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರು ಇಂದು ಕೋಟ್ಯಾಂತರ ಜನರಿಗೆ ಆಶ್ರಯ ನೀಡಿ, ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸುತ್ತಿದ್ದು, ರಾಜ್ಯಕ್ಕೆ ರಾಜಧಾನಿಯಾಗಿ ಅಂತಾರಾಷ್ಟ್ರೀಯ ‌ಮಟ್ಟದಲ್ಲಿ ಖ್ಯಾತಿ ಪಡೆದಿದೆ ಎಂದರು.

ಸುಮಾರು 500 ವರ್ಷಗಳ ಹಿಂದೆ ಬೆಂಗಳೂರನ್ನು ನಿರ್ಮಾಣ ಮಾಡಿ ಅದಕ್ಕೆ ರೂಪು-ರೇಷೆ ಕೊಟ್ಟು ವಿಶ್ವವೇ ತಿರುಗಿ ನೋಡುವಂತಹ ಆಕರ್ಷಣೀಯವಾಗಿಸಿದ್ದಾರೆ. ಇಂದಿನ ಬೆಂಗಳೂರು 500 ವರ್ಷಗಳ ಹಿಂದೆ ಸಾಮಾನ್ಯ ಹಳ್ಳಿಯಾಗಿತ್ತು. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ‌ ಪಡೆದಿದೆ. ಮಾಹಿತಿ, ಜೈವಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಬೆಂಗಳೂರು ಎಲ್ಲಾ ಕ್ಷೇತ್ರದಲ್ಲೂ ಇಡೀ ಪ್ರಪಂಚವನ್ನೇ ಮೀರಿಸುವ ಮಟ್ಟಕ್ಕೆ ಬೆಳೆದಿದೆ. ಇದೆಲ್ಲದರ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ‌ ಎಂದರು.

 

ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರಿನ ಪರಿಸರ ಇಂದು ಹಾಳಾಗುತ್ತಿದ್ದು, ರಕ್ಷಣೆ ಮಾಡುವ ಕೆಲಸವಾಗಬೇಕು. ಎಲ್ಲರಿಗೂ ಬದುಕುವ ವಾತಾವರಣ ಸೃಷ್ಟಿಸಿ ಉತ್ತಮ ವಾತಾವರಣವುಳ್ಳ ನಗರವನ್ನಾಗಿ ಮಾರ್ಪಡಿಸುವ ಜಬಾವ್ದಾರಿ ಎಲ್ಲರ ಮೇಲಿದೆ‌ ಎಂದು ಹೇಳಿದರು.

 

ಮಾಜಿ ಶಾಸಕ‌ ಸುರೇಶ್ ಗೌಡ ಮಾತನಾಡಿ, ದೂರದೃಷ್ಟಿಯಿಂದ ಕೆಂಪೇಗೌಡರು ಕಟ್ಟಿದ ಬೆಂಗಳೂರು ನಮ್ಮ ನಾಡಿನ‌ ಹೆಮ್ಮೆ. ನಮ್ಮ ನಾಡು ರಾಜಕೀಯ ಸೇರಿದಂತೆ ಹಲವು ವಿಚಾರಗಳಲ್ಲಿ ಕೊಡುಗೆ ನೀಡಿದೆ. ಇಂತಹ ನಾಡಿನಲ್ಲಿ ಜಾತಿಯನ್ನು ಮೆಟ್ಟಿ ಎಲ್ಲರನ್ನೂ ಸಮಾನತೆಯಿಂದ ನೋಡುವ ವ್ಯವಸ್ಥೆ ‌ಬರಬೇಕಿದೆ. ಜಾತಿ – ಜಾತಿ ನಡುವಿನ ವೈಷಮ್ಯವನ್ನು ತೊಡೆದುಹಾಕಿ‌ ಕೆಂಪೇಗೌಡರು ಹಾಕಿಕೊಟ್ಟ ಮಾದರಿಯಲ್ಲಿ ಮುನ್ನಡೆಯಬೇಕಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೆಂಪೇಗೌಡ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ‌. ಮುಂದಿನ ದಿನಗಳಲ್ಲಿ ವಿಜೃಂಭಣೆಯಿಂದ ಆಚರಿಸೋಣ ಎಂದರು.

 

 

ಕಾರ್ಯಕ್ರಮದಲ್ಲಿ ಪಾಲಿಕೆ‌ ಮೇಯರ್ ಬಿ.ಜಿ.‌ಕೃಷ್ಣಪ್ಪ, ಜಿಲ್ಲಾ ಒಕ್ಕಲಿಗ ಸಮುದಾಯದ ಮುಖಂಡ ಮುರುಳಿಧರ್ ಹಾಲಪ್ಪ,

ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ‌ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ಮೋಹನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಶ್ರೀನಿವಾಸ್, ಸುರೇಶ್ ಕುಮಾರ್ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version