ದೇವನಹಳ್ಳಿ : ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಸುಮಾರು ೬೦ಲಕ್ಷ ವೆಚ್ಚದ ಕಬಡಿ ಹಾಗೂ ಕುಸ್ತಿ ಅಂಕಣಗಳನ್ನು ನಿರ್ಮಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಜಿ.ಪಂ. ಅಧ್ಯಕ್ಷ ವಿ.ಪ್ರಸಾದ್ ತಿಳಿಸಿದರು.
ಅವರು ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಈ ಎರಡು ಸ್ಪರ್ಧೆಗಳ ಅಂಕಣ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ದೇವನಹಳ್ಳಿಯಲ್ಲಿ ಸುಸಜ್ಜಿತವಾದ ಯಾವುದೇ ಕ್ರೀಡಾ ಅಂಕಣಗಳು ಇಲ್ಲದ ಕಾರಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್ ಹಾಗು ಅನಂತಕುಮಾರಿ ಚಿನ್ನಪ್ಪನವರ ಮನವಿಯ ಮೇರೆಗೆ ಉತ್ತಮ ಗುಣ ಮಟ್ಟದ ಕ್ರೀಡಾಂಕಣವನ್ನು ನಿರ್ಮಿಸಲು ಶಾಸಕರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ, ಈ ಕಾಮಗಾರಿ ೬ ತಿಂಗಳಲ್ಲಿ ಪೂರ್ಣಗೊಂಡು ಕ್ರೀಡಾಭಿಮಾನಿಗಳು ಹಾಗು ಕ್ರೀಡಾಪಟುಗಳು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು ಎಲ್ಲಾ ಮಹಿಳೆಯರಿಗೆ ಶುಭಾಶಯಗಳನ್ನು ಕೋರುತ್ತೇನೆ ಎಂದರು.
ಇದೇ ಸಮಯದಲ್ಲಿ ನೂತನವಾಗಿ ೧೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯ ಹಾಗೂ ಜಿಮ್‌ಗಳನ್ನು ಉದ್ಘಾಟಿಸಲಾಯಿತು.
ಈ ಸಮಯದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ ವಿಶ್ವ ಮಹಿಳಾ ದಿನದಂದು ಮಹಿಳೆಯರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಕಾರಣ ಮುಖ್ಯಮಂತ್ರಿಗಳು ಬಡ್ಜೆಟ್ ಮಂಡಿಸುವುದರಿಂದ ಅದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇನೆ ಕ್ಷಮೆಯಿರಲಿ ಎಂದ ಅವರು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಅದ್ದೂರಿ ಕ್ರೀಡಾಂಗಣ ನಿರ್ಮಿಸಲು ಸರ್ಕಾರದ ಮುಂದೆ ಪ್ರಸ್ಥಾವನೆ ಸಲ್ಲಿಸಿದ್ದೇನೆ, ಅದೇರೀತಿ ದೇವನಹಳ್ಳಿ ತಾಲ್ಲೂಕಿನಲ್ಲಿಯೇ ಜಿಲ್ಲಾ ಕೇಂದ್ರ ಮಾಡಲು ಸಕಲ ಸಿದ್ದತೆ ಮಾಡಲಾಗಿದ್ದು, ಕ್ರೀಡಾಭಿಮಾನಿಗಳು ಪ್ರತಿದಿನ ಅಭ್ಯಾಸ ಮಾಡಿ ರಾಜ್ಯ, ರಾಷ್ಟ್ರೀಯ ಮಟ್ಟದಕ್ರೀಡೆಗಳಲ್ಲಿ ಭಾಗವಹಿಸಿ ತಾಲೂಕಿನ ಕೀರ್ತಿ ಬೆಳಗಿಸಿ ಎಂದರು.
ಈ ಸಮಯದಲ್ಲಿ ಮುಖಂಡರಾದ ಮಾಜಿ ಪುರಸಭಾಧ್ಯಕ್ಷ ಸಿ.ಜಗನ್ನಾಥ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಸದಸ್ಯೆ ಅನಂತಕುಮಾರಿ, ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ನಾಗೇಶ್, ಸದಸ್ಯರಾದ ಪೈ|| ವೇಣುಗೋಪಾಲ್(ಗೋಪಿ) ಜಿ.ಎ. ರವೀಂದ್ರ, ಮುನಿಕೃಷ್ಣ, ಲೀಲಾವತಿ, ಕ್ರೀಡಾಮತ್ತು ಯುವಜನಾ ಸೇವಾ ಇಲಾಖೆಯ ಗೀತಾ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ರುದ್ರಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿತ್ರಸುದ್ದಿ : ಕಬಡಿ ಹಾಗೂ ಕುಸ್ತಿ ಅಂಕಣ ನಿರ್ಮಾಣಕ್ಕೆ ಚಾಲನೆ ನೀಡಿದ ಗಣ್ಯರು.
ಚಿತ್ರಸುದ್ದಿ ೨ : ಶೌಚಾಲಯ ಹಾಗೂ ಜಿಮ್ ಉದ್ಘಾಟಿಸಿದ ಗಣ್ಯರು.
ಗುರುಮೂರ್ತಿ ಬೂದಿಗೆರೆ
8861100990