ಮಲೆನಾಡು ಕರಾವಳಿಯಲ್ಲಿ ಕಾಣಸಿಗುವ ಮುಳ್ಳುಪೊದೆ.Rutaceae (ಲಿಂಬು) ಕುಟುಂಬಕ್ಕೆ ಸೇರಿದ ಇದು ಗುಡ್ಡಗಳು ಬೀಳುಜಾಗದಲ್ಲಿ ಬೆಳೆದಿರತ್ತೆ. ಪೊದೆಯಂತೆ ಹರಡಿಕೊಂಡಿರುವ ಇದರ ಕಾಂಡಗಳ ತುಂಬಾ ಮುಳ್ಳುಗಳಿಂದ ಆವೃತ್ತವಾಗಿರುತ್ತದೆ.
ಸಸ್ಯಶಾಸ್ತ್ರೀಯವಾಗಿ Zanthoxylum ovalifolium.
ಅರಮಾದಲು,Thorny yellow wood,Little yellow wood ಎಂದು ಕರೆಯುತ್ತಾರೆ.
ಬಿದಿರು,ವಾಟೆಯಿಂದ ತಯಾರಿಸಿದ ಪೆಟ್ಲಕೋವಿಯೊಳಗೆ ಈ ಕಾಯಿ ಇಟ್ಟು ಹೊಡೆಯಿತ್ತಿದ್ದ ನೆನಪು ಮಲೆನಾಡ ಮಕ್ಕಳಲ್ಲಿ ಹಸಿರಾಗಿದೆ.ಆದ್ದರಿಂದ ಇದಕ್ಕೆ ‘ಪೆಟ್ಲುಕಾಯಿ’ಎಂದೂ ಕರೆಯುತ್ತಾರೆ.
ಇದರ ಎಳೆಯ ಕಾಯಿಗಳು ಮಾವಿನಮಿಡಿ ಅಥವಾ ಲಿಂಬು ಜೀರಿಗೆ ಮಿಶ್ರಿತ ಪರಿಮಳ ಹೊಂದಿದ್ದು ಇದನ್ನು ಲಿಂಬು ಉಪ್ಪಿನಕಾಯಿಯ ಜೊತೆ ಮಿಶ್ರಮಾಡಿ ಬಳಸುತ್ತಾರೆ. ತುಂಬಾ ರುಚಿಕರವಾಗಿರುತ್ತದೆ.
ಇದರ ನಾಲ್ಕೈದು ಎಲೆಗಳನ್ನು ಬಚ್ಚಲ ಹಂಡೆಗೆ ಹಾಕುವುದರಿಂದ ಪಾಚಿವಾಸನೆ ಹೋಗಿ ಪರಿಮಳ ಬರುತ್ತದೆ.
ಈ ನೀರಿನಿಂದ ಸ್ನಾನ ಮಾಡುವುದರಿಂದ ಸೆಕೆಗುಳ್ಳೆ ಚರ್ಮರೋಗಗಳು ನಿಯಂತ್ರಣವಾಗುತ್ತವೆ.
ಇದರ ಕೆಲವು ಎಲೆಗಳನ್ನು ಜಜ್ಜಿ ನೀರಿನಲ್ಲಿ ನೆನೆಯಿಟ್ಟು ಸ್ವಲ್ಪ ಸಮಯದ ನಂತರ ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕೂದಲುದುರುವ ಸಮಸ್ಯೆ ಕಡಿಮೆಯಾಗುತ್ತದೆಯಂತೆ.