ಮಂಗಳೂರು; ನಕಲಿ, ಅಸಲಿ ಹಿಂದೂ ಮಹಾಸಭಾ ಕಚ್ಚಾಟ!

ಮಂಗಳೂರು; ನಕಲಿ, ಅಸಲಿ ಹಿಂದೂ ಮಹಾಸಭಾ ಕಚ್ಚಾಟ!

 

 

ಮಂಗಳೂರು; ಮೈಸೂರು ಜಿಲ್ಲೆಯಲ್ಲಿ ದೇವಾಲಯ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಬಹಿರಂಗ ಕೊಲೆ ಬೆದರಿಕೆ ಹಾಕಿದ ಬಳಿಕ ಹಿಂದೂ ಮಹಾಸಭಾದಲ್ಲಿ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ.

 

ಮುಖ್ಯಮಂತ್ರಿ ಗೆ ಬೆದರಿಕೆ ಹಾಕಿದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ವಿರುದ್ಧ ದೂರು ನೀಡಿದ್ದ ಲೋಹಿತ್ ಸುವರ್ಣ ಈಗ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ನನ್ನದು ಅಸಲಿ ಹಿಂದೂ ಮಹಾಸಭಾ, ಧರ್ಮೇಂದ್ರ ನದ್ದು ನಕಲಿ ಹಿಂದೂ ಮಹಾಸಭಾ ಅಂತಾ ಹೇಳಿಕೆ ಕೊಟ್ಟರು. ಈ ಮೂಲಕ ಶೀತಲ ಸಮರದಿಂದ ಜಿದ್ದಾ ಜಿದ್ದಿನ ಹೋರಾಟಕ್ಕಿಳಿದಿದ್ದಾರೆ.

 

ಧರ್ಮೇಂದ್ರ ಬಣ ಕೂಡಾ ಪತ್ರಿಕಾ ಗೋಷ್ಠಿ ನಡೆದು ನಮ್ಮದು ಅಸಲಿ, ಅವರದ್ದು ನಕಲಿ ಅಂತಾನೂ ಹೇಳಿದೆ. ಈ ನಕಲಿ ಅಸಲಿಗಳ ನಡುವೆ ಹಿಂದೂ ಮಹಾಸಭಾದ ಧ್ವಜ ಹಿಡಿದ ಕಾರ್ಯಕರ್ತರು ಮಾತ್ರ ಗೊಂದಲಕ್ಕೀಡಾಗಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಘಟಕದಲ್ಲಿ ಬಣ ರಾಜಕೀಯ ಶುರುವಾಗಿದೆ. ನಮ್ಮದು ಅಸಲಿ ಸಂಘಟನೆ, ಅವರದ್ದು ನಕಲಿ ಸಂಘಟನೆ ಎಂದು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ನಾಯಕರೆನಿಸಿಕೊಂಡವರ ಈ ವರ್ತನೆಯಿಂದ ಹಿಂದೂ ಮಹಾಸಭಾದ ಕಾರ್ಯಕರ್ತರು ಮಾತ್ರ ಹೈರಾಣಾಗಿದ್ದಾರೆ.

 

ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪತ್ರಿಕಾಗೋಷ್ಟಿ ನಡೆದಿತ್ತು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡ ಧರ್ಮೇಂದ್ರ ಎಂಬುವವರು ಮಾತನಾಡಿ ಮೈಸೂರಿನ ದೇವಾಸಲಯ ಧ್ವಂಸ ವಿಚಾರದಲ್ಲಿ ಮುಖ್ಯಮಂತ್ರಿಗೆ ಕೊಲೆ ಬೆದರಿಕೆಯ ಹೇಳಿಕೆಯನ್ನು ನೀಡಿದ್ದರು.

 

ಆದರೆ ಈ ಪತ್ರಿಕಾಗೋಷ್ಠಿ ಮಾಡಿದವರು ಹಿಂದೂ ಮಹಾಸಭಾದಿಂದ ಉಚ್ಛಾಟನೆಗೊಂಡವರು. ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿ ಮುಖ್ಯಮಂತ್ರಿಗಳಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡಿರುವ ಲೋಹಿತ್ ಸುವರ್ಣ ದೂರು ನೀಡಿದ್ದರು. ಈ ದೂರಿನ ಮೇರೆಗೆ ಐದು ಮಂದಿ ಸೇರಿದಂತೆ ಸಂಘಟನೆಯ ಎಂಟು ಮಂದಿ ವಿರುದ್ದ ಬರ್ಕೆ ಠಾಣೆಯಲ್ಲಿ ಕೇಸು ದಾಖಲಾಗಿ ನಾಲ್ವರ ಬಂಧನ ಮಾಡಲಾಗಿತ್ತು.

 

ಈಗ ಧರ್ಮೇಂದ್ರ ಬಣದ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡಿರುವ ರಾಜೇಶ್ ಪವಿತ್ರನ್ ಎಂಬವರು ಲೋಹಿತ್ ಸುವರ್ಣ ಅವರದ್ದು ನಕಲಿ ಸಂಘಟನೆ ಎಂದು ಆರೋಪಿಸಿದ್ದಾರೆ.

 

ಲೋಹಿತ್ ಸುವರ್ಣ ನಾನೇ ರಾಜ್ಯಾಧಕ್ಷ ಎಂದರೆ, ರಾಜೇಶ್ ಪವಿತ್ರನ್ ನಾನೇ ರಾಜ್ಯಾಧಕ್ಷ ಎಂದು ಹೇಳುತ್ತಿದ್ದಾರೆ. ಇವರು ಅವರನ್ನು, ಅವರು ಇವರನ್ನು ಉಚ್ಛಾಟನೆ ಮಾಡಿದ್ದೇವೆ ಎಂದು ಎರಡು ಬಣದ ಮುಖಂಡರು ಹೇಳುತ್ತಿದ್ದಾರೆ. ನಾಯಕರುಗಳು ಎಂದು ಕರೆಸಿಕೊಂಡಿರುವ ಇವರ ಹೇಳಿಕೆಗಳಿಂದ ಅಖಿಲಾ ಭಾರತ ಹಿಂದೂ ಮಹಾಸಭಾದ ಕಾರ್ಯಕರ್ತರು ಗೊಂದಲ ಗೊಂಡಿದ್ದಾರೆ.

 

ಈಗಾಗಲೇ ಬಂಧನವಾಗಿದ್ದ 4 ಜನರು ಜಾಮೀನಿನ ಮೇಲೆ ಹೊರ ಬಂದಿದ್ದು ಲೋಹಿತ್ ಸುವರ್ಣ ಬಣದ ಸಂಘಟನೆ ನಕಲಿ ಎಂದು ಆರೋಪಿಸಿದ್ದಾರೆ. ಆದರೆ ಲೋಹಿತ್ ಸುವರ್ಣ ನಾವು ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್‌ಗೂ ದೂರು ನೀಡಿದ್ದು ನಮ್ಮ ಸಂಘಟನೆ ಹೆಸರು, ಪ್ರಧಾನ ಕಚೇರಿ ವಿಳಾಸ ಎಲ್ಲದರ ದುರುಪಯೋಗ ನಡೆದಿದೆ ಎಂದು ಹೇಳಿದ್ದಾರೆ.

 

ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಘಟಕದಲ್ಲಿ ಬಣ ರಾಜಕೀಯ ಇದೆ ಎಂಬುದು ನಾಯಕರ ಆರೋಪ ಪ್ರತ್ಯಾರೋಪದ ಮೂಲಕ ಬಹಿರಂಗವಾಗಿದೆ. ಮುಂದೆ ಈ ಆರೋಪ ಪ್ರತ್ಯಾರೋಪ ಎಲ್ಲಿಗೆ ಬಂದು ತಲುಪುತ್ತದೆ? ಎಂಬುದನ್ನು ಕಾದುನೋಡಬೇಕಿದೆ.

 

ನಂಜನಗೂಡಿನ ಹುಚ್ಚುಗಣಿ ಗ್ರಾಮದ ಮಾಹದೇವಮ್ಮನ ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರಿನಲ್ಲಿ ಕಳೆದ ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು. ಈ ಹೇಳಿಕೆ ಬಳಿಕ ಅಖಿಲ ಭಾರತೀಯ ಹಿಂದೂ ಮಹಾಸಭಾ ಮಾತ್ರ ಧರ್ಮೇಂದ್ರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು.

 

ಅಖಿಲ ಭಾರತೀಯ ಹಿಂದೂ ಮಹಾಸಭಾದ ಕಾರ್ಯಕರ್ತ ಬೆಂಗಳೂರಿನ ಲೋಹಿತ್ ಕುಮಾರ್ ಸುವರ್ಣ ಎಂಬುವವರು ಧರ್ಮೇಂದ್ರ ವಿರುದ್ಧ ಮಂಗಳೂರಿನ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಧರ್ಮೇಂದ್ರ ಮತ್ತು ಪತ್ರಿಕಾಗೋಷ್ಠಿಯಲ್ಲಿದ್ದ ಇತರ ನಾಲ್ವರನ್ನು ಅಖಿಲ ಭಾರತೀಯ ಹಿಂದೂ ಮಹಾಸಭಾದಿಂದ ಈ ಹಿಂದೆನೇ ಉಚ್ಛಾಟಿಸಲಾಗಿದೆ. ಇವರಿಗೂ ಮಹಾಸಭಾಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version