ವಾಜಪೇಯಿ ಪ್ರಾಣಿ ಸಂಗ್ರಹಾಲಯವನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸಲು ಹೈಕೋರ್ಟ್ ಅನುಮತಿ
ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಸಂಗ್ರಹಾಲಯವನ್ನು ಬಳ್ಳಾರಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಬಿಳಿಕಲ್ಲು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ.
ಪ್ರಾಣಿ ಸಂಗ್ರಹಾಲಯವನ್ನು ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ 2015ರಲ್ಲಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಪರಿಸರ ಹೋರಾಟಗಾರ ಸಂತೋಷ್ ಮಾರ್ಟಿನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ವಿಲೇವಾರಿ ಮಾಡಿದೆ. ಅಲ್ಲದೆ, ಅಟಲ್ ಬಿಹಾರಿ ವಾಜಪೇಯಿ ಸಂಗ್ರಹಾಲಯದಲ್ಲಿ ಮನರಂಜನೆ ಅಥವಾ ವಿನೋದ ಚಟುವಟಿಕೆಗಳಿಗೆ ಅನುಮತಿಸಬಾರದೆಂದು ಸೂಚನೆ ನೀಡಿದೆ.
ಪ್ರಾಣಿ ಸಂಗ್ರಹಾಲಯವನ್ನು ಸ್ಥಳಾಂತರಿಸುವುದಕ್ಕೂ ಮುನ್ನ ಅಗತ್ಯ ಅನುಮತಿಯನ್ನು ಪಡೆಯಲಾಗಿದೆ ಎಂದು ರಾಜ್ಯ ಸರಕಾರವು ಪೀಠದ ಮುಂದೆ ಮೆಮೊ ಸಲ್ಲಿಸಿತು. ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದಿಂದ ಅನುಮತಿ ಪಡೆಯಲಾಗಿದ್ದು, ಫೆಬ್ರವರಿ 17ರಂದು ಅರಣ್ಯ ಸಲಹಾ ಸಮಿತಿ ಸಭೆ ನಡೆಸಲಾಗಿದೆ. ಇಲ್ಲಿ ಅರಣ್ಯ ಇಲಾಖೆ/ರಾಜ್ಯ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರವು ಅರಣ್ಯ ಪ್ರದೇಶದಲ್ಲಿ ಪ್ರಾಣಿ ಸಂಗ್ರಹಾಲಯ ಸ್ಥಾಪಿಸಲು ಶಿಫಾರಸ್ಸು ಮಾಡಿದೆ. ಇದಕ್ಕೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ಒಪ್ಪಿಗೆ ನೀಡಿದೆ ಎಂದು ಮೆಮೊದಲ್ಲಿ ತಿಳಿಸಲಾಗಿದೆ.
ಹೊಸಪೇಟೆ ತಾಲೂಕಿನಲ್ಲಿ 20 ಸಾವಿರ ಚದರ ಮೀಟರ್ ಗೂ ಕಡಿಮೆ ಪ್ರದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯ ನಿರ್ಮಿಸಲಾಗುತ್ತಿದೆ. ಪರಿಸರ ಸಂರಕ್ಷಣಾ ಕಾಯಿದೆ 1986ರ ಅಧಿನಿಯಮಗಳ ಅಡಿ ಇದಕ್ಕಾಗಿ ಪರಿಸರ ಒಪ್ಪಿಗೆ ಪತ್ರದ ಅಗತ್ಯವಿಲ್ಲ. ಬಳ್ಳಾರಿಯಿಂದ ಹೊಸಪೇಟೆಗೆ ಪ್ರಾಣಿ ಸಂಗ್ರಹಾಲಯವನ್ನು ಸ್ಥಳಾಂತರಿಸಲಾಗಿದ್ದು, ಇದು ಉತ್ತರ ಕರ್ನಾಟಕದಲ್ಲಿ ವನ್ಯ ಪ್ರಾಣಿಗಳ ಸಂರಕ್ಷಣಾ ಕೇಂದ್ರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ಪ್ರಾಣಿ ಸಂಗ್ರಹಾಲಯವನ್ನು ಸ್ಥಳಾಂತರಿಸುವುದಕ್ಕೂ ಮುನ್ನ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ನ್ಯಾಯಾಲಯವು ರಾಜ್ಯ ಸರಕಾರವು ಈ ಸಂಬಂಧ ಅಗತ್ಯ ಅನುಮತಿ ಪಡೆದಿದೆ. ಇಲ್ಲಿ ಕಾಯಿದೆ, ನಿಯಮಗಳ ಉಲ್ಲಂಘನೆ ಕಾಣುತ್ತಿಲ್ಲ ಎಂದು ಹೇಳಿದ್ದು, ಪ್ರಾಣಿ ಸಂಗ್ರಹಾಲಯವನ್ನು ಸ್ಥಳಾಂತರಿಸುವುದಕ್ಕೂ ಮುನ್ನ ಸಂಬಂಧಪಟ್ಟವರಿಂದ ಎಲ್ಲ ರೀತಿಯ ಅನುಮತಿ ಪಡೆಯುವುದು ಅತ್ಯಗತ್ಯ ಎಂದು ಹೇಳಿ ಅರ್ಜಿ ವಿಲೇವಾರಿ ಮಾಡಿತು.