ತುಮಕೂರು : ಜಿಲ್ಲಾದ್ಯಂತ ಜುಲೈ ೧೯ ರಿಂದ ಆಗಸ್ಟ್ ೨ರವರೆಗೆ ಅತಿಸಾರ ಬೇದಿಯ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ೦-೫ ವರ್ಷ ವಯಸ್ಸಿನ ಮಕ್ಕಳಲ್ಲಿ ಅತಿಸಾರ ಬೇದಿಯಿಂದ ಮರಣವನ್ನು ತಗ್ಗಿಸುವ ಹಿನ್ನಲೆಯಲ್ಲಿ ಅತಿಸಾರ ಬೇದಿ ನಿಯಂತ್ರಣಕ್ಕೆ ಓಆರ್‌ಎಸ್, ಶುದ್ಧವಾದ ಕುಡಿಯುವ ನೀರಿನ ಬಳಕೆ, ಜನ ಸಾಮಾನ್ಯರಲ್ಲಿ ಮುಖ್ಯವಾಗಿ ಪೋಷಕರು ಮತ್ತು ಮಕ್ಕಳಲ್ಲಿ ಪರಿಸರ ನೈರ್ಮಲ್ಯ, ತೊಳೆಯುವ ವಿಧಾನ, ಚಿಕಿತ್ಸೆ ಹಾಗೂ ವೈಯಕ್ತಿಕ ಶುಚಿತ್ವದ ಬಗ್ಗೆ ಅರಿವು ಮೂಡಿಸಲಾಗುವುದು.
ಜಿಲ್ಲೆಯಲ್ಲಿ ೦-೫ ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರು ಭೇಟಿ ನೀಡಿ ಓ.ಆರ್.ಎಸ್. ಪೊಟ್ಟಣಗಳನ್ನು ವಿತರಿಸಲಿದ್ದಾರೆ ಹಾಗು ಅತಿಸಾರ ಬೇದಿಯಿಂದ ಬಳಲುವ ಮಕ್ಕಳಿಗೆ ಓ.ಆರ್.ಎಸ್., ಜಿಂಕ್ ಮಾತ್ರೆ/sಥಿಡಿuಠಿ ನಿಂದ ಚಿಕಿತ್ಸೆ ನೀಡಲಾಗುವುದು. ತೀವ್ರವಾಗಿದ್ದಲ್ಲಿ ಆರೋಗ್ಯ ಕೇಂದ್ರಗಳಿಗೆ ನಿರ್ದೇಶಿಸಲಾಗುವುದು.
ಎಲ್ಲಾ ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಓ.ಆರ್.ಎಸ್ ಕಾರ್ನರ್‌ಗಳನ್ನು ತೆರೆದು ಅತಿಸಾರ ಬೇದಿಯಿಂದ ಬಳಲುತ್ತಿರುವ ಮಕ್ಕಳಿಗೆ ವೈದ್ಯರಿಂದ ಚಿಕಿತ್ಸೆ ಜೊತೆಗೆ ಮಗುವಿನ ತಾಯಿಗೆ ಎದೆ ಹಾಲಿನ ಮಹತ್ವ ಸಕಾಲದಲ್ಲಿ ಲಸಿಕೆ ಪಡೆಯುವ ಮತ್ತು ಮಗುವಿನ ಆರೈಕೆ, ಪೋಷಣೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುವುದು.
ಈ ಅವಧಿಯಲ್ಲಿ ವಿಶೇಷ ಸಭೆಗಳನ್ನು ನಡೆಸಲಾಗುವುದು. ಆರ್‌ಬಿಎಸ್‌ಕೆ ತಂಡದವರಿoದ ದುರ್ಗಮ ಹಾಗೂ ವಲಸೆ ಪ್ರದೇಶಗಳಲ್ಲಿ ಸಂಚಾರಿ ಆರೋಗ್ಯ ಘಟಕದ ಮೂಲಕ ಕೈತೊಳೆಯುವ ವಿಧಾನ, ಶೌಚಾಲಯ ಬಳಕೆ, ಶುಚಿತ್ವದ ಬಗ್ಗೆ ಅರಿವು ಮೂಡಿಸಿ ಓ.ಆರ್.ಎಸ್. ವಿತರಣೆ ಮಾಡಲಾಗುವುದು.
ಜಿಲ್ಲೆಯಲ್ಲಿ ೦-೫ ವರ್ಷದ ೨,೧೬,೩೦೦ ಮಕ್ಕಳಿದ್ದು, ಈ ಮಕ್ಕಳಿರುವ ಮನೆಗಳಿಗೆ ಒಂದು ಔಷಧಿ ಮೊಟ್ಟಣ ವಿತರಿಸುವ ಗುರಿ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ೨೧೩೪ ಆಶಾ, ೪೨೪ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಯೋಜಿಸಲಾಗಿದೆ.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನೀರು ಸರಬರಾಜು ಇಲಾಖೆ, ವೈದ್ಯಕೀಯ ವಿದ್ಯಾಲಯಗಳು, ಭಾರತೀಯ ಮಕ್ಕಳ ತಜ್ಞರ ಸಂಘದ ಸಹಕಾರದೊಂದಿಗೆ ಈ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ ತಿಳಿಸಿದ್ದಾರೆ.