ತುಮಕೂರು: ಮೋಟಾರು ವಾಹನ ತಿದ್ದುಪಡಿ ಬಳಿಕ ವಾಹನ ಸವಾರರು ಟ್ರಾಫಿಕ್ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಪ್ಪಿ ತಪ್ಪಿ ಗೆರೆ ದಾಟಿದರೆ ದುಬಾರಿ ದಂಡ ಕೂಡ ಬೀಳುತ್ತೆ. ಇಷ್ಟಾದರೂ ಕೆಲವರು ಟ್ರಾಫಿಕ್ ನಿಯಮಕ್ಕೂ ನಮಗೂ ಸಂಬಂಧವಿಲ್ಲ ಅನ್ನೋವಂತೆ ವಾಹನ ಚಲಾಯಿಸುತ್ತಾರೆ. ಕೆಲವರು ಗಾಡಿಯಲ್ಲಿ ಓಡಾಡುವಾಗ ಡಾಕ್ಯುಮೆಂಟ್ ಇರಲ್ಲ , ಇನ್ನು ಕೆಲವೊಬ್ರು ಹೆಲ್ಮೆಟ್ ಕೂಡ ಹಾಕಿರಲ್ಲ. ಅದೆಷ್ಟೋ ಜನ ಟ್ರಾಫಿಕ್ ರೂಲ್ಸ್ ಅನ್ನೇ ಫಾಲೋ ಮಾಡೋಲ್ಲ. ಇದೆಲ್ಲವನ್ನ ಹತೋಟಿಗೆ ತಂದು, ಜನರ ಜೀವವನ್ನ ಕಾಪಾಡೋರು ಟ್ರಾಫಿಕ್ ಪೊಲೀಸರು. ದಂಡ ಅನ್ನೋ ಭಯದಿಂದ ಜನಸಾಮಾನ್ಯರ ಜೀವವನ್ನ ಪರೋಕ್ಷವಾಗಿಯೂ ನಮ್ ಪೊಲೀಸರು ಕಾಪಾಡ್ತಾರೆ.
ಆದ್ರೆ ಇಂಥ ಒಳ್ಳೆಯ ಆರಕ್ಷರ ಮಧ್ಯೆ ಜನರಿಂದ ಶಾಪ ಹಾಕಿಸಿಕೊಳ್ಳುವ ಆರಕ್ಷಕರು ನಮ್ಗೆ ಸಿಕ್ತಾರೆ. ರೂಲ್ಸ್ ಹೆಸರಲ್ಲಿ ಹಗಲು ದರೋಡೆ ಮಾಡುವ ಅದೆಷ್ಟೋ ಘಟನೆಗಳು ಮೊಬೈಲ್ ಗಳಲ್ಲಿ ಕ್ಯಾಪ್ಚರ್ ಆಗಿವೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕಾನೂನು ಕಾಪಾಡಬೇಕಾದ ಪೊಲೀಸರೇ ಒಮ್ಮೊಮ್ಮೆ ಜನಸಾಮಾನ್ಯರ ಜೀವಕ್ಕೆ ಕುತ್ತು ತಂದು ಬಿಡ್ತಾರೆ. ಇಂಥದ್ದೇ ಘಟನೆ ಇಂದು ತುಮಕೂರಿನಲ್ಲಿ ನಡೆದಿದೆ. ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್ ಬಳಿ ವ್ಯಕ್ತಿಯೊಬ್ಬ ದ್ವಿ ಚಕ್ರ ವಾಹನದಲ್ಲಿ ತೆರಳುತ್ತಿದ್ದ. ಆತನನ್ನ ಟ್ರಾಫಿಕ್ ಪೊಲೀಸರು ಕೈ ಬೀಸಿ ಕರೆದಿದ್ದಾರೆ. ಗಾಡಿ ನಿಲ್ಲಿಸೋದಕ್ಕೆ ಸೂಚಿಸಿದ್ದಾರೆ.
ಜನಸಾಮಾನ್ಯರಿಗೆ ಪೊಲೀಸರೆಂದ್ರೆ ಸಹಜವಾಗಿ ಭಯವೇ. ಭಯ ಪಟ್ಟಾಕ್ಷಣ ತಪ್ಪು ಮಾಡಿದ್ದಾನೆ ಅಂತೇನು ಅಲ್ಲ. ಅದೇ ಥರ ಗಾಡಿ ನಿಲ್ಲಿಸಲು ಹೇಳಿದ ವ್ಯಕ್ತಿ ಹೆಲ್ಮೇಟ್ ಹಾಕಿದ್ದ ಕಾರಣಕ್ಕೋ, ನಾನೇನು ತಪ್ಪು ಮಾಡಿಲ್ಲವಲ್ಲ, ನನ್ನ ಹಿಂದೆ ಬರುತ್ತಿರುವ ವಾಹನದವರನ್ನು ನಿಲ್ಲಿಸಲು ಪ್ರಯತ್ನಿಸುತ್ತಿರಬಹುದೋ ಏನೋ ಅನ್ನೋ ಕಾರಣಕ್ಕೋ ಅಥವಾ ಪೊಲೀಸರ ಭಯಕ್ಕೋ ಅವರು ಕರೆದರು ಮುಂದೆ ಸಾಗಿದ್ದಾನೆ. ಆಗ ಅಲ್ಲೆ ಇದ್ದ ಎನ್ ಇ ಪಿ ಎಸ್ ಠಾಣೆಯ ಮಂಜು ಎಂಬ ಪೇದೆ ಬೈಕ್ ಸವಾರನ ತಲೆಗೆ ಜೋರಾಗಿ ಕೈ ಬೀಸಿದ್ದಾರೆ.
ಗಾಡಿ ರನ್ನಿಂಗ್ ನಲ್ಲಿದೆ, ಮುಂದೆ ಹಿಂದೆ ಬೇರೆ ಸವಾರರು ಹೋಗುತ್ತಿರುತ್ತಾರೆ. ಪೇದೆ ಸವಾರನ ತಲೆಗೆ ಕೈ ಬೀಸಿದಾಗ, ಆತ ಬಿದ್ದು, ಆತನ ಹಿಂದೆ ನಾಲ್ಕೈದು ಜನ ಬಿದ್ದು, ಪೆಟ್ಟಾದ್ರೆ ಹೊಣೆ ಯಾರಾಗ್ತಾರೆ..? ಹಾಗಂತ ಆ ವಾಹನ ಸವಾರ ಮಾಡಿದ್ದು ಸರಿ ಅಂತ ಅಲ್ಲ.. ಪೊಲೀಸರು ಮಾಡಿದ್ದು ಕೂಡ ಸರಿ ಅಲ್ಲ.
ಈಗ ಟೆಕ್ನಾಲಜಿ ತುಂಬಾ ಅಭಿವೃದ್ಧಿಯಾಗಿದೆ. ಟ್ರಾಫಿಕ್ ನಲ್ಲಿ ಗಾಡಿ ಹಿಡೀದೆ ದಂಡ ಹಾಕಬೇಕು ಅಂತ ಏನಿಲ್ಲ. ಪೊಲೀಸರ ಕೈನಲ್ಲಿ ಮೊಬೈಲ್ ಇರುತ್ತೆ. ಅದರಲ್ಲಿ ಆತನ ಗಾಡಿಯ ಫೋಟೋ ತೆಗೆದಿದ್ದರೆ ಸಾಕಿತ್ತಲ್ಲ. ತಪ್ಪು ಮಾಡಿದ್ರೆ ದಂಡ ಆತ ಕಟ್ಟುತ್ತಿದ್ದ.
ಯಾಕೆ ಪೊಲೀಸರ ಕೈಗೆ ಹಣ ಕೊಟ್ಟು ದಂಡ ಕಟ್ಟಬೇಕಾ..?ಈ ಘಟನೆಯಿಂದ ಸಾರ್ವಜನಿಕರಿಗೆ ಏನಾದರೂ ಪ್ರಾಣಾಂತಿಕ ತೊಂದರೆಯಾಗಿದ್ದರೆ ಅನ್ನೋ ಪ್ರಶ್ನೆ ಅಷ್ಟೆ.
ಈದನ್ನ ಗಮನಿಸಿದ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಮಾಧ್ಯಮ ಪ್ರತಿನಿಧಿ ಹೆಚ್.ಎಲ್ ರಮೇಶ್ ಬಾಬು, ಅದೇ ಪೇದೆಯನ್ನು ಪ್ರಶ್ನಿಸಿದ್ದಾರೆ. ಆಗ ಎನ್ಇಪಿಎಸ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣಪ್ಪ ಹೇಳಿದ್ದಿಷ್ಟು, ಸಾರ್ವಜನಿಕರು ಗಾಡಿ ನಿಲ್ಲಿಸಲಿಲ್ಲ ಅಂದ್ರೆ ಬೋಳಿ ಮಕ್ಳಿಗೆ ಹೊದೆಯೋದೆ ಎಂದಿದ್ದಾರೆ.
ಟ್ರಾಫಿಕ್ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ನಡೆಯುತ್ತಿದ್ದ ಮಾನಸಿಕ ಹಾಗೂ ದೈಹಿಕ ಘರ್ಷಣೆಗಳು ಹಾಗೂ ವಾಗ್ವಾದಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಕಾರಣವಾಗಿವೆ. ಸಾರ್ವಜನಿಕರ ವಾಹನಗಳನ್ನು ಟ್ರಾಫಿಕ್ ಪೊಲೀಸರು ತಡೆದು ತಪಾಸಣೆ ಮಾಡುವ ಸಂದರ್ಭದಲ್ಲಿ ಕರ್ತವ್ಯನಿರತ ಅಧಿಕಾರಿಗಳು ಧರಿಸಲು ಇಲಾಖೆಯ ವತಿಯಿಂದ ನೀಡಿದಂಥ ಪಾಕೆಟ್ ಕ್ಯಾಮೆರಾಗಳು ಕಣ್ಮರೆಯಾಗಿರುವ ಕಾರಣ, ಕೆಲವರು ತಮ್ಮ ಮೇಲಾಧಿಕಾರಿಗಳ ಭಯವಿಲ್ಲದೆ ಮನಬಂದಂತೆ ವರ್ತಿಸುತ್ತಿದ್ದಾರೆ.
ಜನಸ್ನೇಹಿಯಾಗಿ ಸಾರ್ವಜನಿಕರೊಂದಿಗೆ ಸ್ಪಂದಿಸಬೇಕಾದ ಸಿಬ್ಬಂದಿಯೇ ಹೀಗೆ ವರ್ತಿಸಿದರೆ ಸಾಮಾನ್ಯ ನಾಗರಿಕರ ಪಾಡೇನು? ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇಂತಹ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.