ಆರೆಸ್ಸೆಸ್ ಬಗ್ಗೆ ನೀಡಿರುವ ಹೇಳಿಕೆಗೆ ಬದ್ಧ, ಬೇಕಿದ್ದರೆ ಚರ್ಚೆಗೂ ಸಿದ್ಧ’ ಎಂದ ಎಚ್.ಡಿ ಕುಮಾರಸ್ವಾಮಿ

ಆರೆಸ್ಸೆಸ್ ಬಗ್ಗೆ ನೀಡಿರುವ ಹೇಳಿಕೆಗೆ ಬದ್ಧ, ಬೇಕಿದ್ದರೆ ಚರ್ಚೆಗೂ ಸಿದ್ಧ’ ಎಂದ ಎಚ್.ಡಿ ಕುಮಾರಸ್ವಾಮಿ

ರಾಮನಗರ: ಆರೆಸ್ಸೆಸ್ ಬಗ್ಗೆ ನಾನು ಕೊಟ್ಟಿರುವ ಹೇಳಿಕೆಗೆ ಬದ್ಧನಾಗಿದ್ದೇನೆ. ವಾಸ್ತವ ಸಂಗತಿಗಳನ್ನು ಮಾತ್ರ ಹೇಳಿದ್ದೇನೆ. ಆರೆಸ್ಸೆಸ್ ಪ್ರಚಾರಕರೊಬ್ಬರು ಹೇಳಿರುವ ಮಾತುಗಳನ್ನು ನಾನು ಉಲ್ಲೇಖ ಮಾಡಿದ್ದೇನೆ. ಬೇಕಿದ್ದರೆ ನನ್ನ ಹೇಳಿಕೆ ವಿರೋಧ ಮಾಡುವವರು ಸಾರ್ವಜನಿಕವಾಗಿ ಚರ್ಚೆಗೆ ಬರಲಿ. ನಾನು ಸಿದ್ಧನಿದ್ದೇನೆ. ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಬರಲಿ ಎಂದು ಕುಮಾರಸ್ವಾಮಿ ಹೇಳಿದರು.

 

ಶುಕ್ರವಾರ ಚನ್ನಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗ ಆರೆಸ್ಸೆಸ್ ಇಲ್ಲದಿದ್ದರೆ ಭಾರತವು ಪಾಕಿಸ್ತಾನ ಆಗುತಿತ್ತು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ ಅವರು ಹುಟ್ಟಿದ್ರಾ? ಯಾರ ಯಾರ ಕೊಡುಗೆ ಏನೇನು ಇದೆ ಎಂದು ಈಶ್ವರಪ್ಪ ಅವರಿಗೇನು ಗೊತ್ತು? ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

 

ಕಾಶ್ಮೀರದಲ್ಲಿ ಶಾಲೆಗೆ ನುಗ್ಗಿ ಭಯೋತ್ಪಾದಕರು ಶಿಕ್ಷಕರನ್ನ ಸುಟ್ಟಿದ್ದಾರೆ. ದೇವೇಗೌಡರು ಪ್ರಧಾನಿ ಆಗಿದ್ದ ವೇಳೆ ದೇಶದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಒಂದೇ ಒಂದು ಘಟನೆ ನಡೆದಿತ್ತಾ? ಕಳೆದ 4 ದಿನಗಳಲ್ಲಿ ಕಾಶ್ಮೀರದಲ್ಲಿ ಪಂಡಿತರು, ಶಿಕ್ಷಕರು, ನಾಗರಿಕರನ್ನು ಭಯೋತ್ಪಾದಕರು ಗುಂಡಿಟ್ಟು ಕೊಂದಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.

 

ಕಾಂಗ್ರೆಸ್ ನಾಯಕರ ಜತೆಗೆ ಬಿಜೆಪಿ ನಾಯಕರು ವಾದ ಮಾಡಿದ ಹಾಗೆ ನನ್ನ ಬಳಿ ಚರ್ಚೆ ಬೇಡ. ನಾನು ದಾಖಲೆ, ಆಧಾರ ಇಟ್ಟುಕೊಂಡು ಮಾತನಾಡಿದ್ದೇನೆ. ಆರೆಸ್ಸೆಸ್ ಹಾಗೂ ಬಿಜೆಪಿ ಸೇರಿಕೊಂಡು ಕಾಶ್ಮೀರವನ್ನ ಹಾಳು ಮಾಡುತ್ತಿದ್ದಾರೆ ಎಂದು ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

 

ನಮ್ಮ ಪಕ್ಷವನ್ನ 2023ಕ್ಕೆ ಅಧಿಕಾರಕ್ಕೆ ತರಲು ಕಾರ್ಯಾಗಾರಗಳನ್ನ ಮಾಡಿದ್ದೇನೆ. ಇದರ ಭಾಗವಾಗಿ ದೇಶಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಜನತೆ ಮುಂದೆ ಇಡಲು ಪ್ರಾರಂಭ ಮಾಡಿದ್ದೇನೆ. ಇದು ಇಲ್ಲಿಗೆ ನಿಲ್ಲಿಸುವ ಪ್ರಶ್ನೆ ಇಲ್ಲ. ಕಾರ್ಯಾಗಾರಗಳನ್ನು ಮಾಡುವ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

 

ಉಪ ಚುನಾವಣೆಯಲ್ಲಿ ಯಾರನ್ನೊ ಓಲೈಸಿಕೊಳ್ಳಲು ಈ ಕಾರ್ಯಾಗಾರ ಮಾಡಿಲ್ಲ. ಓಲೈಸೊ ರಾಜಕಾರಣ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಬಿಟ್ಟಿದ್ದು. ಹಿಂದುತ್ವದ ಹೆಸರಿನಲ್ಲಿ ಸಂದೇಶ ಕೊಡಲು ಬಿಜೆಪಿ ಹೊರಟಿದೆ. ಹಿಂದುತ್ವದ ರಾಜಕಾರಣ ಮಾಡಿಕೊಂಡು ಮತಗಳಿಗೋಸ್ಕರ ನಾನು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿಲ್ಲಾ ಎಂದು ಕುಮಾರಸ್ವಾಮಿ ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version