ಹೊಸ ದಾಖಲಾತಿಯಾದ ಬೇಬಿಕೇರ್‌ನಿಂದ ೧ನೇ ತರಗತಿಯ ಮಕ್ಕಳ ವರ್ಷದ ಸಂಪೂರ್ಣ ವೆಚ್ಚ ಭರಿಸಲಿದೆ ಸಂಸ್ಥೆ
ದೇವನಹಳ್ಳಿ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾದಿಂದಾಗಿ ವಿವಿಧ ಕ್ಷೇತ್ರಗಳು ನೆಲಕಚ್ಚಿಕೊಂಡಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪೋಷಕರಿಗೆ ಬೆನ್ನೆಲುಬಾಗಿ ಸ್ಟರ್ಲಿಂಗ್ ಆಂಗ್ಲ ಶಾಲೆಗೆ ಹೊಸದಾಗಿ ದಾಖಲಾಗುವ ಬೇಬಿ ಕೇರ್ ನಿಂದ ೧ನೇ ತರಗತಿಯ ಮಕ್ಕಳ ವರ್ಷದ ಸಂಪೂರ್ಣ ವೆಚ್ಚ ಭರಿಸುತ್ತಿರುವುದು ಶ್ಲಾಘನೀಯ ಎಂದು ಪುರಸಭಾ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ತಿಳಿಸಿದರು.
ಪಟ್ಟಣದ ಶಿಲ್ಪಕಲಾ ಶಾಲಾ ರಸ್ತೆಯಲ್ಲಿರುವ ಸ್ಟರ್ಲಿಂಗ್ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚಿಕ್ಕಂದಿನಿಂದಲೂ ಸಂಸ್ಥೆಯ ಕಾರ್ಯದರ್ಶಿಯಾದ ಕೆ.ಬಿ.ಅಶೋಕ್ ಅವರನ್ನು ನೋಡಿದ್ದೇನೆ. ಅವರ ಆಲೋಚನೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದಾಗಿದೆ. ಸತತವಾಗಿ ಶೇ.೧೦೦ರಷ್ಟು ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಬರುತ್ತಿತ್ತು. ಆದರೆ ಕೋವಿಡ್‌ನಂತಹ ಈಗಿನ ಪರಿಸ್ಥಿತಿಯಲ್ಲಿ ಪೋಷಕರು ಹಣ ಕೊಟ್ಟು ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವುದು ಎಂದರೆ ಕಷ್ಟದ ಕೆಲಸವಾಗಿದೆ. ಪೋಷಕರಿಗೆ ಈ ಬಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಚಿಂತೆ ಬೀಳುವಾಗಿಲ್ಲ. ಏಕೆಂದರೆ, ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡುತ್ತಿರುವ ಸಂಸ್ಥೆ ಸ್ಟರ್ಲಿಂಗ್ ಶಾಲೆ ಆಗಿರುವುದರಿಂದ ಮೊದಲ ವರ್ಷದಲ್ಲಿ ಯಾವುದೇ ಹಣ ನೀಡದೆ, ತಮ್ಮ ಮಕ್ಕಳನ್ನು ದಾಖಲಿಸಬಹುದು ಎಂದು ಹೇಳಿದರು.
ಸ್ಟರ್ಲಿಂಗ್ ಶಾಲೆಯ ಆಡಳಿತ ಮಂಡಳಿಯ ಸಿದ್ದಪ್ಪಾಜಿ.ಎಚ್.ಕೆ. ಮಾತನಾಡಿ, ಇಡೀ ವಿಶ್ವದಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗ ಹರಡಿಕೊಂಡಿರುವುದರಿಂದ ಸರಕಾರ ಶಾಲೆಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದರು. ಆನ್‌ಲೈನ್ ಶಿಕ್ಷಣದಿಂದ ಶಾಲೆಗಳು ನಡೆಯುತ್ತಿತ್ತು. ಪೋಷಕರಿಗೆ ಕೆಲಸ ಕಾರ್ಯಗಳು ಇಲ್ಲದೆ, ಆರ್ಥಿಕ ಸಂಕಷ್ಟದಲ್ಲಿರುವುದನ್ನು ಗಮನಿಸಿ, ಶಾಲೆ ಆಡಳಿತ ಮಂಡಳಿ ತೀರ್ಮಾನದಂತೆ, ಈ ಬಾರಿ ಶಾಲೆಗೆ ದಾಖಲಾಗುವ ಶಿಶುವಿಹಾರ, ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ಮತ್ತು ೧ನೇ ತರಗತಿಯ ಮೊದಲ ೧೦೦ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ದೇವನಹಳ್ಳಿಯ ಮತ್ತು ಸುತ್ತಮುತ್ತಲಿನ ಪೋಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ೨೦೨೧-೨೨ನೇ ಶೈಕ್ಷಣಿಕ ಸಾಳಿನ ದಾಖಲಾತಿ ಹಾಗೂ ಶಾಲೆ ವಿಶೇಷತೆಯ ಮತ್ತು ಉಚಿತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಈ ವೇಳೆಯಲ್ಲಿ ಸ್ಟರ್ಲಿಂಗ್ ಶಾಲೆಯ ಆಡಳಿತ ಮಂಡಳಿಯ ರಂಜಿತ ಸಿದ್ದಪ್ಪಾಜಿ, ಶಾಲೆಯ ಮುಖ್ಯೋಪಧ್ಯಾಯ ಮುನೇಗೌಡ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ಗುರುಮೂರ್ತಿ ಬೂದಿಗೆರೆ
8861100990