ಅಶಕ್ತ ಬ್ರಾಹ್ಮಣ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

 

 

ತುಮಕೂರು ನಗರದ ಬ್ರಾಹ್ಮಣ ಸೇವಾ ಸಂಘದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ವೈ.ಎನ್.ಶರ್ಮರವರು 300ಕ್ಕೂ ಅಧಿಕ ಅಶಕ್ತ ಬ್ರಾಹ್ಮಣ ಕುಟುಂಬಗಳಿಗೆ ಆಹಾರದ ಕಿಟ್ ನ್ನು ವಿತರಿಸಿದರು.

 

ಕೊರೋನಾ ಲಾಕ್ ಡೌನ್ ನಿಂದಾಗಿ ಬ್ರಾಹ್ಮಣ ಸಮುದಾಯದ ಅರ್ಚಕರು, ಪುರೋಹಿತರು, ಅಡುಗೆ ಕೆಲಸಗಾರರು, ವಿವಿಧ ವೃತ್ತಿಗಳಲ್ಲಿ ತೊಡಗಿರುವ ನಗರದ ಹಾಗೂ ಜಿಲ್ಲೆಯ ವಿವಿಧ ತಾಲ್ಲೋಕುಗಳ ಅಶಕ್ತ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನೊಳಗೊಂಡ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.

 

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಉಪಾಧ್ಯಕ್ಷರಾದ ವೈ.ಎನ್. ಶರ್ಮ ರವರು ಕೊರೋನಾ ಸೋಂಕಿನಿಂದ ಇಂದು ಇಡೀ ಪ್ರಪಂಚ ಅತ್ಯಂತ ಹೀನ ಪರಿಸ್ಥಿತಿಗೆ ತಲುಪಿದ್ದು, ಇಂತಹ ಪರಿಸ್ಥಿತಿ ಬರಬಾರದಿತ್ತು. ಈ ಸಂದರ್ಭದಲ್ಲಿ ನಾವು ನಮ್ಮವರು ಎಂಬ ಭಾವನೆಯನ್ನು ಎಲ್ಲರೂ ಬೆಳೆಸಿಕೊಂಡು ಸಮುದಾಯದಲ್ಲಿನ ಅಶಕ್ತರಿಗೆ ಕಿಂಚಿತ್ ಸಹಕಾರ ನೀಡುವ ಕೆಲಸ ಮಾಡಬೇಕು ಎಂದರು.

ತಾವು ಈಗಾಗಲೇ ತಮ್ಮ ಸ್ನೇಹಿತರೊಂದಿಗೆ ಬೆಂಗಳೂರು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಆಹಾರ ಪದಾರ್ಥಗಳನ್ನು ನೀಡುವ ಕೆಲಸ ಮಾಡಿದ್ದು, ಈಗ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಭಾದ ಸಹಕಾರದಲ್ಲಿ ಅಶಕ್ತ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಸಮಾಜದಲ್ಲಿ ಇಂದು ಪ್ರತಿಯೊಬ್ಬರು ತಾವು ಗಳಿಸಿದರಲ್ಲಿ ತೊಂದರೆಗೊಳಗಾದವರ ಬಗ್ಗೆ ಗಮನಹರಿಸಿ ಅವರನ್ನು ಕಾಪಾಡುವ ಕೆಲಸ ಮಾಡಬೇಕು. ಮನುಷ್ಯ ಎಷ್ಟೇ ದುಡಿದರೂ ಕೊನೆಯಲ್ಲಿ ತಾನು ಏನನ್ನೂ ಒಯ್ಯಲಾರ, ಹಾಗಾಗಿ ಸಮಾಜ ಸೇವೆಯಲ್ಲಿ ಪ್ರತಿಯೊಬ್ಬರೂ ತೊಡಗಬೇಕು. ತಾವು ನೀಡುತ್ತಿರುವು ಅಲ್ಪ ಪ್ರಮಾಣದ ಸಹಾಯವಾಗಿದ್ದು ಸಮುದಾಯದ ತಮ್ಮ ಸಹೋದರ ಸಹೋದರಿಗೆ ಸಹಾಯ ಮಾಡುತ್ತಿರುವುದಾಗಿ ತಿಳಿಸಿದರು.

 

ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಹೆಚ್.ಎನ್. ಚಂದ್ರಶೇಖರ್ ರವರು ಮಾತನಾಡಿ ಜಿಲ್ಲೆಯಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಅಶಕ್ತ ಬ್ರಾಹ್ಮಣ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಿದ್ದು ಇಂದು ದಾನಿಗಳು ಉದಾರ ಮನೋಭಾವ ಉಳ್ಳವರೂ ಆದ ವೈ.ಎನ್. ಶರ್ಮರವರು ಜಿಲ್ಲೆಯ ಎಲ್ಲಾ ತಾಲ್ಲೋಕುಗಳ ಸಮುದಾಯದಲ್ಲಿ ಲಾಕ್ ಡೌನ್ ನಿಂದ ತೊಂದರೆಗೊಳಗಾದ 300ಕ್ಕೂ ಅಧಿಕ ಕುಟುಂಬಗಳಿಗೆ ಆಹಾರದ ಕಿಟ್ ಒದಗಿಸಿದ್ದಾರೆ. ಅದನ್ನು ಸಂಘದ ಮೂಲಕ ಆದ್ಯತೆಯ ಮೇರೆಗೆ ಅವಶ್ಯಕತೆಯಿರುವ ಕುಟುಂಬಗಳಿಗೆ ತಲುಪಿಸುವ ಕೆಲಸ ಮಾಡುವುದಾಗಿ ತಿಳಿಸಿ ಉದಾರ ಮನಸ್ಸಿನಿಂದ ಆಹಾರ ಪದಾರ್ಥಗಳ ಕಿಟ್ ಒದಗಿಸಿದ ವೈ.ಎನ್.ಶರ್ಮರವರಿಗೆ ಧನ್ಯವಾದಗಳನ್ನು ತಿಳಿಸಿದರು.

 

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಸಿ.ಎನ್. ರಮೇಶ್, ಸುರೇಶ್ ಹೊಳ್ಳ, ಫಣೀಶ್, ರಾಘವೇಂದ್ರ, ಡಾ. ಹರೀಶ್ ಹಿರಣ್ಣಯ್ಯ, ಶ್ರೀಮತಿ ಸುಭಾಷಿಣಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version