ಹೆದ್ದಾರಿ ತಡೆ ತೆರವಿಗೆ ಹರ್ಯಾಣ ಸರಕಾರದ ಸಂಧಾನಯತ್ನ: ಸಮಿತಿಯನ್ನು ಭೇಟಿಯಾಗದಿರಲು ರೈತರ ನಿರ್ಧಾರ
ಹೊಸದಿಲ್ಲಿ: ಕೇಂದ್ರದ ಕೃಷಿಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಕುಂಡಲಿ-ಸಿಂಘು ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ರಸ್ತೆ ತಡೆ ನಿರ್ಮಿಸಿರುವುದನ್ನು ತೆರವುಗೊಳಿಸಲು ಹರ್ಯಾಣ ಸರಕಾರವು ರಚಿಸಿರುವ ಸಮಿತಿಯನ್ನು ಭೇಟಿಯಾಗದಿರಲು ರೈತಮುಖಂಡರು ಸೋಮವಾರ ನಿರ್ಧರಿಸಿದ್ದಾರೆ. ಸಿಂಘು ಗಡಿಯ ಹೆದ್ದಾರಿಯಲ್ಲಿ ರಸ್ತೆಗಳನ್ನು ನಿರ್ಬಂಧಿಸಿರುವುದು ಪ್ರತಿಭಟನನಿರತ ರೈತರಲ್ಲ. ಬದಲಿಗೆ ಪೊಲೀಸರು ರಸ್ತೆಗಳಿಗೆ ತಡೆಯೊಡ್ಡಿದ್ದಾರೆ ಹಾಗೂ ತಡೆಬೇಲಿಗಳನ್ನು ನಿರ್ಮಿಸಿದ್ದಾರೆಂದು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ರೈತ ಸಂಘಟನೆಗಳ ಮಾತೃಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಸುಪ್ರೀಂಕೋರ್ಟ್ನ ಆದೇಶವನ್ನು ಹರ್ಯಾಣ ಸರಕಾರವು ತಪ್ಪಾಗಿ ವ್ಯಾಖ್ಯಾನಿಸುತ್ತಿದೆ ಹಾಗೂ ರೈತರನ್ನು ಬಲವಂತವಾಗಿ ಮಾತುಕತೆಗೆ ಎಳೆಯುತ್ತಿದೆಯೆಂದು ಅದು ಆರೋಪಿಸಿದೆ.
ಕಳೆದ ವಾರ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಕಟ್ಟರ್ ಅವರು ರೈತರು ಧರಣಿ ನಡೆಸುತ್ತಿರುವ ಕುಂಡಲಿ-ಸಿಂಘು ಗಡಿಯಲ್ಲಿನ ಹೆದ್ದಾರಿಯನ್ನು ಹೇಗೆ ತೆರೆಯಬಹುದು ಎಂಬ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿತ್ತು. ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜೀವ್ ಆರೋರಾ ಅವರು ಸಮಿತಿಗೆ ಅಧ್ಯಕ್ಷರಾಗಿದ್ದು, ಜಿಲ್ಲಾ ಪೊಲೀಸ್ ಉಪವರಿಷ್ಠ (ಡಿಜಿಪಿ) ಹಾಗೂ ಹೆಚ್ಚುವರಿ ಡಿಜಿಪಿ (ಕಾನೂನು, ಸುವ್ಯವಸ್ಥೆ) ಸದಸ್ಯರಾಗಿದ್ದಾರೆ. ಇದಕ್ಕೂ ಒಂದು ದಿನ ಮೊದಲು ಸೋನಿಪತ್ ಜಿಲ್ಲಾಧಿಕಾರಿಯವರು ಪ್ರತಿಭಟನನಿತರ ರೈತರನ್ನು ಭೇಟಿಯಾಗಿದ್ದರು. ಜನಸಾಮಾನ್ಯರು ಸಿಂಘುಗಡಿಯಲ್ಲಿ ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು.
ರಸ್ತೆ ಸಂಚಾರ ನಿರ್ಬಂಧಿಸಿರುವುದು ತಾವಲ್ಲ, ಬದಲಾಗಿ ಪೊಲೀಸರು ಎಂಬ ರೈತರ ಆರೋಪಕ್ಕೆ ಉತ್ತರಿಸಿದ ರಾಜೀವ್ ಆರೋರಾ ಅವರು, ಈ ಎಲ್ಲಾ ಸಮಸ್ಯೆಗಳು ಮಾತುಕತೆಗಳು ನಡೆದಾಗ ಮಾತ್ರವೇ ಇತ್ಯರ್ಥವಾಗಬಲ್ಲದು. ಆದರೆ ಇಂದು ಈ ಬಗ್ಗೆ ಸಭೆಯ ಕರೆದಿದ್ದರೂ, ಯಾವುದೇ ರೈತ ಮುಖಂಡರು ಭಾಗವಹಿಸಲಿಲ್ಲವೆಂದು ರೋರಾ ಅವರು ಹೇಳಿದರು