ಪೆಟ್ರೋಲ್ ಬೆಲೆಯಲ್ಲಿ ರೂ.3 ಕಡಿತಗೊಳಿಸಿದ ತಮಿಳುನಾಡು ಸರ್ಕಾರ; ಕರ್ನಾಟಕದಲ್ಲಿ ಯಾವಾಗ?; ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಪ್ರತಿ ಲೀಟರೆ ಪೆಟ್ರೋಲ್ ಬೆಲೆಯಲ್ಲಿ ರೂ.3 ಕಡಿತಗೊಳಿಸಿ ಆದೇಶಿಸಿದ್ದು, ತಮಿಳುನಾಡು ಸರ್ಕಾರ ಈ ನಿರ್ಧಾರವನ್ನು ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಯಾವಾಗ ಎಂದು ಶುಕ್ರವಾರ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪೆಟ್ರೋಲ್ ಮೇಲಿನ ಸುಂಕವನ್ನು ರೂ.3 ಇಳಿಸಿ ತಮಿಳುನಾಡು ಸರ್ಕಾರ ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ. ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಮಿಳುನಾಡು ಸರ್ಕಾರದಂತೆಯೇ ನಮ್ಮ ರಾಜ್ಯದಲ್ಲೂ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ರೂ.3 ಇಳಿಕೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತೇನೆಂದು ಬರೆದುಕೊಂಡಿದ್ದಾರೆ.
ನಿನ್ನೆಯಷ್ಟೇ ತಮಿಳುನಾಡು ಹಣಕಾಸು ಮತ್ತು ಮಾನವ ಸಂಪನ್ಮೂಲ ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ತಮ್ಮ ಬಜೆಟ್ ನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಮೇಲೆ ರೂ.3 ಕಡಿತಗೊಳಿಸುವ ಘೋಷಣೆ ಮಾಡಿದ್ದರು. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ ರೂ.1.160 ಕೋಟಿ ನಷ್ಟವಾಗಲಿದೆ. ಆದರೆ, ನಮ್ಮ ಸರ್ಕಾರ ದುಡಿಯುವ ವರ್ಗಕ್ಕೆ ಸ್ವಲ್ಪ ಸಮಾಧಾನ ನೀಡುವ ಪ್ರಯತ್ನವಾಗಿ ಪೆಟ್ರೋಲ್ ಮೇಲಿನ ರಾಜ್ಯ ಸುಂಕವನ್ನು ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದ್ದರು.