ಅಧಿಕ ಪ್ರಸಂಗಿ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳಬೇಕು: ಸಿದ್ದರಾಮಯ್ಯ
ಬೆಂಗಳೂರು, ಆ. 18: `ರೈತ ಹೋರಾಟಗಾರರು `ದಲ್ಲಾಳಿಗಳು’, `ಮಧ್ಯವರ್ತಿಗಳು’ ಎಂಬ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಕೇಂದ್ರ ಸರಕಾರದ ಅಧಿಕೃತ ನಿಲುವಾಗಿದ್ದರೆ ಪ್ರಧಾನಿ ಮೋದಿ ಅವರು ಒಪ್ಪಿಕೊಳ್ಳಬೇಕು, ಇಲ್ಲವಾದರೆ ಈ ಬಗ್ಗೆ ಸ್ಪಷ್ಟನೆ ನೀಡಿ ಅಧಿಕಪ್ರಸಂಗಿ ಸಚಿವೆಯ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಆಗ್ರಹಿಸಿದ್ದಾರೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಕೇಂದ್ರದ ಬಿಜೆಪಿ ಸರಕಾರದ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು `ದಲ್ಲಾಳಿಗಳು’, ‘ಮಧ್ಯವರ್ತಿಗಳು’ ಎಂದು ಅವಮಾನಿಸಿರುವ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಖಂಡನೀಯ. ಅವರು ತಕ್ಷಣ ತಮ್ಮ ಹೇಳಿಕೆಯನ್ನು ವಾಪಸು ಪಡೆದು ರೈತರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರಂತಹ ಹಿರಿಯರು ಮುನ್ನಡೆಸಿದ್ದ ರೈತ ಹೋರಾಟಕ್ಕೆ ಹೆಮ್ಮೆಯ ಪರಂಪರೆ ಇದೆ. ಇದೇನು ಅಧಿಕಾರಕ್ಕಾಗಿ, ಸಚಿವಸ್ಥಾನಕ್ಕಾಗಿ ನಡೆಸುವ ರಾಜಕೀಯ ದಲ್ಲಾಳಿಗಿರಿ ಹೋರಾಟ ಅಲ್ಲ ಎನ್ನುವುದನ್ನು ಶೋಭಾ ಕರಂದ್ಲಾಜೆ ಅವರಂತಹವರು ತಿಳಿದುಕೊಳ್ಳುವುದು ಒಳಿತು’ ಎಂದು ಸಿದ್ದರಾಮಯ್ಯ ಅವರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.