ಪಠ್ಯಪುಸ್ತಕದಲ್ಲಿ ಹೆಡಗೆವಾರ್ ಪಾಠ ಇಟ್ಟಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೆಲ ಜನರಿಗೆ ಇದರ ಬಗ್ಗೆ ವಿರೋಧ ಮಾಡುವುದೇ ಕೆಲಸವಾಗಿದೆ. ಕೆಲವರಿಗೆ ಅವರ ವಿಚಾರ ಮಾತ್ರ ಇರಬೇಕು ಎಂಬ ಮನಸ್ಥಿತಿ ಇದೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಿಕ್ಷಣ ಮತ್ತು ಪಠ್ಯಪುಸ್ತಕ ನಿಂತ ನೀರಲ್ಲ. ಹಾಗಾಗಿ ಬದಲಾವಣೆ ಆಗುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.
ಇದುವರೆಗೂ ಕ್ರಿಶ್ಚಿಯನ್ ಇತಿಹಾಸದಲ್ಲಿ ಭೂಮಿ ಚಪ್ಪಟೆಯಾಗಿತ್ತು, ಗೋಲಾಕಾರವಾಗಿ ಇರಲಿಲ್ಲ ಎಂದು ಬೋಧಿಸಲಾಗುತ್ತಿತ್ತು. ಈಗಲೂ ನಾವು ಅದನ್ನೇ ಕಲಿಸಬೇಕಾ? ಎಂದು ಪ್ರಶ್ನಿಸಿದ್ದಾರೆ.
ಕಾಲ ಕಾಲಕ್ಕೆ ಯಾವ ಬದಲಾವಣೆ ಆಗಬೇಕೋ ಅದನ್ನು ಶಿಕ್ಷಣತಜ್ಞರು ಮಾಡುತ್ತಾರೆ. ಹೆಡಗೆವಾರ್ ಅವರು ವ್ಯಕ್ತಿಗಿಂತ ಸಿದ್ದಾಂತ ಮುಖ್ಯ ಅಂದಿದ್ದರು. ಅದನ್ನೇ ಆದರ್ಶವಾಗಿ ಇರಿಸಿಕೊಳ್ಳಿ ಅಂತ ಹೇಳಿದ್ದಾರೆ ಎಂದು ನೂತನ ಪಠ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಹೆಡಗೆವಾರ್ ಪಾಠವನ್ನು ಪಠ್ಯದಿಂದ ತೆಗೆಯುವ ಪ್ರಶ್ನೆಯೇ ಇಲ್ಲ. ಭಗತ್ ಸಿಂಗ್ ರವರ ವಿಚಾರ ಪಾಠದಿಂದ ತೆಗೆದಿಲ್ಲ. ಹೆಚ್ಚುವರಿಯಾಗಿ ಸೇರಿಸಲಾಗಿದೆ ಎಂದು ಹೇಳಿದರು.
ಕೊಡಗಿನ ಶಾಲೆಯೊಂದರಲ್ಲಿ ಬಂದೂಕು ತರಬೇತಿ ಮತ್ತಹ ತ್ರಿಶೂಲ ದೀಕ್ಷೆ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು, ಅದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅಂತಹ ಘಟನೆ ಶಾಲೆಯಲ್ಲಿ ನಡೆದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಶಿಕ್ಷಣದಲ್ಲಿ ಹೊಸ ಯೋಜನೆ ಘೋಷನೆ ಮಾಡುವುದಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಕೊಡುತ್ತೇವೆ. ಕೋವಿಡ್ ನಿಂದ ಕಲಿಕೆಗೆ ಹಿನ್ನಡೆಯಾಗಿತ್ತು. ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇವೆ ಎಂದರು.
ವಿದ್ಯಾರ್ಥಿಗಳಿಗೆ ಸೈಕಲ್ ಕೊಡುವುದು ಮೊದಲ ಆದ್ಯತೆಯಲ್ಲ. ಮೊದಲು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಕೊಡುತ್ತೇವೆ. ಹಾಗಾಗಿ 15 ಸಾವಿರ ಶಿಕ್ಷಕರ ನೇಮಕ ಮಾಡಲಾಗಿದೆ. ನಂತರ ಸೈಕಲ್ ಕೊಡುವ ಬಗ್ಗೆ ಯೋಚಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.