ಪಿಡಿಒ ಕಾರ್ಯ ವೈಖರಿ ಅಸಮದಾನಕ್ಕೆ ಆಕ್ರೋಶ, ಅಕ್ರಮಗಳ ಬಹಿರಂಗಪಡಿಸಿದ ಸರ್ವ ಸದಸ್ಯರು.
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ಆವರಣದ ಮುಂಭಾಗದಲ್ಲಿ ಪಂಚಾಯಿತಿ ಸರ್ವ ಸದಸ್ಯರನ್ನೊಳಗೊಂಡಂತೆ ಪಿಡಿಒ ಉಷಾ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಹಿಂದೆಯೂ ಸಹ ಸರ್ವ ಸದಸ್ಯರು ಇದೇ ಪಿಡಿಒ ಉಷಾ ಅವರ ಕಾರ್ಯವೈಖರಿಯ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದು, ವರ್ಗಾಯಿಸುವಂತೆ ಹಾಗೂ ಸಸ್ಪೆಂಡ್ ಮಾಡುವಂತೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಇದೆಲ್ಲಾ ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂಬ ಕಾರಣಕ್ಕೆ ಪಂಚಾಯಿಗೆ ಬೀಗ ಜಡಿದು ಈ ಪಿಡಿಒ ಬೇಡ ಎಂದು ಪ್ರತಿಭಟಿಸಿದ್ದರು. ಆದರೂ ಸಹ ಕೋರ್ಟ್ ಮೆಟ್ಟಿಲೇರಿದ ಪಿಡಿಒ ಉಷಾ ಮತ್ತೇ ಇದೇ ಪಂಚಾಯಿತಿಗೆ ಪಿಡಿಒ ಆಗಿ ಬಂದು ಕಾರ್ಯನಿರ್ವಹಿಸುತ್ತಿದ್ದರು.
ಕಾರ್ಯ ನಿರ್ವಹಿಸುತ್ತಿದ್ದ ಪಿಡಿಒ ಉಷಾ ಅವರ ಅಕ್ರಮಗಳನ್ನು ಬಯಲಿಗೆಳೆದ ಸರ್ವ ಸದಸ್ಯರು ಇಂದು ಬೆಳಿಗ್ಗೆಯಿಂದಲೇ ಪಂಚಾಯಿತಿ ಮುಂದೆ ಜಮಾಯಿಸಿ ಪಂಚಾಯಿತಿಯನ್ನು ಮುಚ್ಚಿಸಿ, ಧರಣಿ ನಡೆಸುವುದರ ಮೂಲಕ ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸ್ಥಳಕ್ಕೆ ದೇವನಹಳ್ಳಿ ತಾಲೂಕು ಇಒ ವಸಂತಕುಮಾರ್, ಎಡಿ ಸುನೀಲ್ ಹಾಗೂ ವಿಶ್ವನಾಥಪುರ ಪಿಎಸೈ ವೆಂಕಟೇಶ್ ಭೇಟಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಇಒ ವಸಂತ್‌ಕುಮಾರ್ ಅವರನ್ನು ಸರ್ವ ಸದಸ್ಯರು ಪಿಡಿಒ ಉಷಾ ಅವರ ಕಾರ್ಯ ವೈಖರಿಯ ಬಗ್ಗೆ ಎಳೆಎಳೆಯಾಗಿ ವಿವರಿಸಿದರು. ಜತೆಗೆ ಪಿಡಿಒ ಉಷಾ ಸದಸ್ಯರೊಬ್ಬರೊಂದಿಗೆ ಲಂಚಾದ ಬೇಡಿಕೆ ಇಟ್ಟಿದ್ದಾರೆಂಬ ಆಡಿಯೋ ರೆಕಾರ್ಡ್ ಸಹ ಬಹಿರಂಗವಾಗಿ ಇಒ ಮುಂದಿಡಲಾಯಿತು. ಇದಾದ ನಂತರ ಇಒ ಸದಸ್ಯರೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿಭಟನೆಯನ್ನು ಹಿಂಪಡೆಯಿರಿ ಎಂದು ಮನೊವೊಲಿಸಿದರು. ತದನಂತರ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಜಿಪಂ ಸಿಇಒ ರವಿಕುಮಾರ್ ಅವರನ್ನು ಭೇಟಿ ಮಾಡಿ ವಾಸ್ತವಾಂಶವನ್ನು ವಿವರಿಸಲು ಮುಂದಾದರು. ಪ್ರತಿಭಟನೆಯಲ್ಲಿ ಜಾಲಿಗೆ ಗ್ರಾಪಂ ಅಧ್ಯಕ್ಷೆ ದೀಪ್ತಿವಿಜಯ್‌ಕುಮಾರ್, ಉಪಾಧ್ಯಕ್ಷ ಎಚ್.ಬಾಲಸುಬ್ರಮಣ್ಯ, ಸದಸ್ಯರು ಪಿಡಿಒ ವಿರುದ್ಧ ಟೀಕಾಪ್ರಹಾರ ನಡೆಸುವುದರ ಮೂಲಕ ಅವರ ಅಕ್ರಮಗಳನ್ನು ಅಧಿಕಾರಿಗಳ ಮುಂದಿಟ್ಟರು.
ಈ ವೇಳೆಯಲ್ಲಿ ಗ್ರಾಪಂ ಅಧ್ಯಕ್ಷೆ ದೀಪ್ತಿ, ಉಪಾಧ್ಯಕ್ಷ ಬಾಲಸುಬ್ರಮಣ್ಯ, ಸದಸ್ಯರಾದ ಪದ್ಮಾವತಿ, ರಾಧಮ್ಮ, ಭವ್ಯ, ಸುಬ್ರಮಣ್ಯ, ವಿಜಯ, ಆನಂದ್.ಸಿ.ಎಂ, ಮಂಜುಳ, ಶೋಭಾ, ಕೆಂಪರಾಜ, ಅಪ್ಪಯ್ಯ, ಸುಚಿತ್ರ, ಮುನಿಯಪ್ಪ, ಮುನಿರತ್ನಮ್ಮ, ಜಯಮ್ಮ, ಅಶ್ವಿನಿ, ಶಿವಲಿಂಗಮ್ಮ, ಮಹೇಶ್ ಕುಮಾರ್, ಆನಂದ್‌ಕುಮಾರ್, ಗೋಪಿನಾಥ್, ಲಕ್ಷ್ಮಮ್ಮ, ಸೌಮ್ಯ, ಜಾಲಿಗೆ ಗ್ರಾಪಂ ವ್ಯಾಪ್ತಿಯ ಮುಖಂಡರು, ಗ್ರಾಮಸ್ಥರು ಇದ್ದರು.
ಮಂಜು ಬೂದಿಗೆರೆ
9113813926