ದೇವನಹಳ್ಳಿ: ನಾಡಿನ ವಿಷಯ ಬಂದಾಗ ಜಯಕರ್ನಾಟಕ ಸಂಘಟನೆ ಕಾನೂನಾತ್ಮಕವಾಗಿ, ಹೋರಾಟ ಮೂಲಕ, ಪ್ರತಿಭಟನೆ ಮೂಲಕ ಸಾತ್ವಿಕವಾಗಿ ಒಂದು ಎಚ್ಚರಿಕೆಯನ್ನು ಕೊಡುವ ಮೂಲಕ ಹೋರಾಟ ಮಾಡಲಾಗುತ್ತದೆ ಎಂದು ಜಯಕರ್ನಾಟಕ ಸಂಘಟನೆಯ ಬೆಂಗಳೂರು ನಗರ ನಿಗಟಪೂರ್ವ ಜಿಲ್ಲಾಧ್ಯಕ್ಷ ಜಗದೀಶ್ ಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಯಕನಾಟಕ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಜನ್ಮದಿನದ ಅಭಿನಂದನಾ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಜಯಕರ್ನಾಟಕ ಸಂಘಟನೆಯ ರೂವಾರಿ ಮುತ್ತಪ್ಪ ರೈ ಅವರು ಸ್ಥಾಪಿಸಿ ೧೩-೧೪ ವರ್ಷಗಳಾಗಿದೆ. ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುತ್ತಿದೆ. ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಸಂಘಟನೆ ನೊಂದವರ, ಕನ್ನಡಿಗರ, ಎಲ್ಲಾರೊಂದಿಗೆ ಒಗ್ಗೂಡಿ ಕೆಲಸ ಮಾಡುತ್ತಾ ಬರುತ್ತಿದೆ. ಬಹು ಭಾಷಿಗರ ದೇಶ ನಮ್ಮ ಭಾರತ ದೇಶ, ಎಷ್ಟು ಭಾಷೆಗಳಿಗೆ ಆದ್ಯತೆ ಇದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಎಲ್ಲಾ ಪ್ರತಿಭಾನ್ವಿತ ಪ್ರಭುತ್ವದಲ್ಲಿ ಕೆಲಸ ಮಾಡಿರುವ ರಾಜಕಾರಣಿಗಳು, ಸಾಹಿತಿಗಳು, ವಿದ್ಯಾವಂತರಿಗೆಲ್ಲರಿಗೂ ಗೊತ್ತಿರುವ ವಿಷಯ. ಭಾಷೆಗಳ ಮೇಲೆ ಇನ್ನೊಂದು ಭಾಷೆಗಳನ್ನು ಅಧಿಕೃತವಾಗಿ ಹೇರಿಕೆ ಮಾಡುವಂತಹದ್ದು ಸರಿಯಾದ ಕ್ರಮವಲ್ಲ. ಅದನ್ನು ಖಂಡಿಸುತ್ತೇವೆ. ಹಳ್ಳಿಗಳಿಂದ ತುಂಬಿರುವ ಭಾಷೆಗಳಲ್ಲಿ ಆಯಾ ಪ್ರಾಂತ್ಯಗಳಿಗೆ ಅದರದೇ ಆದ ಒಂದು ಭಾಷೆ ಇದೆಯಲ್ಲಾ ಆ ಭಾಷೆಗೆ ಬೆಲೆ ಕೊಡಲೇಬೇಕಾಗುತ್ತದೆ. ಸ್ಥಳೀಯ ಭಾಷೆ ಉಳಿವೂ ಸಹ ಅಷ್ಟೇ ಮುಖ್ಯವಾಗಿರುತ್ತದೆ. ಯಾವತ್ತೂ ಭಾಷೆ ಉಳಿಯುತ್ತದೆಯೋ ಆಗ ಸಂಸ್ಕೃತಿ-ಸಂಸ್ಕಾರ ಉಳಿಯುತ್ತದೆ. ಎಲ್ಲಿ ಸಂಸ್ಕೃತಿ -ಸಂಸ್ಕಾರ ಉಳಿದಿರುತ್ತದೆಯೋ ಅಲ್ಲಿ ಚೈತನ್ಯ ಉಳಿಯುತ್ತದೆ. ಹಾಗಾಗೀ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ನಾವು ಕನ್ನಡಿಗರಾಗಿರುವುದರಿಂದ ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂಬುವುದು ನಮ್ಮೆಲ್ಲರ ನಿಲುವಾಗಿದೆ. ಸರಕಾರಗಳು ಬಹಳ ಜಾಣತನದಿಂದ ಕೆಲವು ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೆ ಜಾರಿಕೊಳ್ಳುವ ನಿಟ್ಟಿನಲ್ಲಿ ಅವರವರ ಅಧಿಕಾರವಧಿಯಲ್ಲಿ ಅವರವರು ಎಷ್ಟು ದಿನ ಇರುತ್ತೇವೆ ಎಂಬುವುದರ ಮೇಲೆ ಹೆಚ್ಚು ಗಮನವಹಿಸುತ್ತಿದ್ದಾರೆ. ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಗೆಹರಿಸಿಬಿಡಬೇಕು ಎಂಬ ಬದ್ಧತೆ ಅಥವಾ ಇಚ್ಛಾಶಕ್ತಿಯಾಗಲೀ ಸರಕಾರಗಳಲ್ಲಿ ಇರೋದಿಲ್ಲವೆಂಬುವುದು ನನ್ನ ಇಷ್ಟೂ ವರ್ಷಗಳ ಅನುಭವವಾಗಿದೆ. ಅಧಿಕಾರದ ಹಿಂದೆ ಸರಕಾರಗಳು ಇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಷ್ಟ್ರ ಮತ್ತು ರಾಜ್ಯದಲ್ಲಿನ ಕಚ್ಛತೈಲ ಬೆಲೆ ಏರುಪೇರುಗಳ ಮೇಲೆ ತಜ್ಞರು ಬೆಲೆ ನಿರ್ಧಾರ ಮಾಡುತ್ತಾರೆಂದು ಹೇಳುತ್ತಾರೆ. ಆದರೆ, ಸಾಮಾನ್ಯ ಜನತೆಗೆ ಪರಿಗಣನೆಗೆ ತೆಗೆದುಕೊಳ್ಳುವುದು ಅತೀ ಮುಖ್ಯವಾಗಿರುತ್ತದೆ ಎಂಬುವುದು ನಮ್ಮ ವಾದವಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹೊಸಹಳ್ಳಿ ಟಿ.ರವಿ, ರಾಜ್ಯ ಯುವ ಉಪಾಧ್ಯಕ್ಷ ಮುನಿಸ್ವಾಮಿ, ರಾಜ್ಯ ಸಮಿತಿ ಸದಸ್ಯ ಅಶ್ವತ್ಥಪ್ಪ, ದೇವನಹಳ್ಳಿ ತಾಲೂಕು ಅಧ್ಯಕ್ಷ ಚೇತನ್‌ಗೌಡ, ಕಾರ್ಯಾಧ್ಯಕ್ಷ ಮಾರೇಗೌಡ, ನೆಲಮಂಗಲ ತಾಲೂಕಿನ ಅಧ್ಯಕ್ಷ ರಾಮಮೂರ್ತಿ, ದೊಡ್ಡಬಳ್ಳಾಪುರ ತಾಲೂಕಿನ ಅಧ್ಯಕ್ಷ ಮುನೇಗೌಡ, ಜಂಟಿ ಕಾರ್ಯದರ್ಶಿ ವೆಂಕಟೇಶ್, ಮಹಿಳಾ ಪದಾಧಿಕಾರಿಗಳು, ಜಯಕರ್ನಾಟಕ ಜಿಲ್ಲಾ ಮತ್ತು ತಾಲೂಕು ಮಟ್ಟದ ಮುಖಂಡರು, ಪದಾಧಿಕಾರಿಗಳು ಇದ್ದರು.
ಮಂಜು ಬೂದಿಗೆರೆ
9113813926