ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಎರಡು ಲಸಿಕೆಗಳನ್ನು ಪೂರ್ಣಗೊಳಿಸಬೇಕು_ ಗ್ರಾಮಾಂತರ ಶಾಸಕರ ಡಿ ಸಿ ಗೌರಿಶಂಕರ್

 

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಎರಡು ಲಸಿಕೆಗಳನ್ನು ಪೂರ್ಣಗೊಳಿಸಬೇಕು, ಲಸಿಕೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಿ.ಸಿ.ಗೌರಿಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಕ್ಷೇತ್ರದಲ್ಲಿ ಬರುವ ೫,೦೯೦ ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಬೇಕು, ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಸುವ ಜವಾಬ್ದಾರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹೊರಬೇಕು ಎಂದು ಹೇಳಿದರು.

ಗ್ರಾಮಾಂತರ ಕ್ಷೇತ್ರದ ಹಲವೆಡೆ ನೆಟ್ ವರ್ಕ್ ಮತ್ತು ಮೊಬೈಲ್ ಸಮಸ್ಯೆ ಇದ್ದು, ಮಕ್ಕಳು ಆನ್ ಲೈನ್ ತರಗತಿಯಲ್ಲಿ ಹೇಗೆ ತಯಾರಿ ಮಾಡುತ್ತಿದ್ದಾರೋ ಏನೋ? ಶಿಕ್ಷಣ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕಳೆದ ವರ್ಷ ರೈತರಿಂದ ಖರೀದಿಸಿರುವ ರಾಗಿಗೆ ಹಣ ನೀಡಿಲ್ಲ, ವರ್ಷವಾದರೂ ಸಹ ಹಣ ನೀಡಲು ತೊಂದರೆಯಾಗಿರುವುದು ಏಕೆ? ಎಂದು ಕೃಷಿ ಮತ್ತು ಆಹಾರ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಅವರು ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಪೂರೈಸುವಂತೆ ಸೂಚಿಸಿದರು.

ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಬಿತ್ತನೆ ಸಮಯವಾಗಿದ್ದು ರೈತರಿಗೆ ತೊಂದರೆಯಾಗದAತೆ ಹೊರ ಗುತ್ತಿಗೆ ಮೂಲಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ ಅವರು, ಕೃಷಿ ಅಭಿಯಾನವನ್ನು ನಿರಂತರವಾಗಿ ನಡೆಸುವ ಮೂಲಕ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ರಾಗಿ ಖರೀದಿ ಕೇಂದ್ರದಲ್ಲಿ ರೈತರೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆ ಸೂಚಿಸಿದ ಅವರು, ರೈತರೊಂದಿಗೆ ಅಧಿಕಾರಿಗಳು ಸೌಜನ್ಯಯುತವಾಗಿ ವರ್ತಿಸದ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಎಚ್ಚರಿಕೆ ವಹಿಸುವಂತೆ ಆಹಾರ, ಕೃಷಿ ಮತ್ತು ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಕೊರೋನಾ ಮೂರನೇ ಅಲೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ೩೪ ತೀವ್ರ ಅಪೌಷ್ಟಿಕ ಮಕ್ಕಳು ೬೫೦ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅಂತಹ ಮಕ್ಕಳಿಗೆ ಚಿಕ್ಕಿ ಸೇರಿದಂತೆ ಅಗತ್ಯ ಪೌಷ್ಟಿಕ ಆಹಾರವನ್ನು ವೈಯಕ್ತಿಕವಾಗಿ ನೀಡಲು ಬದ್ಧನಾಗಿದ್ದು, ಅಧಿಕಾರಿಗಳು ತಿಳಿಸಿದರೆ ಅಷ್ಟು ಮಕ್ಕಳಿಗೆ ಅಗತ್ಯ ಆಹಾರ ಒದಗಿಸುವುದಾಗಿ ತಿಳಿಸಿದರು.

ಆರೋಗ್ಯ ಇಲಾಖೆ ಗ್ರಾಮೀಣ ಭಾಗದಲ್ಲಿ ಲಸಿಕೆ ನೀಡಲು ಒತ್ತು ನೀಡಬೇಕು, ಹೆಚ್ಚಿನ ಲಸಿಕೆ ನೀಡುವ ಮೂಲಕ ಗ್ರಾಮೀಣರಿಗೆ ಲಸಿಕೆ ನೀಡಬೇಕು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಎರಡು ಲಸಿಕೆ ನೀಡಬೇಕು, ಗ್ರಾಮೀಣ ಭಾಗದಲ್ಲಿ ಲಸಿಕೆಯ ಕೊರತೆ ಕಾಣುತ್ತಿದ್ದು, ಲಸಿಕೆ ಪಡೆಯಲು ನಗರ ಪ್ರದೇಶಕ್ಕೆ ಬರಬೇಕಾದಂತಹ ಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಲಸಿಕೆಗಳನ್ನು ನೀಡುವಂತೆ ಸೂಚಿಸಿದರು.

ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಶ್ ಗ್ರಾಮಾಂತರ ಕ್ಷೇತ್ರದಲ್ಲಿ ೧೯೫ ಸಕ್ರಿಯ ಪ್ರಕರಣಗಳು ಇರುವುದಾಗಿ ಸಭೆಗೆ ತಿಳಿಸಿದರು. ಲಾಕ್‌ಡೌನ್ ತೆರವುಗೊಳಿಸಿರುವುದರಿಂದ ಕೋವಿಡ್ ತಪಾಸಣೆಯನ್ನು ತೀವ್ರಗೊಳಿಸಬೇಕು ಹಾಗೂ ಮೂರನೇ ಅಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಶಾಸಕರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಟಿಎಚ್‌ಒ ಅವರು ಮಕ್ಕಳ ಪೋಷಕರಿಗೆ ಲಸಿಕೆ ನೀಡಲಾಗುವುದು ಹಾಗೂ ಆಸ್ಪತ್ರೆಗೆ ತಯಾರಿದ್ದು, ತಜ್ಞರಿಗೆ ತರಬೇತಿ ನೀಡಲಾಗಿದೆ,ಮಕ್ಕಳಿಗೆ ಆ್ಯಂಟಿ ಬಾಡಿ ಟೆಸ್ಟ್ ಮಾಡಲು ಕ್ರಮವಹಿಸಲಾಗಿದ್ದು, ಮಿಮ್‌ಸಿ ಪ್ರಕರಣದ ಹಿನ್ನೆಲೆಯಲ್ಲಿ ಕೇರಳದಿಂದ ಜಿಲ್ಲೆಗೆ ವಲಸೆ ಬಂದಿರುವವರ ಮೇಲೆ ನಿಗಾವಹಿಸಲಾಗಿದೆ ಎಂದು ತಿಳಿಸಿದರು.

ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವುದಾಗಿ ತಜ್ಞರು ಹೇಳುತ್ತಿದ್ದು, ಗ್ರಾಮಾಂತರ ಕ್ಷೇತ್ರದ ಜನರ ಹಿತಾಸಕ್ತಿಗಾಗಿ ಖಾಸಗಿಯಾಗಿ ೩೦ ಹಾಸಿಗೆ ಹಾಗೂ ೨೦ ಆಕ್ಸಿಜನ್ ಬೆಡ್ ವ್ಯವಸ್ಥೆಯನ್ನು ಖಾಸಗಿಯಾಗಿ ಮಾಡಿಕೊಡಲು ಸಿದ್ಧನಿದ್ದು, ತಾಲ್ಲೂಕು ಆರೋಗ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ಪಡೆಯುವಂತೆ ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಮೋಹನ್‌ಕುಮಾರ್, ಇಒ ಜೈಪಾಲ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version