ಬಿಜೆಪಿ ಮುಗಿಸಲು ಸಿ.ಟಿ.ರವಿ ಒಬ್ಬರೇ ಸಾಕು: ಡಿ.ಕೆ ಶಿವಕುಮಾರ್

ಬಿಜೆಪಿ ಮುಗಿಸಲು ಸಿ.ಟಿ.ರವಿ ಒಬ್ಬರೇ ಸಾಕು: ಡಿ.ಕೆ ಶಿವಕುಮಾರ್

ಬೆಂಗಳೂರು: ಸಿ.ಟಿ.ರವಿ ದೇಶದ ಇಮೇಜ್‍ಗೆ ಧಕ್ಕೆ ತರುತ್ತಿದ್ದಾರೆ. ಅವರನ್ನು ಬಿಜೆಪಿ ಯಾಕೆ ಇಟ್ಟುಕೊಂಡಿದೆಯೋ ಗೊತ್ತಿಲ್ಲ. ಬಿಜೆಪಿ ಮುಗಿಸೋಕೆ ಅವರೊಬ್ಬರೇ ಸಾಕು. ಅವರು ಬಹಳ ಒಳ್ಳೊಳ್ಳೆ ದೇಶಪ್ರೇಮಿ ಸ್ಟೇಟ್‍ಮೆಂಟ್ ಕೊಡ್ತಿದ್ದಾರೆ. ಅದರಿಂದ ಬಿಜೆಪಿಗೂ ಡ್ಯಾಮೇಜ್ ಆಗುತ್ತಿದೆ. ಅದಕ್ಕೆ ನಾವೂ ಸುಮ್ನೆ ಇದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

 

 

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ಬೆಳೆ ನಾಶ ಸಮೀಕ್ಷೆ, ಅಧ್ಯಯನ, ಸಭೆ ನಂತರ ಪರಿಹಾರ ಅಂತ ಕಾಲಹರಣ ಮಾಡಬಾರದು. ಬೆಳೆ ಹಾನಿ ಬಗ್ಗೆ ತಕ್ಷಣ ರೈತರಿಂದ ಅರ್ಜಿ ಆಹ್ವಾನಿಸಬೇಕು. ತಹಶೀಲ್ದಾರ್ ಮೂಲಕ ಸ್ವೀಕರಿಸಬೇಕು. ಅಧಿಕಾರಿಗಳನ್ನು ಕೂಡಲೇ ಸ್ಥಳಕ್ಕೆ ಕಳುಹಿಸಿ, ವಿಡಿಯೋ, ಫೊಟೋ ತೆಗೆಸಿ, 30 ದಿನದೊಳಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

 

 

ರಾಜ್ಯಾದ್ಯಂತ ನಮ್ಮ ಪಕ್ಷದ ಕಾರ್ಯಕರ್ತರು ಬೆಳೆ ಹಾನಿ ಅರ್ಜಿ ಸಲ್ಲಿಸಲು ರೈತರಿಗೆ ನೆರವಾಗಬೇಕು. ಅವರ ಪರವಾಗಿ ಫೋಟೋ ತೆಗೆದು ತಹಶೀಲ್ದಾರ್ ಅವರಿಗೆ ಕಳುಹಿಸಿಕೊಡಿ. ರೈತರಿಗೆ ಪರಿಹಾರ ಸಿಗಲು ಶ್ರಮಿಸಿ. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿ, ಅವರಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಹೇಳಿದರು.

 

ಬಿಜೆಪಿ ಆಡಳಿತದಲ್ಲಿ ರಾಜ್ಯದ ಅನ್ನದಾತ ಅನಾಥನಾಗಿದ್ದಾನೆ. ಕೋವಿಡ್ ಸಮಯದಲ್ಲಿ ಬೆಳೆಗೆ ಮಾರುಕಟ್ಟೆ ಕಲ್ಪಿಸದ ಬಿಜೆಪಿ ಸರಕಾರ ರೈತರನ್ನು ನಡುನೀರಲ್ಲಿ ಕೈಬಿಟ್ಟಿತ್ತು. ಬರೀ ಬಾಯಿ ಮಾತಲ್ಲಿ ಪರಿಹಾರ ಘೋಷಿಸಿ ಅದು ರೈತರ ಕೈ ಸೇರದಂತೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ನಿರಂತರ ನೆರೆ ಬಂದರೂ ಸರಿಯಾಗಿ ಪರಿಹಾರ ನೀಡದೆ ರೈತರ ಜೀವ ಹಿಂಡುತ್ತಿದೆ ಎಂದು ಶಿವಕುಮಾರ್ ಕಿಡಿಗಾರಿದರು.

 

ಈ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರ ಬೆಳೆ ಜಮೀನಿನಲ್ಲೇ ನೀರು ಪಾಲಾಗಿದೆ. ಲಕ್ಷಾಂತರ ಹೆಕ್ಟೇರ್‍ನಲ್ಲಿ ಬೆಳೆದ ಭತ್ತ, ರಾಗಿ, ಮೆಕ್ಕೆಜೋಳ, ತರಕಾರಿ, ಹಣ್ಣು, ಕಾಫಿ ಮತ್ತಿತರ ಬೆಳೆಗಳು ಕಟಾವಿನ ಸಮಯದಲ್ಲಿ ಮಳೆಯಿಂದಾಗಿ ಕೊಳೆಯುತ್ತಿವೆ. ಈ ವರ್ಷ ಮುಂಗಾರು ವೇಳೆ ಬಂದ ನೆರೆಗೆ ಹಾನಿಯಾದ ಬೆಳೆಗೆ ಸರಕಾರ ಘೋಷಿಸಿದ ಪರಿಹಾರ ಇನ್ನೂ ರೈತರಿಗೆ ಸಿಕ್ಕಿಲ್ಲ ಎಂದು ಅವರು ದೂರಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version