ಸುಶಿಕ್ಷಿತ ಮಹಿಳಾವರ್ಗದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ: ರಾಘವೇಂದ್ರ ಶೆಟ್ಟಿಗಾರ್ 

ಸುಶಿಕ್ಷಿತ ಮಹಿಳಾವರ್ಗದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ: ರಾಘವೇಂದ್ರ ಶೆಟ್ಟಿಗಾರ್ .

 

ತುಮಕೂರು: ಉತ್ತಮ ಶಿಕ್ಷಣ ಪಡೆದ ಸುಶಿಕ್ಷಿತ ಮಹಿಳಾ ವರ್ಗದಿಂದ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ರಾಘವೇಂದ್ರ ಶೆಟ್ಟಿಗಾರ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿoದು ‘ಕಾನೂನು ಅರಿವಿನ ಮುಖಾಂತರ ಮಹಿಳಾ ಸಬಲೀಕರಣ’ ಕುರಿತು ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು, ಗೌರವಿಸುವುದು ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮಹಿಳೆ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನಿರ್ಮೂಲನೆ ಮಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರಲ್ಲದೆ ಜೀವನದಲ್ಲಿ ಶಿಕ್ಷಣ, ಧ್ಯಾನ, ಮಿತ ಮಾತು ಹಾಗೂ ಸದಾ ಜಾಗೃತಿ ಈ ೪ ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಸ್ವಾಸ್ಥö್ಯ ಸಮಾಜವನ್ನು ಕಟ್ಟಬಹುದು. ಈ ಮೂಲಕ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವಾರು ಕಾನೂನು ಜಾರಿಯಲ್ಲಿದ್ದರೂ ದೌರ್ಜನ್ಯವನ್ನು ಸಂಪೂರ್ಣವಾಗಿ ತೊಡೆದು ಹಾಕಲಾಗುತ್ತಿಲ್ಲ ಎಂಬುದು ವಿಷಾದನೀಯ ಎಂದರು.

ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ಇಲಾಖೆ ವತಿಯಿಂದ ವಿವಿಧ ರೀತಿಯ ಪ್ರೋತ್ಸಾಹಧನ ನೀಡಲಾಗುತ್ತಿದೆ. ಅಂತರ್ಜಾತಿ ವಿವಾಹ, ವಿಧವಾ ವಿವಾಹ ಸೇರಿದಂತೆ ಸಾಮೂಹಿಕ ವಿವಾಹಗಳಿಗೆ ಧನ ಸಹಾಯ ಮಾಡುವ ಮೂಲಕ ಮಹಿಳೆಯರನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಹೆಣ್ಣೆಂದರೆ ಕೇವಲ ಸಾಂಸಾರಿಕ ಜೀವನಕ್ಕೆ ಸೀಮಿತ ಎನ್ನುವ ಕಾಲ ಸರಿದು ಪುರುಷ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.

‘ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಕಾರ್ಯ ನಿರ್ವಹಿಸದ ಕ್ಷೇತ್ರವಿಲ್ಲ’ ಎಂಬ ಮಾತನ್ನು ತಮ್ಮ ಜೀವನದಲ್ಲಿ ಅಡವಳಿಸಿಕೊಂಡು ಸುಸಂಸ್ಕೃತ ವ್ಯಕ್ತಿತ್ವದಿಂದ ಸಮಾಜಕ್ಕೆ ಮಾದರಿಯಾಗಬೇಕು. ಪ್ರತಿಯೊಂದು ಹೆಣ್ಣು ಒಂದೊoದು ಶಕ್ತಿಯಾಗಿ ರೂಪುಗೊಳ್ಳಬೇಕು ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ. ಉದೇಶ್ ಮಾತನಾಡಿ ಸಮಾಜದಲ್ಲಿ ಮಹಿಳೆಯ ಅಸ್ತಿತ್ವವು ಮಹಿಳಾ ಸಬಲೀಕರಣದ ಮೇಲೆ ಅವಲಂಬಿತವಾಗಿದೆ. ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳಲು ಸಮರ್ಥವಾಗುವುದೇ ಸಬಲೀಕರಣ. ಮಹಿಳೆಯ ವೈಯಕ್ತಿಕ ಅಭಿಪ್ರಾಯಗಳೂ ಸಹ ಸಮಾಜದ ಒಳಿತಿಗೆ ಪೂರಕವಾಗಬೇಕು ಎಂದು ಸಲಹೆಯಿತ್ತರೆ.

ವಿದ್ಯೋದಯ ಕಾನೂನು ಕಾಲೇಜಿನ ಸಹಾಯಕ ಪ್ರಾಚಾರ್ಯರಾದ ದ್ಯಾನ ಬಸವರಾಜು ಅವರು ‘ಮಹಿಳೆಯರ ಆಸ್ತಿ ಹಕ್ಕುಗಳು’ ಮತ್ತು ವಕೀಲರಾದ ಬೇಬಿ ಕವಿತಾ ಅವರು ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ಸಂರಕ್ಷಣಾ ಕಾಯ್ದೆ, ಪೋಕ್ಸೋ ಕಾಯ್ದೆ, ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ’ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅಭ್ಯುದಯ ಸೇವಾ ಟ್ರಸ್ಟ್ನ ಸಮಾಜ ಸೇವಕಿ ಲಲಿತಾ ಮಲ್ಲಪ್ಪ, ಪೊಲೀಸ್ ಇಲಾಖೆ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version