ಕೋವಿಡ್, ಡೆಂಗ್ಯೂ ಅಧಿಕವಾಗಿ ವರದಿಯಾಗುತ್ತಿರುವ 11 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
ಹೊಸದಿಲ್ಲಿ : ಹೆಚ್ಚು ಅಪಾಯಕಾರಿ ಕೋವಿಡ್, ಡೆಂಗ್ಯೂ ಪ್ರಕರಣಗಳು ಅಧಿಕವಾಗಿ ವರದಿಯಾಗುತ್ತಿರುವ 11 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿ, ಆರಂಭದಲ್ಲೇ ರೋಗ ಪತ್ತೆ ನಡೆಸುವ ಜತೆಗೆ ಜ್ವರ ಸಹಾಯವಾಣಿಗಳನ್ನು ಆರಂಭಿಸುವಂತೆ, ಸಾಕಷ್ಟು ಪರೀಕ್ಷಾ ಕಿಟ್‌ಗಳನ್ನು ಮತ್ತು ಔಷಧಿಗಳನ್ನು ದಾಸ್ತಾನು ಮಾಡುವಂತೆ ಸಲಹೆ ಮಾಡಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ಈ ಸೂಚನೆಗಳನ್ನು ನೀಡಿದ್ದು, ಸೊಳ್ಳೆಯಿಂದ ಹರಡುವ ಡೆಂಗ್ಯೂ ಸಾಂಕ್ರಾಮಿಕಕ್ಕೆ ಕಾರಣವಾಗುವ ನಾಲ್ಕು ಬಗೆಯ ವೈರಸ್‌ಗಳು ಪತ್ತೆಯಾಗಿವೆ. ಡಿಇಎನ್‌ವಿ-2 ಹೆಚ್ಚು ತೀವ್ರ ಅಸ್ವಸ್ಥತೆಗೆ ಕಾರಣವಾಗುವ ವೈರಸ್ ಆಗಿದ್ದು, ಆಂತರಿಕ ಸ್ರಾವ ಮತ್ತು ಆಘಾತದಿಂದ ಮಾರಕವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಬ್ಬದ ಸೀಸನ್‌ನಲ್ಲಿ ಹೆಚ್ಚು ನಿಯಂತ್ರಣಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ, ಶಾಲೆಗಳು ಆರಂಭವಾಗುತ್ತಿದ್ದಂತೇ ಮಕ್ಕಳನ್ನು ಬಾಧಿಸುವ ಸೋಂಕಿನ ಬಗ್ಗೆ ಹೆಚ್ಚು ನಿಗಾ ವಹಿಸುವಂತೆ ಕೋವಿಡ್-19 ಪರಿಸ್ಥಿತಿಯ ಪರಿಶೀಲನೆ ವೇಳೆ ಸೂಚಿಸಲಾಗಿದೆ.
ಡೆಂಗ್ಯೂ ನಿಯಂತ್ರಣಕ್ಕಾಗಿ ಕ್ಷಿಪ್ರ ಸ್ಪಂದನೆ ತಂಡಗಳನ್ನು ನಿಯೋಜಿಸುವಂತೆ ರಾಜ್ಯಗಳಿಗೆ ಸಲಹೆ ಮಾಡಲಾಗಿದೆ. ಈ ತಂಡಗಳು ಹೊಸ ಪ್ರಕರಣಗಳನ್ನು ಪ್ರಾಮಾಣಿಕವಾಗಿ ಪತ್ತೆ ಮಾಡಬೇಕು ಹಾಗೂ ಈ ಪ್ರದೇಶಗಳ ಜನರ ಸಂಪರ್ಕ ಪತ್ತೆ, ಸೊಳ್ಳೆ ನಿಯಂತ್ರಣ, ಸರ್ವೇಕ್ಷಣೆಯಂಥ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಸಾಕಷ್ಟು ರಕ್ತ ಹಾಗೂ ರಕ್ತದ ಪ್ಲೇಟ್ಲೆಟ್‌ಗಳನ್ನು ದಾಸ್ತಾನು ಇಡುವಂತೆಯೂ ಸಲಹೆ ಮಾಡಲಾಗಿದೆ.
ಸ್ಟೀರಿಯೊಟೈಪ್-2 ಡೆಂಗ್ಯೂ ಪ್ರಕರಣಗಳು ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು ಹಾಗೂ ತೆಲಂಗಾಣದಿಂದ ಅಧಿಕವಾಗಿ ವರದಿಯಾಗುತ್ತಿವೆ.