ರಾಜ್ಯದಲ್ಲಿ ಉತ್ಪಾದಿಸುವ ಆಮ್ಲಜನಕ ರಾಜ್ಯದಲ್ಲೇ ಬಳಕೆಗೆ ಕೇಂದ್ರದ ತಾತ್ವಿಕ ಒಪ್ಪಿಗೆ: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌

 

 

ರಾಜ್ಯದಲ್ಲಿ ಉತ್ಪಾದಿಸುವ ಆಮ್ಲಜನಕ ರಾಜ್ಯದಲ್ಲೇ ಬಳಕೆಗೆ ಕೇಂದ್ರದ ತಾತ್ವಿಕ ಒಪ್ಪಿಗೆ: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌

 

ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸುವ ಭರವಸೆ

ರಾಜ್ಯಕ್ಕೆ ಇನ್ನೂ ಹೆಚ್ಚಿನ ಆಮ್ಲಜನಕ ನಿಗದಿಗೊಳಿಸುವ ಭರವಸೆ

 

ಬೆಂಗಳೂರು: ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಕೆಗೆ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿದ್ದು ಅಧಿಕೃತ ಆದೇಶ ಸದ್ಯದಲ್ಲೇ ಹೊರಬೀಳಲಿದೆ ಎಂದು *ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ಮತ್ತು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ತಿಳಿಸಿದರು.

ಇಂದು ವಿಧಾನಸೌಧದಲ್ಲಿ ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಸಚಿವ ಜಗದೀಶ್‌ ಶೆಟ್ಟರ್‌ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಸಚಿವರುಗಳಾದ ಪಿಯೂಶ್‌ ಗೋಯೆಲ್‌, ಪ್ರಹ್ಲಾದ್‌ ಜೋಶಿ ಹಾಗೂ ಸದಾನಂದಗೌಡ ಅವರೊಂದಿಗೆ ಹಲವಾರು ಹಂತದಲ್ಲಿ ಮಾತುಕತೆಯನ್ನು ನಡೆಸಿದ್ದೇವು. ಅಲ್ಲದೆ, ಹಲವಾರು ಪತ್ರಗಳನ್ನು ಬರೆಯಲಾಗಿತ್ತು. ಈ ಮಾತುಕತೆ ಮತ್ತು ಸಮಾಲೋಚನೆಗೆ ಫಲ ದೊರೆತಿದೆ. ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕ ವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ತಾತ್ವಿಕ ಒಪ್ಪಿಗೆಯನ್ನು ನೀಡಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ ಎಂದು ಹೇಳಿದರು.

 

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬಹಳಷ್ಟು ನೆರವು ದೊರಕುತ್ತಿದೆ. ಕೇಂದ್ರ ಸರಕಾರ ಬಹ್ರೇನ್‌ ಮತ್ತು ಕುವೈತ್‌ ನಿಂದ 180 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ರಾಜ್ಯಕ್ಕೆ ನೀಡಿದೆ. ಅಲ್ಲದೆ, ರೈಲು ಮೂಲಕ ಮೇ 11 ರಂದು ಜಮ್‌ಶೇಡ್‌ಪುರದಿಂದ 120 ಎಂ.ಟಿ, ಮೇ 15 ರಂದು ಕಳಿಂಗಾನಗರದಿಂದ 180 ಎಂ.ಟಿ ಆಮ್ಲಜನಕ ಸರಬರಾಜು ಆಗಿದೆ. ಅಲ್ಲದೆ, ಮುಂದಿನ ಒಂದು ವಾರದಲ್ಲಿ ಸುಮಾರು 320 ದ್ರವೀಕೃತ ಆಮ್ಲಜನಕ ರವಾನೆ ಆಗುವ ನಿರೀಕ್ಷೆ ಇದೆ. 200 ಸಿಲಿಂಡರ್‌ಗಳನ್ನು ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿದೆ. ರಾಜ್ಯದಿಂದ ತೆಲಂಗಾಣಕ್ಕೆ ರವಾನೆ ಆಗುತ್ತಿರುವ 145 ಎಂ.ಟಿ, ಆಂಧ್ರಪ್ರದೇಶಕ್ಕೆ 63 ಎಂ.ಟಿ ಮತ್ತು ಮಹರಾಷ್ಟ್ರಕ್ಕೆ 40 ಎಂ.ಟಿಗಳಷ್ಟು ರವಾನೆ ಮಾಡಲಾಗುತ್ತಿದೆ. ಇದನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅನುವು ಮಾಡಿಕೊಡಲು ಕೇಂದ್ರ ಸರಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಅಧಿಕೃತ ಆದೇಶ ಹೊರಬಿದ್ದ ನಂತರ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಹಂಚಿಕೆ ಆಗಿರುವ ಆಮ್ಲಜನಕ ಸಾಗಾಣಿಕೆಯಲ್ಲಿ ಆಗುತ್ತಿರುವ ವಿಳಂಬ ತಪ್ಪುತ್ತದೆ ಎಂದು ಹೇಳಿದರು.

 

ಆಯಾ ಜಿಲ್ಲೆಗಳಲ್ಲಿ ಇರುವ ಸಕ್ರೀಯ ಪ್ರಕರಣಗಳ ಆಧಾರದ ಮೇಲೆ ಆಮ್ಲಜನಕವನ್ನು ಹಂಚಿಕೆ ಮಾಡಲಾಗುತ್ತಿದೆ. ರಾಜ್ಯಕ್ಕೆ 1400 ರಿಂದ 1700 ಮೆಟ್ರಿಕ್‌ ಟನ್‌ಗಳಷ್ಟು ಆಮ್ಲಜನಕದ ಅವಶ್ಯಕತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಕಳೆದ 7 ದಿನಗಳಲ್ಲಿ ಸರಾಸರಿ 880 ಮೆಟ್ರಿಕ್‌ ಟನ್‌ನಷ್ಟು ಬಳಕೆ ಆಗುತ್ತಿದೆ. ಅಲ್ಲದೆ, ನಿನ್ನೆ 66.7 (18-05-2021) ಮೆಟ್ರಿಕ್‌ ಟನ್‌ ನಷ್ಟು ಕೊರತೆಯೂ ಕಂಡುಬಂದಿದೆ ಎಂದರು.

 

*ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆ ಹೆಚ್ಚಿಸಲು ಕ್ರಮಗಳು:*

ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆ ಹಾಗೂ ನೈಟ್ರೋಜನ್‌ ಪಿಎಸ್‌ಎ ಉತ್ಪಾದನಾ ಘಟಕಗಳನ್ನು ಆಮ್ಲಜನಕ ಉತ್ಪಾದನೆಗೆ ಪರಿವರ್ತಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋಲಾರ ಮತ್ತು ಯಾದಗಿರಿ ಜಿಲ್ಲೆಯಲ್ಲಿ 1000 ಎಲ್‌ಪಿಎಂ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲಾಗಿದೆ. ಭಾರತ ಸರಕಾರ, ಕರ್ನಾಟಕ ಸರಕಾರ ಮತ್ತು ಸಾರ್ವಜನಿಕ ಉದ್ದಿಮೆಗಳ ಸಹಕಾರದಿಂದ ಒಟ್ಟಾರೆಯಾಗಿ 104 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲಿದ್ದೇವೆ. ರಾಯಚೂರಿನಲ್ಲಿ ನೈಟ್ರೂಜನ್‌ ಪಿಎಸ್‌ಎ ಉತ್ಪಾದನಾ ಘಟಕವನ್ನು ಪರಿವರ್ತಿಸಿ ಜಿಲ್ಲಾ ಆಸ್ಪತ್ರೆಗೆ ಅಳವಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದರು ಹೇಳಿದರು.

 

  1. ರಾಜ್ಯದಲ್ಲಿ ನಿಷ್ಕ್ರೀಯವಾಗಿರುವ ಆಮ್ಲಜನಕ ಉತ್ಪಾದನಾ ಘಟಕಗಳ ಪುನರುಜ್ಜೀವನ:

ರಾಜ್ಯದಲ್ಲಿ ನಿಷ್ಕ್ರೀಯವಾಗಿರುವ ಆಮ್ಲಜನಕ ಉತ್ಪಾದನಾ ಘಟಕಗಳ ಪುನರುಜ್ಜೀವನ ಕಾರ್ಯವನ್ನು ನಡೆಸಲಾಗುತ್ತಿದೆ. ರಾಯಚೂರಿನ ಕೆಪಿಸಿಎಲ್‌ ಬಾಟ್ಲಿಂಗ್‌ ಆಕ್ಸಿಜನ್‌ ಪ್ಲಾಂಟ್‌ ಹಾಗೂ ವಿಐಎಸ್‌ಎಲ್‌ ಗೆ ಅಗತ್ಯವಿರುವ ಕಂಪ್ರೆಸ್ಸರ್‌ ನ್ನು ಖರೀದಿಸುವ ಕೆಲಸವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

 

ಆಕ್ಸಿಜನ್‌ ಜನರೇಟರ್‌ ಯೂನಿಟ್‌ಗಳು:

ಕೇಂದ್ರ ಸರಕಾರದ ವತಿಯಿಂದ ರಾಜ್ಯಕ್ಕೆ 28, ಕರ್ನಾಟಕ ಸರಕಾರ 40, ಎನ್‌ಹೆಚ್‌ಎಐ – ಡಿಆರ್‌ಡಿಓ ಸಹಕಾರದಲ್ಲಿ 26 ಆಕ್ಸಿಜನ್‌ ಜನರೇಟರ್‌ ಗಳನ್ನು ರಾಜ್ಯದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

 

ಆಕ್ಸಿಜನ್‌ ಕಾನ್ಸನ್ಟ್ರೇಟರ್‌ಗಳು:

ರಾಜ್ಯಕ್ಕೆ 60 ಸಾವಿರ ಆಕ್ಸಿಜನ್‌ ಕಾನ್ಸನ್ಟ್ರೇಟರ್‌ಗಳ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರಕಾರ ಈಗಾಗಲೇ 3 ಸಾವಿರ ಕಾನ್ಸನ್ಟ್ರೇಟರ್‌ಗಳ ಖರೀದಿಗೆ ಟೆಂಡರ್‌ ನೀಡಿದೆ. ಕೇಂದ್ರ ಸರಕಾರ 800 ಕಾನ್ಸನ್ಟ್ರೇಟರ್‌ಗಳನ್ನು ನೀಡಿದ್ದು ಹಂತ ಹಂತವಾಗಿ ನೀಡುವ ನಿರೀಕ್ಷೆ ಇದೆ.

 

ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ ಕುಮಾರ್ ಖತ್ರಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಆರೋಗ್ಯ ಇಲಾಖೆ ಜಾವೇದ್‌ ಆಖ್ತರ್‌, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ಆಕ್ಸಿಜನ್ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ, ಕೆಐಎಡಿಬಿ ಸಿಇಓ ಡಾ ಶಿವಶಂಕರ್, ಡ್ರಗ್ಸ್ ಕಂಟ್ರೋಲರ್ ಅಮರೇಶ್ ತುಬಗಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version