ಉಪಚುನಾವಣೆ ಫಲಿತಾಂಶ: ಹಾನಗಲ್ ಸೋಲನ್ನು ಗೆಲುವಾಗಿ ಪರಿವರ್ತಿಸಲಾಗುವುದು; ಸಿಎಂ ಬೊಮ್ಮಾಯಿ

ಉಪಚುನಾವಣೆ ಫಲಿತಾಂಶ: ಹಾನಗಲ್ ಸೋಲನ್ನು ಗೆಲುವಾಗಿ ಪರಿವರ್ತಿಸಲಾಗುವುದು; ಸಿಎಂ ಬೊಮ್ಮಾಯಿ

 

 

ಮೈಸೂರು: ಸಿಂದಗಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿಗೆ ಹರ್ಷ ವ್ಯಕ್ತ ಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ ನಲ್ಲಿ ಅನುಭವಿಸಿರುವ ಸೋಲನ್ನು ಗಂಭೀರವಾಗಿ ಪರಿಗಣಿಸಿ ಸೋಲನ್ನು ಗೆಲುವಾಗಿ ಪರಿವರ್ತನೆ ಮಾಡಿಕೊಳ್ಳಲಾಗುವುದು ಎಂದು  ತಿಳಿಸಿದರು.

ಇಂದು ಮಂಡ್ಯ ಜಿಲ್ಲೆ ಕೃಷ್ಣರಾಜ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಉಪಚುನಾವಣೆಯ ಫಲಿತಾಂಶದ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು,  ಸಿಂದಗಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ನಮ್ಮ ಮತದಾರರಿಗೆ ಹಾಗೂ  ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾನಗಲ್‌ನಲ್ಲಿ ನಮ್ಮ ನಿರೀಕ್ಷೆ ಮಟ್ಟಕ್ಕೆ ಮತಗಳು ದೊರೆತಿಲ್ಲ.  ಮುಖ್ಯವಾಗಿ ಹಿರಿಯರಾದ ಸಿ.ಎಂ ಉದಾಸಿಯವರಿಗಿದ್ದ ಬೆಂಬಲವನ್ನು ನಾವು ಪಡೆಯಲು ಸಾಧ್ಯವಾಗಿಲ್ಲ. ಪಕ್ಷದ ಹಿರಿಯರು, ನಾಯಕರು ಹಾಗೂ ಪದಾಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಮುಖ್ಯಮಂತ್ರಿಗಳು ನುಡಿದರು

ಕಾಂಗ್ರೆಸ್  ಪಕ್ಷದ ಅಭ್ಯರ್ಥಿ  ಕೋವಿಡ್ ಸಂದರ್ಭದಲ್ಲಿ ಮಾಡಿದ ಕೆಲಸದಿಂದ  ಜನರು ಅವರ ಕೈಹಿಡಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.  ಈ ಚುನಾವಣೆಯ ಸೋಲನ್ನು ಗಂಭೀರವಾಗಿ ಪರಿಗಣಿಸಿ ಲೋಪಗಳನ್ನು ಸರಿಪಡಿಸಲಾಗುವುದೆಂದರು.

ಸಿಂದಗಿಯ ಫಲಿತಾಂಶಕ್ಕೆ ಹಣ ಹಂಚಿಕೆ ಕಾರಣ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಸೋತವರದ್ದು ಸಾಮಾನ್ಯವಾಗಿ ಒಂದೇ ಮಾದರಿಯ ಅನಿಸಿಕೆ ಇರುತ್ತದೆ, ಹಣಬಲ ತೋಳ್ಬಲ ಎನ್ನುತ್ತಾರೆ. ಜನಬೆಂಬಲ  ಇಲ್ಲದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದರು. ಸಾರ್ವತ್ರಿಕ ಚುನಾವಣೆಗೆ ಪಕ್ಷ ಎಲ್ಲ ರೀತಿಯ ಸಿದ್ಧತೆಮಾಡಿಕೊಳ್ಳುತ್ತದೆ. ಸಿಂಧಗಿಯಲ್ಲಿ ಗೆದ್ದಿದ್ದೇವೆ. ಗೆಲುವನ್ನು ಪರಿಗಣಿಸಿದಂತೆಯೇ ಸೋಲನ್ನು ಗಂಭೀರವಾಗಿ ಪರಿಗಣಿಸಲಾಗುವುದು.  ಚುನಾವಣೆಯಲ್ಲಿ ನಾನು ಸಹಕಾರ ಕೇಳಿದ್ದವರೆಲ್ಲರೂ, ನನಗೆ ಸಹಕಾರ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version