ಕೋವಿಡ್-19: ಮುಂದಿನ ತಿಂಗಳ ವೇಳೆಗೆ ಮಕ್ಕಳ ಲಸಿಕೆ ನಿರೀಕ್ಷೆ

ಕೋವಿಡ್-19: ಮುಂದಿನ ತಿಂಗಳ ವೇಳೆಗೆ ಮಕ್ಕಳ ಲಸಿಕೆ ನಿರೀಕ್ಷೆ

ಪುಣೆ : ಮಕ್ಕಳಿಗೆ ಕೊರೋನ ಸೋಂಕು ವಿರುದ್ಧ ಸುರಕ್ಷೆ ನೀಡುವ ಕೊವ್ಯಾಕ್ಸಿನ್‌ನ 2 ಮತ್ತು 3ನೇ ಹಂತದ ಪರೀಕ್ಷಾರ್ಥ ಪ್ರಯೋಗ ಇದೀಗ ನಡೆಯುತ್ತಿದ್ದು, ಸೆಪ್ಟೆಂಬರ್ ವೇಳೆಗೆ ಅಥವಾ ಆ ಬಳಿಕ ಈ ವಯೋವರ್ಗಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಐಸಿಎಂಆರ್- ರಾಷ್ಟ್ರೀಯ ವೈರಾಣು ಸಂಸ್ಥೆಯ ನಿರ್ದೇಶಕರಾದ ಡಾ.ಪ್ರಿಯಾ ಅಬ್ರಹಾಂ ಬಹಿರಂಗಪಡಿಸಿದ್ದಾರೆ.

 

2-18 ವರ್ಷ ವಯೋಮಿತಿಯವರಿಗಾಗಿ 2ನೇ ಹಂತದ ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿದೆ. ಫಲಿತಾಂಶ ಸದ್ಯವೇ ಲಭ್ಯವಾಗಲಿದೆ. ಇದನ್ನು ನಿಯಂತ್ರಣ ಸಂಸ್ಥೆಗೆ ಸಲ್ಲಿಸಲಾಗುವುದು. ಆದ್ದರಿಂದ ಸೆಪ್ಟೆಂಬರ್ ಮೊದಲು ಅಥವಾ ಬಳಿಕ ಮಕ್ಕಳಿಗೆ ಕೋವಿಡ್-19 ಲಸಿಕೆ ಲಭ್ಯವಾಗಬಹುದು. ಇದರ ಹೊರತಾಗಿ ಝೈದೂಸ್ ಕ್ಯಾಡಿಲ್ಲಾ ಮಕ್ಕಳ ಲಸಿಕೆ ಪ್ರಯೋಗ ಕೂಡಾ ನಡೆಯುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದರು.

 

ಝೈದೂಸ್ ಕ್ಯಾಡಿಲ್ಲಾ ಲಸಿಕೆ ಬಳಕೆಗಾಗಿ ಲಭ್ಯವಾಗಲಿರುವ ಮೊದಲ ಡಿಎನ್‌ಎ ಲಸಿಕೆಯಾಗಲಿದೆ. ಇದಕ್ಕೆ ಹೊರತಾಗಿ ಜೆನ್ನೋವಾ ಬಯೋ ಫಾರ್ಮಸ್ಯೂಟಿಕಲ್ಸ್ ಲಿಮಿಟೆಡ್‌ನ ಎಂ-ಆರ್‌ಎನ್‌ಎ ಲಸಿಕೆ, ಬಯೋಲಾಜಿಕಲ್-ಇ ಲಸಿಕೆ, ಸೆರೆಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ನೋವೋವ್ಯಾಕ್ಸ್ ಲಭ್ಯವಾಗಬಹುದು. ಇನ್ನೊಂದು ಕುತೂಹಲಕರ ಎನಿಸಿದ ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಲಸಿಕೆಯನ್ನು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿದೆ. ಇದನ್ನು ಚುಚ್ಚುಮದ್ದಾಗಿ ನೀಡುವ ಅಗತ್ಯವಿಲ್ಲ. ಮೂಗಿನ ಹೊಳ್ಳೆಗಳ ಮೂಲಕ ಇದನ್ನು ನೀಡಬಹುದಾಗಿದೆ ಎಂದು ವಿವರಿಸಿದರು.

ಡೆಲ್ಟಾ ಪ್ಲಸ್ ಪ್ರಬೇಧದ ವಿರುದ್ಧ ಪರಿಣಾಮಕಾರಿಯಾಗಿರುವ ಲಸಿಕೆ ಲಭ್ಯವಿದೆಯೇ ಎಂದು ಕೇಳಿದ ಪ್ರಶ್ನೆಗೆ, “ಡೆಲ್ಟಾ ಪ್ರಬೇಧಕ್ಕೆ ಹೋಲಿಸಿದರೆ ಡೆಲ್ಟಾ ಪ್ಲಸ್ ಹರಡುವ ಸಾಧ್ಯತೆ ಕಡಿಮೆ. ಪ್ರಸ್ತುತ ಇದು 130 ದೇಶಗಳಲ್ಲಿದೆ. ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು ಈ ಪ್ರಬೇಧದ ದಾಳಿಯನ್ನು ತಡೆದಿದೆ ಎನ್ನುವುದು ಎನ್‌ಐವಿ ಅಧ್ಯಯನದಿಂದ ತಿಳಿದುಬಂದಿದೆ. ಡೆಲ್ಟಾ ವಿರುದ್ಧ ಪ್ರತಿಕಾಯ ಫಲದಾಯಕತೆಯು 2 ರಿಂದ ಮೂರು ಪಟ್ಟು ಕಡಿಮೆಯಾಗುತ್ತದೆ. ಇಷ್ಟಾಗಿಯೂ ಲಸಿಕೆಗಳು ಈ ಪ್ರಬೇಧಗಳ ವಿರುದ್ಧ ಸುರಕ್ಷೆ ನೀಡುತ್ತವೆ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version