ಆರ್ಯನ್ ಖಾನ್‍ಗೆ ಪ್ರತಿ ವಾರ ಎನ್‍ಸಿಬಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದ ಬಾಂಬೆ ಹೈಕೋರ್ಟ್
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಸದ್ಯ ಜಾಮೀನಿನ ಮೇಲಿರುವ ಆರ್ಯನ್ ಖಾನ್ ಅವರು ಪ್ರತಿ ವಾರ ಮುಂಬೈಯಲ್ಲಿರುವ ನಾರ್ಕಾಟಿಕ್ಸ್ ಕಂಟ್ರೋಲ್ ಬ್ಯುರೋ ಕಚೇರಿಗೆ ಹಾಜರಾಗಬೇಕು ಎಂಬ ನಿಯಮದಿಂದ ಅವರಿಗೆ ಬಾಂಬೆ ಹೈಕೋರ್ಟ್ ವಿನಾಯಿತಿ ನೀಡಿದೆ. ಪ್ರತಿ ವಾರ ಎನ್‍ಸಿಬಿ ಕಚೇರಿಗೆ ಹಾಜರಾಗಬೇಕೆಂಬುದು ನಟ ಶಾರುಖ್ ಖಾನ್ ಅವರ ಪುತ್ರರಾಗಿರುವ ಆರ್ಯನ್ ಖಾನ್ ಅವರಿಗೆ ಜಾಮೀನು ನೀಡಲಾದ ಸಂದರ್ಭ ವಿಧಿಸಲಾಗಿದ್ದ ಷರತ್ತುಗಳಲ್ಲಿ ಒಂದಾಗಿತ್ತು.
ಆರ್ಯನ್ ಖಾನ್ ಅವರಿಗೆ ಅಕ್ಟೋಬರ್ 28ರಂದು ಜಾಮೀನು ಮಂಜೂರಾಗಿತ್ತು. ಅವರು ಪ್ರತಿ ಶುಕ್ರವಾರ ಬೆಳಿಗ್ಗೆ 11ರಿಂದ ಅಪರಾಹ್ನ 2 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕೆಂಬುದು ಜಾಮೀನು ಷರತ್ತುಗಳಲ್ಲಿ ಸೇರಿತ್ತು.
ತನಿಖೆಯನ್ನು ಎನ್‍ಸಿಬಿಯ ದಿಲ್ಲಿ ಘಟಕದ ವಿಶೇಷ ತನಿಖಾ ತಂಡಕ್ಕೆ ವಹಿಸಿರುವುದರಿಂದ ಈ ನಿಯಮದಿಂದ ತಮಗೆ ವಿನಾಯಿತಿ ನೀಡಬೇಕೆಂದು ಕೋರಿ ಆರ್ಯನ್ ಖಾನ್ ಅವರು ಡಿಸೆಂಬರ್ 10ರಂದು ಅಪೀಲು ಸಲ್ಲಿಸಿದ್ದರು. ಪ್ರತಿ ಬಾರಿ ಹಾಜರಾಗುವ ಸಂದರ್ಭವೂ ಅಲ್ಲಿ ಬಹಳಷ್ಟು ಮಾಧ್ಯಮ ಮಂದಿ ಇರುವುದರಿಂದ ತಾವು ಪೊಲೀಸ್ ರಕ್ಷಣೆಯಲ್ಲಿಯೇ ತೆರಳಬೇಕಾಗಿದೆ ಎಂದು ಅವರು ಹೇಳಿದ್ದರು.
ಅವರ ಅಪೀಲಿಗೆ ಎನ್‍ಸಿಬಿ ವಿರೋಧಿಸದೇ ಇದ್ದರೂ ವಿಶೇಷ ತನಿಖಾ ತಂಡ ಸಮನ್ಸ್ ಕಳುಹಿಸಿದಾಗಲೆಲ್ಲಾ ಅವರು ಪ್ರತಿಕ್ರಿಯಿಸಿದರೆ ಮಾತ್ರ ಅವರ ಮನವಿಗೆ ಒಪ್ಪಬೇಕೆಂದು ಎನ್‍ಸಿಬಿ ಹೇಳಿತ್ತು.