ಕೊಲ್ಕತ್ತಾ ಮುನಿಸಿಪಲ್ ಚುನಾವಣೆಗೆ ತಡೆ ಹೇರಲು ಬಿಜೆಪಿ ಮನವಿ: ನಿರಾಕರಿಸಿದ ಹೈಕೋರ್ಟ್
ಕೊಲ್ಕತ್ತಾ: ಡಿಸೆಂಬರ್ 19ರಿಂದ ನಡೆಯಲಿರುವ ಕೊಲ್ಕತ್ತಾ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಗೆ ತಡೆ ಹೇರಬೇಕೆಂದು ಕೋರಿ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಉಪಾಧ್ಯಕ್ಷ ಪ್ರತಾಪ್ ಬ್ಯಾನರ್ಜಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕೊಲ್ಕತ್ತಾ ಹೈಕೋರ್ಟ್, ಚುನಾವಣೆಗೆ ತಡೆ ಹೇರಲು ನಿರಾಕರಿಸಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ಜಸ್ಟಿಸ್ ರಾಜಶ್ರೀ ಭಾರದ್ವಾಜ್ ಅವರ ಪೀಠ ಇಂದು ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಬಾಕಿಯಿರುವ ಮುನಿಸಿಪಲ್ ಚುನಾವಣೆಗಳನ್ನು ಜತೆಯಾಗಿ ನಡೆಸಬೇಕೆಂದು ರಾಜ್ಯ ಸರಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.
ಡಿಸೆಂಬರ್ 6ರಂದು ಈ ಹಿಂದೆ ನಡೆದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ರಾಜ್ಯ ಚುನಾವಣಾ ಆಯೋಗ ರಾಜ್ಯದ 111 ಸ್ಥಳೀಯಾಡಳಿತಗಳಿಗೆ ಆರರಿಂದ ಎಂಟು ಹಂತಗಳ ಚುನಾವಣೆಯನ್ನು ಮೇ 2022ರೊಳಗಾಗಿ ನಡೆಸಲಾಗುವುದು, ಆದರೆ ಓಮಿಕ್ರಾನ್ ಭೀತಿ ಹಾಗೂ 10ನೇ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಗಮನದಲ್ಲಿರಿಸಿ ದಿನಾಂಕಗಳನ್ನು ನಂತರ ನಿರ್ಧರಿಸಲಾಗುವುದು ಎಂದು ತಿಳಿಸಿತ್ತು.
ಚುನಾವಣೆಗಳ ದಿನಾಂಕಗಳನ್ನು ಒದಗಿಸುವಂತೆ ಇಂದಿನ ವಿಚಾರಣೆ ವೇಳೆ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಆದರೆ ಕೊಲ್ಕತ್ತಾ ಮುನಿಸಿಪಲ್ ಚುನಾವಣೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ನ್ಯಾಯಾಲಯದ ಮುಂದಿರುವಾಗಲೇ ಚುನಾವಣಾ ಆಯೋಗ ಚುನಾವಣೆಗೆ ದಿನಾಂಕ ನಿಗದಿಪಡಿಸಿತ್ತು ಎಂದು ಬಿಜೆಪಿ ಇಂದು ಹೇಳಿದೆ.
ವಿಚಾರಣೆ ಡಿಸೆಂಬರ್ 23ರಂದು ಮುಂದುವರಿಯಲಿದೆ.