ಬಿಟ್‍ಕಾಯಿನ್ ಬಹುಕೋಟಿ ಪ್ರಕರಣ: ಬಾಹ್ಯ ಒತ್ತಡಗಳಿಗೆ ಮಣಿದಿಲ್ಲ; ಪೊಲೀಸರ ಸ್ಪಷ್ಟನೆ

ಬಿಟ್‍ಕಾಯಿನ್ ಬಹುಕೋಟಿ ಪ್ರಕರಣ: ಬಾಹ್ಯ ಒತ್ತಡಗಳಿಗೆ ಮಣಿದಿಲ್ಲ; ಪೊಲೀಸರ ಸ್ಪಷ್ಟನೆ

 

ಬೆಂಗಳೂರು, ‘ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಹ್ಯ ಒತ್ತಡಗಳಿಗೆ ಒಳಗಾಗಿ ತನಿಖೆ ನಡೆಸಿಲ್ಲ’ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯು ಸ್ಪಷ್ಟನೆ ನೀಡಿದೆ.

ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ನಡುವೆ ನಗರ ಪೊಲೀಸ್ ಆಯುಕ್ತರ ಕಚೇರಿಯು ಸ್ಪಷ್ಟನೆ ನೀಡಿದ್ದು, ಹ್ಯಾಕರ್ ಶ್ರೀಕೃಷ್ಣ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ತನಿಖೆ ನಡೆಸಿಲ್ಲ. ಹಗರಣ ಸಂಬಂಧ 3 ಠಾಣೆಗಳಲ್ಲಿ 2020ನೆ ಸಾಲಿನ ನ.4 ರಂದು ದಾಖಲಾಗಿತ್ತು. ಸೈಬರ್ ಕ್ರೈಂ, ಕೆ.ಜಿ.ನಗರ, ಅಶೋಕನಗರ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದ್ದು, ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ತಿಳಿಸಿದೆ.

ಕೆ.ಜಿ.ನಗರ ಠಾಣೆಯಲ್ಲಿ ದಾಖಲಾಗಿದ್ದ ದೂರಿನಿಂದ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಬಗ್ಗೆ ವಿಚಾರ ಬಯಲಾಗಿತ್ತು. 500 ಗ್ರಾಂ ಹೈಡ್ರೋ ಗಾಂಜಾ ಸಹಿತ ಓರ್ವ ಆರೋಪಿ ಸೆರೆ ಆಗಿದ್ದ. ಬಳಿಕ ಸೆರೆಯಾದ 10 ಜನ ಪೈಕಿ ಶ್ರೀಕಿ ಯಾನೆ ಶ್ರೀಕೃಷ್ಣ ಸಹ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಕ್ರಿಪ್ಟೋ ಕರೆನ್ಸಿ ವೆಬ್‌ಸೈಟ್ ಹ್ಯಾಕಿಂಗ್ ಬಗ್ಗೆ ಆತ ಮಾಹಿತಿ ನೀಡಿದ್ದ. ಬಳಿಕ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಬಳಿಕ ತನಿಖೆಯ ದೃಷ್ಟಿಯಿಂದ ಬಿಟ್ ಕಾಯಿನ್ ವ್ಯಾಲೆಟ್ ತೆರೆಯುವುದು ಅಗತ್ಯವಾಗಿತ್ತು. ಕೋರ್ಟ್ ಅನುಮತಿ ಪಡೆದು ಸೈಬರ್ ತಜ್ಞರ ಸಮ್ಮುಖದಲ್ಲಿ ವ್ಯಾಲೆಟ್ ತೆರೆದಿದ್ದೆವು. 31.8 ಬಿಟ್ ಕಾಯಿನ್ ಜಪ್ತಿಮಾಡಿ ಪಾಸ್‌ವರ್ಡ್ ಸಮೇತ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದೆ.

ಬಂಧಿತ ಆರೋಪಿಗಳು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಆದರೂ ಸಹ ಯಾವುದೇ ವಿದೇಶಿ, ಅಂತರ್‌ರಾಷ್ಟ್ರೀಯ ತನಿಖಾ ಸಂಸ್ಥೆ ನಮ್ಮನ್ನ ಸಂಪರ್ಕಿಸಿಲ್ಲ. ಆರೋಪಿ ಹೇಳಿಕೊಂಡಿರುವಂತೆ ಹ್ಯಾಕಿಂಗ್ ಆಗಿದೆ ಎನ್ನುವುದನ್ನು ಯಾರೊಬ್ಬರೂ ಖಚಿತಪಡಿಸಿಲ್ಲ ಎಂದು ಆಯುಕ್ತರ ಕಚೇರಿಯೂ ಸ್ಪಷ್ಟನೆ ನೀಡಿದೆ.

ಸೈಬರ್ ತಜ್ಞರ ಸಲಹೆ ಪಡೆದಾಗ ಆರೋಪಿ ಹೇಳಿರುವ ಸಾಕಷ್ಟು ವಿಚಾರ ಆಧಾರರಹಿತ ಎಂದು ಸಾಬೀತಾಗಿದೆ. ಪ್ರಕರಣ ದಾಖಲಾಗಿ 1 ವರ್ಷವೇ ಕಳೆದಿದೆ. ಬಿಟ್ ಕಾಯಿನ್ ಅಥಾರಿಟಿ ಸಹ ನಮ್ಮನ್ನು ಸಂಪರ್ಕಿಸಿಲ್ಲ. ಮುಖ್ಯವಾಗಿ ಆರೋಪಿ ಸಾಕಷ್ಟು ವೆಬ್‌ಸೈಟ್ ಹ್ಯಾಕ್ ಮಾಡಿರುವುದಾಗಿ ಸ್ವಯಂ ಹೇಳಿಕೆ ನೀಡಿದ್ದಾನೆ. ಆದರೆ, ಯಾವುದೇ ಹೆಚ್ಚಿನ ಮಾಹಿತಿಯನ್ನು ಆರೋಪಿ ನೀಡಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಇಂಟರ್‌ಪೋಲ್‌ಗೆ ಮನವಿ ಮಾಡಲಾಗಿದೆ. ವರದಿ ಬಂದ ಬಳಿಕ ಪ್ರಕರಣಕ್ಕೆ ತಾರ್ಕಿಕವಾಗಿ ಅಂತ್ಯ ಸಿಗಲಿದೆ. ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಶ್ರೀಕೃಷ್ಣನ ಬಂಧನದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ. ಆತನ ಬಳಿ ಪತ್ತೆಯಾದ ಮಾದಕ ವಸ್ತು ಕುರಿತು ತನಿಖೆಗೆ ಕಸ್ಟಡಿಗೆ ಕೇಳಲಾಗಿತ್ತು. ರಕ್ತ ಮತ್ತು ಮೂತ್ರದ ಮಾದರಿ ಪಡೆಯಲು ಅನುಮತಿ ಪಡೆಯಲಾಗಿತ್ತು. ವಿಕ್ಟೋರಿಯಾದಲ್ಲಿ ಸಾಧ್ಯವಾಗದ ಕಾರಣ ಬೌರಿಂಗ್‌ನಲ್ಲಿ ಪರೀಕ್ಷೆ ನಡೆಸಲಾಗಿದೆ. ರಕ್ತ ಮತ್ತು ಮೂತ್ರದ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿತ್ತು. ಆದರೆ, ವರದಿಯೂ ನೆಗೆಟಿವ್ ಬಂದಿರುತ್ತದೆ. ನಂತರ ಆತನ ಬಂಧನದ ವಿಚಾರವಾಗಿ ರಿಟ್ ಅರ್ಜಿ ಹಾಕಲಾಗಿತ್ತು. ರಿಟ್ ಅರ್ಜಿ ಸಲ್ಲಿಸಿದವರಿಗೆ 5 ಸಾವಿರ ದಂಡ ವಿಧಿಸಿ ಶ್ರೀಕೃಷ್ಣನ ಬಿಡುಗಡೆಯಾಗಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

► ‘ಬಿಟ್ ಕಾಯಿನ್ ವ್ಯಾಲೆಟ್ ಇರಲಿಲ್ಲ’

ಬಿಟ್ ಕಾಯಿನ್ ವರ್ಗಾವಣೆಗಾಗಿ ನ್ಯಾಯಾಲಯದ ಅನುಮತಿ ಪಡೆದು ವ್ಯಾಲೆಟ್ ತೆರೆದಾಗ 186.811 ಬಿಟ್ ಕಾಯಿನ್ ಪತ್ತೆಯಾಗಿದೆ. ಆದರೆ, ಆರೋಪಿ ಶ್ರೀಕೃಷ್ಣನ ಬಳಿ ಸ್ವಂತ ಬಿಟ್ ಕಾಯಿನ್ ವ್ಯಾಲೆಟ್ ಇರಲಿಲ್ಲ. ಆತನಿಂದ ವಶಕ್ಕೆ ಪಡೆದಿದ್ದು ಲೈವ್ ವ್ಯಾಲೆಟ್ ಆಗಿರುತ್ತದೆ. ಇನ್ನು, ಆ ಲೈವ್ ವ್ಯಾಲೆಟ್‌ನ ಕೀ ಸಹ ಆರೋಪಿ ಬಳಿ ಪತ್ತೆಯಾಗಿರುವುದಿಲ್ಲ. ಹಾಗಾಗಿ ವಶಪಡಿಸಿಕೊಂಡ ವ್ಯಾಲೆಟ್ ಹಾಗೆಯೇ ಬಿಡಲಾಗಿರುತ್ತದೆ. ಈ ಎಲ್ಲ ವಿವರಣೆಗಳ ಸಹಿತ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯು ಮಾಹಿತಿ ನೀಡಿದೆ.

► ‘ಬಿಟ್ ಕಾಯಿನ್ ವರ್ಗಾವಣೆ ಆಧಾರ ರಹಿತ’

ಪೊಲೀಸ್ ಸಿಬ್ಬಂದಿ, ನುರಿತ ಸೈಬರ್ ತಜ್ಞರನ್ನ ಒಳಗೊಂಡಂತೆ ತನಿಖೆ ನಡೆಸಲಾಗಿದೆ. ತನಿಖೆಯ ಪ್ರತೀ ಹಂತದಲ್ಲಿಯೂ ವೀಡಿಯೊ ಚಿತ್ರೀಕರಣ ಮಾಡಲಾಗಿದೆ. ವೇಲ್ ಅಲರ್ಟ್‌ನಲ್ಲಿ 14,682 ಬಿಟ್ ಕಾಯಿನ್ ವರ್ಗಾವಣೆ ಆಗಿದೆ ಎಂದಿರುವುದು ಆಧಾರ ರಹಿತ. ಈ ನೆಲದ ಕಾನೂನಿನಂತೆ ನಿಷ್ಪಕ್ಷ ತನಿಖೆ ಮಾಡಲಾಗಿದೆ. ನಿರ್ದಿಷ್ಟವಲ್ಲದ, ಸಾಮಾಜಿಕ ಜಾಲತಾಣದ ಆರೋಪಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯು ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version