ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಡಿಸೆಂಬರ್ 12 ರಂದು ನಡೆಯಲಿರುವ ಚುನಾವಣೆಗೆ ತುಮಕೂರು ಜಿಲ್ಲೆಯಿಂದ ಬೆಳ್ಳಿ ಲೋಕೇಶ್ ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಹಕಾರ ಸಂಘಗಳ ಉಪನಿಬಂಧಕ ಕಾಂತರಾಜು ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಬೆಳ್ಳಿ ಲೋಕೇಶ್, 1906ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಒಕ್ಕಲಿಗರ ಸಂಘವನ್ನು ಸ್ಥಾಪಿಸಿ ಸೇವೆ ಮಾಡಲು ಅನುವು ಮಾಡಿಕೊಟ್ಟಂತಹ ಮಹಾನ್ ಚೇತನಗಳನ್ನು ನೆನೆಯುತ್ತಾ 110 ವರ್ಷಕ್ಕಿಂತ ಮಿಗಿಲಾದ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರಿಗಷ್ಟೇ ಸೀಮಿತವಾಗಿದೆ. ಇದನ್ನು ವಿಸ್ತರಿಸಿ ಬೆಂಗಳೂರಿಗೆ ಸಹೋದರ ಜಿಲ್ಲೆಯಾದಂತಹ ತುಮಕೂರು ಜಿಲ್ಲೆಯಲ್ಲಿ ಕಿಮ್ಸ್ ಆಸ್ಪತ್ರೆಯನ್ನು ತೆರೆಯಬೇಕೆಂಬ ಉದ್ಧೇಶವನ್ನು ಹೊಂದಿರುವುದಾಗಿ ತಿಳಿಸಿದರು.
ಸ್ನೇಹಿತರ ಮತ್ತು ಒಕ್ಕಲಿಗರ ಸಂಘದ ಬಂಧುಗಳ ಜೊತೆ ಚರ್ಚಿಸಿದಾಗ ಕಿಮ್ಸ್ ಆಸ್ಪತ್ರೆಯನ್ನು ತುಮಕೂರು ಜಿಲ್ಲೆಗೆ ತರಬೇಕೆಂದರೆ ರಾಜ್ಯ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದರೆ ಮಾತ್ರ ತರಬಹುದೆಂಬ ಅಭಿಪ್ರಾಯ ಬಂದಾಗ ತುಮಕೂರಿಗೆ ಕಿಮ್ಸ್ ಆಸ್ಪತ್ರೆಯನ್ನು ತಂದು ಬಡವರಿಗೆ, ರೈತಾಪಿವರ್ಗ ಹಾಗೂ ಜಿಲ್ಲೆಯ ಸಾರ್ವಜನಿಕರಿಗೆ ಚಿಕಿತ್ಸೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾನು ತುಮಕೂರು ಜಿಲ್ಲೆಯಿಂದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದರು.
ಈ ಹಿಂದೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಂತಹ ಮತ್ತು ಪೂರಕವಾಗಿದ್ದಂತಹ ಹಾಗೂ ಹಿರಿಯರು ಹಾಲಿ ಮತ್ತು ಮಾಜಿ ನಿರ್ದೇಶಕರುಗಳನ್ನು ಕೇಳಿಕೊಂಡಾಗ ಸಮಯ ಮೀರಿತ್ತು. ಅಧಿಕಾರಾವಧಿ ಮುಗಿದಿತ್ತು. ಆದರೆ ಈಗ ಹೋರಾಟ ಮಾಡಿ ಕಿಮ್ಸ್ ಆಸ್ಪತ್ರೆಯನ್ನು ಜಿಲ್ಲೆಗೆ ತರಬೇಕಾಗಿದೆ. ಅದಕ್ಕಾಗಿ ನಾನು ನಿರ್ದೇಶಕನಾಗಿ ಹೋದರೆ ಮಾತ್ರ ಸಾಧ್ಯ ಎಂಬ ಭಾವನೆ ಎಲ್ಲರಲ್ಲಿಯೂ ಮೂಡಿರುವುದರಿಂದ ನಾನೇ ನಿರ್ದೇಶಕನಾಗಿ ಹೋಗಿ ಕಿಮ್ಸ್ ಆಸ್ಪತ್ರೆ ತರಬೇಕೆಂದು ಜಿಲ್ಲೆಯ ಎಲ್ಲಾ ಸ್ನೇಹಿತರ ವರ್ಗ ಮತ್ತು ಒಕ್ಕಲಿಗ ಸಮಾಜದ ಬಾಂಧವರು ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.
ಒಕ್ಕಲಿಗರ ಸಂಘದ ಸದಸ್ಯರಾಗಿ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಕುಟುಂಬದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡುವಂತಹ ಕೆಲಸವಾಗಬೇಕು, ಪ್ರತೀ ತಾಲ್ಲೂಕಿನಲ್ಲೂ ಕೂಡಾ ಮಹಿಳಾ ಹಾಸ್ಟೆಲ್ ಮತ್ತು ಬಾಲಕರ ಹಾಸ್ಟೆಲ್ ನಿರ್ಮಾಣವಾಗಬೇಕು, ಕಡು ಬಡ ಮಕ್ಕಳಿಗೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಕುಟುಂಬದ ಮಕ್ಕಳಿಗೆ ಸೇವೆ ಮಾಡಲು ಪೂರಕವಾಗಿರುತ್ತದೆ, ಇದರ ಜೊತೆ ನನ್ನ ರೈತ ಕುಟುಂಬ, ನನ್ನ ಒಕ್ಕಲಿಗರ ಕುಟುಂಬ ನನ್ನ ಸಮಾಜದಲ್ಲಿ ತುಂಬಾ ಕಡುಬಡವರಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವಂತಹವರು ಹಠಾತ್ ನಿಧನರಾದರೆ ಅವರಿಗೆ ರಾಜ್ಯ ಒಕ್ಕಲಿಗರ ಸಂಘದಿಂದ ಸಹಾಯಧನ ಕೊಡುವ ವ್ಯವಸ್ಥೆಯಾಗಬೇಕೆಂಬ ಉದ್ಧೇಶವನ್ನಿಟ್ಟುಕೊಂಡು ನಾನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದರು.
ಜಿಲ್ಲೆಯ ಒಕ್ಕಲಿಗ ಸಮುದಾಯದ ಎಲ್ಲಾ ಮುಖಂಡರನ್ನು ಗೌರವ ಪೂರ್ವಕವಾಗಿ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ಆದುದರಿಂದ ಒಕ್ಕಲಿಗ ಸಮುದಾಯದ ಮತದಾರ ಬಂಧುಗಳು ರಾಜ್ಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನನ್ನು ತುಮಕೂರು ಜಿಲ್ಲೆಯಿಂದ ಆಯ್ಕೆಮಾಡಬೇಕೆಂದು ಬೆಳ್ಳಿ ಲೋಕೇಶ್ ಮನವಿ ಮಾಡಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಗರ ಕೋಟೆ ಆಂಜನೇಯಸ್ವಾಮಿ ಮತ್ತು ಪಂಚಮುಖಿ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಒಕ್ಕಲಿಗರ ಸಮುದಾಯದ ಅಪಾರ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸಹಕಾರ ಸಂಘಗಳ ಉಪನಿಬಂಧಕರಾದ ಕಾಂತರಾಜ್ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಈ ವೇಳೆ ಸಮಾಜದ ಮುಖಂಡರಾದ ದೊಡ್ಡಲಿಂಗಪ್ಪ, ಬೋರೇಗೌಡ, ರಾಮಚಂದ್ರಪ್ಪ, ದಿನೇಶ್ ಕೊಂಡ್ಲಿ ಕರಿಯಪ್ಪ, ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ರವಿ, ಉಪ್ಪಾರಹಳ್ಳಿ ಕುಮಾರ್, ಅಶ್ವತ್ಥ್, ಹನುಮಂತಣ್ಣ, ಲೋಕೇಶ್, ರಾಮಾಂಜಿನಿ, ಕುಮಾರ್‍ಗೌಡ, ಸಿದ್ಧಗಂಗಣ್ಣ, ಹರೀಶ್, ಬಾಲೇಗೌಡ್ರು, ಯಡಿಯೂರು ವೆಂಕಟೇಶ್, ಮಧುಗಿರಿ ಶ್ರೀನಿವಾಸ್, ಪಾವಗಡ ಗೋವರ್ಧನ್, ಕೊರಟಗೆರೆ ವೀರಕ್ಯಾತಯ್ಯ, ಪ್ರಕಾಶ್, ಜಯಂತ್‍ಗೌಡ, ಬೈರಾಪುರ ಶಂಕರ್ ಸೇರಿದಂತೆ ಒಕ್ಕಲಿಗರ ಸಂಘದ ಅಪಾರ ಬೆಂಬಲಿಗರು ಹಾಜರಿದ್ದರು.